ADVERTISEMENT

ರಾಮೇಶ್ವರಂ ಕೆಫೆ ಸ್ಫೋಟ | ಹಿಂದೂ ಹೆಸರು, ಕಲಬುರಗಿ ವಿಳಾಸ ನೀಡಿದ್ದ ಶಂಕಿತರು

* ಕ್ಯಾಪ್ ಸುಳಿವು, ಜೈಲಿನಲ್ಲಿದ್ದ ಶಂಕಿತರ ಮಾಹಿತಿ * ಪೂರ್ವ ಮೇದಿನಿಪುರದ ಹೋಟೆಲ್‌ನಲ್ಲಿ ತಂಗಿದ್ದರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಶಂಕಿತರಾದ ಅಬ್ದುಲ್ ಮಥೀನ್ ತಾಹಾ ಹಾಗೂ ಮುಸಾವೀರ್‌ನನ್ನು ಕೊಲ್ಕತ್ತಾ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಿದ್ದ ಎನ್‌ಐಎ ಅಧಿಕಾರಿಗಳು, ವಿಚಾರಣೆ ಬಳಿಕ ನ್ಯಾಯಾಲಯದಿಂದ ಕರೆದೊಯ್ದರು
ಶಂಕಿತರಾದ ಅಬ್ದುಲ್ ಮಥೀನ್ ತಾಹಾ ಹಾಗೂ ಮುಸಾವೀರ್‌ನನ್ನು ಕೊಲ್ಕತ್ತಾ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಿದ್ದ ಎನ್‌ಐಎ ಅಧಿಕಾರಿಗಳು, ವಿಚಾರಣೆ ಬಳಿಕ ನ್ಯಾಯಾಲಯದಿಂದ ಕರೆದೊಯ್ದರು   

ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿ ಪರಾರಿಯಾಗಿದ್ದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ, ಪಶ್ಚಿಮ ಬಂಗಾಳದ ಹೋಟೆಲ್‌ವೊಂದರಲ್ಲಿ ಕೊಠಡಿ ಪಡೆಯಲು ನಕಲಿ ವಿಳಾಸ ನೀಡಿದ್ದರು ಎಂಬುದು ತನಿಖೆಯಿಂದ ಪತ್ತೆಯಾಗಿದೆ.

‘ಕೋಲ್ಕತ್ತ ಮಹಾನಗರಕ್ಕೆ ಹೊಂದಿಕೊಂಡಿರುವ ಪೂರ್ವ ಮೇದಿನಿಪುರ ಜಿಲ್ಲೆಯ ಹೋಟೆಲ್‌ನಲ್ಲಿ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ತಂಗಿದ್ದರು. ಹೋಟೆಲ್‌ ಕೊಠಡಿಯಲ್ಲಿಯೇ ಇಬ್ಬರೂ ಸಿಕ್ಕಿಬಿದ್ದರು. ಇದೇ ಸಂದರ್ಭದಲ್ಲಿ ಹೋಟೆಲ್‌ ಗ್ರಾಹಕರ ಪಟ್ಟಿಯನ್ನು ಪರಿಶೀಲಿಸಿದಾಗ, ಅವರಿಬ್ಬರು ನಕಲಿ ಹೆಸರು ಹಾಗೂ ಅನ್ಯ ವಿಳಾಸ ಬರೆದಿದ್ದು ಗಮನಕ್ಕೆ ಬಂತು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ಅನಮೋಲ್ ಕುಲಕರ್ಣಿ (33) ತಂದೆ ಉದಯ್ ಕುಲಕರ್ಣಿ, ರಂಗ ನಿಲಯ, ವರದಾ ನಗರ, ಕಲಬುರಗಿ, ಕರ್ನಾಟಕ– ಆಧಾರ್ 8632 **** 2668’ ಎಂಬುದಾಗಿ ಶಂಕಿತನೊಬ್ಬ ಗ್ರಾಹಕರ ಪಟ್ಟಿಯಲ್ಲಿ ಹಿಂದೂ ಹೆಸರು ಬರೆದಿದ್ದ. ಇನ್ನೊಬ್ಬ ಶಂಕಿತ, ‘ಯೂಸ್ ಶಹನವಾಜ್ (30) ತಂದೆ ಹರೂನ್ ಪಟೇಲ್, ಠಾಣೆ, ಮಹಾರಾಷ್ಟ್ರ – ಆಧಾರ್ 5158 ****9147’ ಎಂದೂ ಬರೆದಿದ್ದ. ಜೊತೆಗೆ, ಇಬ್ಬರೂ ನಕಲಿ ಆಧಾರ್ ಕಾರ್ಡ್‌ ಸಹ ನೀಡಿದ್ದರು. ಈ ಬಗ್ಗೆ ಹೋಟೆಲ್‌ ಸಿಬ್ಬಂದಿಯಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ನಗರದಿಂದ ಪರಾರಿಯಾಗಿದ್ದ ಮುಸಾವೀರ್, ಗುರುತು ಸಿಗಬಾರದೆಂದು ತಲೆ ಬೋಳಿಸಿದ್ದ. ಹೋಟೆಲ್‌ನಲ್ಲಿ ಮುಸಾವೀರ್ ಸೆರೆ ಸಿಕ್ಕಾಗ, ಚಿಕ್ಕ ಕೂದಲುಗಳು ಇದ್ದವು. ಈ ಬಗ್ಗೆ ಪ್ರಶ್ನಿಸಿದಾಗ, ತಲೆ ಬೋಳಿಸಿರುವುದಾಗಿ ಆತ ಹೇಳಿಕೊಂಡ’ ಎಂದು ಮೂಲಗಳು ಮಾಹಿತಿ ನೀಡಿವೆ.

ಕ್ಯಾಪ್ ಸುಳಿವು, ಜೈಲಿನಲ್ಲಿದ್ದ ಶಂಕಿತರ ಮಾಹಿತಿ: ‘ಬಾಂಬ್ ಇರಿಸಲು ಬಂದಿದ್ದ ಮುಸಾವೀರ್, ಕಂಪನಿಯೊಂದರ ಕ್ಯಾಪ್ ಧರಿಸಿದ್ದ. ಬಾಂಬ್ ಇಟ್ಟ ನಂತರ ನಗರದಿಂದ ಪರಾರಿಯಾಗಿದ್ದ ಈತ, ಹೊರ ಜಿಲ್ಲೆಯ ಶೌಚಾಲಯವೊಂದರಲ್ಲಿ ಬಟ್ಟೆ ಬದಲಿಸಿದ್ದ. ಅಲ್ಲಿಯೇ ಕ್ಯಾಪ್ ಬಿಟ್ಟು ಹೋಗಿದ್ದ. ಅದರೊಳಗೆ ಕೂದಲುಗಳು ಇದ್ದವು. ಕ್ಯಾಪ್ ಜಪ್ತಿ ಮಾಡಿದ್ದ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಎನ್‌ಐಎ ಅಧಿಕಾರಿಗಳು ತನಿಖೆ ಮುಂದುವರಿಸಿದ್ದರು. ಬಳ್ಳಾರಿ, ಕಲಬುರಗಿ, ತೀರ್ಥಹಳ್ಳಿ, ಬೆಂಗಳೂರು ಹಾಗೂ ಇತರೆ ಸ್ಥಳಗಳಲ್ಲಿ ದಾಳಿ ಮಾಡಿ ಮಾಹಿತಿ ಕಲೆಹಾಕಿದ್ದರು. ಈ ಹಿಂದೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿರುವ ಶಂಕಿತರ ವಿಚಾರಣೆ ನಡೆಸಿದ್ದರು. ಶಿವಮೊಗ್ಗದಲ್ಲಿ ಟ್ರಯಲ್ ಬಾಂಬ್ ಸ್ಫೋಟ, ತಾಲಿಬಾನ್ ಪರ ಗೋಡೆ ಬರಹ, ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಗಳ ಶಂಕಿತರ ಮೇಲೆ ಅನುಮಾನ ಬಂದಿತ್ತು. ಹೆಚ್ಚಿನ ವಿಚಾರಣೆ ನಡೆಸಿದಾಗ, ಅಬ್ದುಲ್ ಮಥೀನ್ ಹಾಗೂ ಮುಸಾವೀರ್ ಹೆಸರು ಗೊತ್ತಾಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ಅಬ್ದುಲ್ ಮಥೀನ್ ಹಾಗೂ ಮುಸಾವೀರ್ ಕುಟುಂಬದವರನ್ನು ಸಂಪರ್ಕಿಸಿದ್ದ ಅಧಿಕಾರಿಗಳು, ಕೂದಲುಗಳ ಮಾದರಿ ಸಂಗ್ರಹಿಸಿದ್ದರು. ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಕ್ಯಾಪ್‌ನಲ್ಲಿದ್ದ ಕೂದಲು ಹಾಗೂ ಮುಸಾವೀರ್ ಕುಟುಂಬದ ಸದಸ್ಯರ ಕೂದಲುಗಳ ಡಿಎನ್‌ಎ ಶೇ 100ರಷ್ಟು ಹೊಂದಾಣಿಕೆ ಆಗಿತ್ತು. ಬಾಂಬ್ ಇಟ್ಟಿದ್ದು ಮುಸಾವೀರ್ ಎಂಬುದು ಗೊತ್ತಾಗಿತ್ತು’ ಎಂದು ಹೇಳಿವೆ.

ಮೆಮೊರಿ ಕಾರ್ಡ್‌ನಲ್ಲಿ ಕೋಡ್‌ ವರ್ಡ್

‘ಕರ್ನಾಟಕ ತಮಿಳುನಾಡು ಹಾಗೂ ಉತ್ತರ ಪ್ರದೇಶದ 18 ಸ್ಥಳಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಮುಜಮೀಲ್ ಶರೀಫ್ ಸಿಕ್ಕಿಬಿದ್ದಿದ್ದ. ಈತ ಸಹ ಬಾಂಬ್‌ ಸ್ಫೋಟದ ಸಂಚಿನಲ್ಲಿದ್ದ. ಈತನಿಂದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ. ‘ಒಂದು ಮೊಬೈಲ್‌ನಲ್ಲಿ ಮೆಮೊರಿ ಕಾರ್ಡ್ ಸಿಕ್ಕಿತ್ತು. ಸ್ಫೋಟದ ಸಂಚಿನ ಬಗ್ಗೆ ಕೆಲ ಮಾಹಿತಿ ಕೋಡ್ ವರ್ಡ್ ರೂಪದಲ್ಲಿತ್ತು. ಮುಜಮೀಲ್‌ನನ್ನು ಪುನಃ ಕಸ್ಟಡಿಗೆ ಪಡೆದು ವಿಚಾರಿಸಿದಾಗ ಶಂಕಿತರು ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶಕ್ಕೆ ಹೋಗುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ಸುಳಿವು ಶಂಕಿತರ ಬಂಧನಕ್ಕೆ ನೆರವಾಯಿತು’ ಎಂದು ಹೇಳಿವೆ.

ತಮಿಳುನಾಡಿನಲ್ಲಿ ಬಾಂಬ್ ತಯಾರಿ

‘ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಲು ತೀರ್ಮಾನಿಸಿದ್ದ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ತಮಿಳುನಾಡಿನ ಹಳ್ಳಿಯೊಂದರ ಕೊಠಡಿಯೊಂದರಲ್ಲಿ ಸೇರಿದ್ದರು. ಇದೇ ಸಂದರ್ಭದಲ್ಲಿ ತಮಿಳುನಾಡಿನ ಹಲವು ನಗರಗಳಲ್ಲಿ ಸುತ್ತಾಡಿದ್ದರು. ಶಾಪಿಂಗ್ ಮಾಲ್‌ವೊಂದರಲ್ಲಿ ಕ್ಯಾಪ್ ಖರೀದಿಸಿದ್ದರು. ಅದೇ ಕ್ಯಾಪ್ ಮುಸಾವೀರ್ ಧರಿಸಿದ್ದ’ ಎಂದು ಮೂಲಗಳು ಹೇಳಿವೆ. ‘ಆನ್‌ಲೈನ್ ಹಾಗೂ ಪರಿಚಯಸ್ಥರ ಮೂಲಕ ಕಚ್ಚಾ ಸಾಮಗ್ರಿಗಳನ್ನು ತರಿಸಿಕೊಂಡು ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದರು. ಬಾಂಬ್‌ ಸಮೇತ ಮುಸಾವೀರ್ ಫೆಬ್ರುವರಿ 29ರಂದು ಚೆನ್ನೈಗೆ ಬಂದಿದ್ದ. ಅಲ್ಲಿಂದ ರಾತ್ರಿ ಹೊರಟು ಮರುದಿನ ಮಾರ್ಚ್‌ 1ರಂದು ಬೆಂಗಳೂರಿನ ಹೊಸೂರು ರಸ್ತೆಗೆ ಬಂದಿದ್ದ. ಬಳಿಕ ಕೆ.ಆರ್‌. ಪುರಕ್ಕೆ ತೆರಳಿದ್ದ. ಅಲ್ಲಿಂದ ಕುಂದಲಹಳ್ಳಿಗೆ ಬಂದಿದ್ದ. ಪುನಃ ಬಿಎಂಟಿಸಿ ಬಸ್‌ನಲ್ಲಿ ರಾಮೇಶ್ವರಂ ಕೆಫೆ ಬಳಿ ಇಳಿದಿದ್ದ. ನೇರವಾಗಿ ಕೆಫೆಗೆ ಹೋಗಿ ಇಡ್ಲಿ ಖರೀದಿಸಿದ್ದ. ನಂತರ ಕೆಫೆಯಲ್ಲಿ ಬಾಂಬ್‌ ಇರಿಸಿ ಸ್ಥಳದಿಂದ ಪರಾರಿಯಾಗಿದ್ದ. ಕೆಲ ನಿಮಿಷಗಳ ನಂತರ ಬಾಂಬ್ ಸ್ಫೋಟಗೊಂಡಿತ್ತು’ ಎಂದು ಮೂಲಗಳು ತಿಳಿಸಿವೆ.

ರೈಲು ಬಸ್‌ನಲ್ಲಿ ಮುಸಾವೀರ್ ಪ್ರಯಾಣ

‘ಬಾಂಬ್ ಇಟ್ಟ ನಂತರ ಮುಸಾವೀರ್ ಗೊರಗುಂಟೆಪಾಳ್ಯಕ್ಕೆ ಬಂದಿದ್ದ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಳ್ಳಾರಿಗೆ ತಲುಪಿ ಅಲ್ಲಿಂದ ಕಲಬುರಗಿಗೆ ಹೋಗಿದ್ದ. ಅಲ್ಲಿಂದ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ಇಬ್ಬರೂ ತೆಲಂಗಾಣ ಆಂಧ್ರಪ್ರದೇಶದಲ್ಲಿ ಸುತ್ತಾಡಿದ್ದರು. ನಂತರ ಒಡಿಶಾ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು’ ಎಂದು ಮೂಲಗಳು ಹೇಳಿವೆ. ಹೊರದೇಶದಿಂದ ಹಣ ಸಂದಾಯ: ‘ಶಂಕಿತರು ಪರಾರಿಯಾಗಲು ಹಲವರು ಸಹಾಯ ಮಾಡಿದ್ದರು. ಹೊರ ದೇಶದಲ್ಲಿರುವ ಕೆಲವರು ಸ್ಥಳೀಯ ವ್ಯಕ್ತಿಗಳ ಮೂಲಕ ಶಂಕಿತರಿಗೆ ಹಣ ನೀಡಿದ್ದ ಮಾಹಿತಿಯೂ ಇದೆ’ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.