ADVERTISEMENT

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಾಂಬ್ ಇಟ್ಟವನ ಗುರುತು ಪತ್ತೆ ಮಾಡಿದ ಎನ್‌ಐಎ

ಕ್ಯಾಪ್‌ನಲ್ಲಿದ್ದ ತಲೆ ಕೂದಲು ಡಿಎನ್‌ಎ ಹೋಲಿಕೆ? * ಸುದ್ದಗುಂಟೆಪಾಳ್ಯದಲ್ಲಿ ಸ್ಫೋಟಕ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 23:30 IST
Last Updated 23 ಮಾರ್ಚ್ 2024, 23:30 IST
<div class="paragraphs"><p>ಮುಸಾವೀರ್ ಮತ್ತು ಅಬ್ದುಲ್ ಮಥೀನ್</p></div>

ಮುಸಾವೀರ್ ಮತ್ತು ಅಬ್ದುಲ್ ಮಥೀನ್

   

ಬೆಂಗಳೂರು:  ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಬಾಂಬ್ ಇರಿಸಿದ್ದ ಎನ್ನಲಾದ ಶಂಕಿತನನ್ನು ಪತ್ತೆ ಮಾಡಿರುವುದಾಗಿ ಗೊತ್ತಾಗಿದೆ.

‘ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಎಂಬಾತನೇ ಬಾಂಬ್‌ ಇರಿಸಿದ್ದನೆಂಬ ಅನುಮಾನಗಳು ದಟ್ಟವಾಗಿವೆ. ಆದರೆ, ಈತ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ADVERTISEMENT

‘ಬ್ರೂಕ್‌ಫೀಲ್ಡ್‌ನಲ್ಲಿರುವ ಕೆಫೆಗೆ ಮಾರ್ಚ್ 1ರಂದು ಬಂದಿದ್ದ ಶಂಕಿತ, ಬಾಂಬ್ ಇರಿಸಿ ಸ್ಥಳದಿಂದ ಹೊರಟು ಹೋಗಿದ್ದ. ಕೆಫೆ ಹಾಗೂ ಅಕ್ಕ–ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಶಂಕಿತನ ಚಹರೆ ಸೆರೆಯಾಗಿತ್ತು. ಶಂಕಿತ, ಕ್ಯಾಪ್‌ ಧರಿಸಿದ್ದು ಗೊತ್ತಾಗಿತ್ತು.’

‘ಶಂಕಿತನ ಬಗ್ಗೆ ಮಾಹಿತಿ ಕಲೆಹಾಕಿ, ಆತ ಸಂಚರಿಸಿದ್ದ ಕಡೆಗಳಲ್ಲಿ ಶೋಧ ನಡೆಸಲಾಗಿತ್ತು. ಶೌಚಾಲಯವೊಂದರಲ್ಲಿ ಕ್ಯಾಪ್ ಹಾಗೂ ಬಟ್ಟೆಗಳು ಪತ್ತೆಯಾಗಿದ್ದವು. ಕ್ಯಾಪ್‌ನಲ್ಲಿ ತಲೆ ಕೂದಲುಗಳಿದ್ದವು. ಅವುಗಳನ್ನು ಡಿಎನ್‌ಎ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜೊತೆಗೆ, ಭಯೋತ್ಪಾದನಾ ಪ್ರಕರಣದ ಶಂಕಿತರು ಹಾಗೂ ಅವರ ಕುಟುಂಬಸ್ಥರ ಕೂದಲುಗಳನ್ನು ಸಂಗ್ರಹಿಸಿ ಪರೀಕ್ಷೆಗೆ ನೀಡಲಾಗಿತ್ತು.’

‘ತಲೆಗೂದಲು ಡಿಎನ್‌ಎ ಪರೀಕ್ಷೆ ವರದಿ ಬಂದಿದ್ದು, ಮುಸಾವೀರ್ ಹುಸೇನ್ ಶಾಜೀಬ್ ಅವರ ಕುಟುಂಬದವರ ತಲೆ ಕೂದಲು ಹೋಲಿಕೆ ಆಗಿದೆ. ಕ್ಯಾಪ್‌ನಲ್ಲಿದ್ದ ಕೂದಲು ಮುಸಾವೀರ್ ಅವರದ್ದು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ, ಅವರೇ ಕ್ಯಾಪ್‌ ಧರಿಸಿ ರಾಮೇಶ್ವರಂ ಕೆಫೆಗೆ ಬಂದು ಬಾಂಬ್ ಇರಿಸಿ ಹೋಗಿರುವ ಅನುಮಾನ ಹೆಚ್ಚಾಗಿದೆ. ಬೇರೆಯವರೂ ಅದೇ ಕ್ಯಾಪ್ ಧರಿಸಿ ಕೃತ್ಯ ಎಸಗಿರುವ ಶಂಕೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.

‘ಮುಸಾವೀರ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ನೆರವಾದವರಿಗೆ ಬಹುಮಾನ ಸಹ ಘೋಷಿಸಲಾಗಿದೆ. ಈತನಿಗೆ ಇನ್ನೊಬ್ಬ ಶಂಕಿತ ತೀರ್ಥಹಳ್ಳಿಯ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಕೂಡ ಸಹಕಾರ ನೀಡಿರುವ ಮಾಹಿತಿ ಇದೆ. ಅಬ್ದುಲ್ ಮಥೀನ್ ಸಹ ತಲೆಮರೆಸಿಕೊಂಡಿದ್ದು, ಈತನಿಗಾಗಿಯೂ ಶೋಧ ಮುಂದುವರಿಸಲಾಗಿದೆ’ ಎಂದು ಹೇಳಿವೆ.

ನಕಲಿ ದಾಖಲೆ ನೀಡಿ ಚೆನ್ನೈನಲ್ಲಿ ವಾಸ: ‘ನಕಲಿ ಆಧಾರ್ ಹಾಗೂ ಇತರೆ ನಕಲಿ ದಾಖಲೆ ಇಟ್ಟುಕೊಂಡಿದ್ದ ಶಂಕಿತರಿಬ್ಬರು, ಚೆನ್ನೈನಲ್ಲಿ ಕೆಲ ದಿನ ಉಳಿದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಶಂಕಿತ, ಚೆನ್ನೈನ ಮೈಲಾಪುರದಲ್ಲಿರುವ ಶಾಪಿಂಗ್ ಮಾಲ್‌ವೊಂದರಲ್ಲಿ ಕ್ಯಾಪ್‌ ಖರೀದಿಸಿದ್ದ. ಈತನೇ ಮುಸಾವೀರ್ ಇರಬಹುದೆಂಬ ಅನುಮಾನ ಹೆಚ್ಚಿದೆ’ ಎಂದು ಮೂಲಗಳು ತಿಳಿಸಿವೆ.

‘ಐಎಸ್‌ (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾದನಾ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಡಿ ಅರೇಬಿಕ್ ಭಾಷಾ ಶಿಕ್ಷಕರಾಗಿದ್ದ ಚೆನ್ನೈನ ಜಮೀಲ್ ಬಾಷಾ ಉಮರಿ (55), ಕೊಯಮತ್ತೂರು ಮೌಲ್ವಿ ಎಂ. ಮೊಹಮ್ಮದ್ ಹುಸೇನ್ ಅಲಿಯಾಸ್ ಹುಸೇನ್ ಫೈಜಿ (38), ಐ. ಇರ್ಷಾತ್ (32) ಹಾಗೂ ಸೈಯದ್ ಅಬ್ದುರ್ ರಹಮಾನ್ ಉಮರಿಯನ್ನು(52) ಬಂಧಿಸಲಾಗಿತ್ತು. ಇವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಶಂಕಿತನ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿದೆ’ ಎಂದು ಹೇಳಿವೆ.

‘ತಮಿಳುನಾಡಿನ ಯಾವ ಸ್ಥಳಗಳಿಗೆ ಶಂಕಿತ ಭೇಟಿ ನೀಡಿದ್ದ? ಯಾರ ಜೊತೆ ಮಾತನಾಡಿದ್ದ ? ಎಂಬಿತ್ಯಾದಿ ಮಾಹಿತಿ ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗದಲ್ಲಿ ಐಇಡಿ ತರಬೇತಿ: ‘ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಶಂಕಿತರು, ಕಚ್ಚಾ ಬಾಂಬ್ (ಐಇಡಿ) ತಯಾರಿಸುವುದು ಹೇಗೆ? ಎಂಬುದರ ತರಬೇತಿ ಪಡೆದಿದ್ದರು. ಶಿವಮೊಗ್ಗದ ಗುರುಪುರ–ಪುರಲೆ ಸಮೀಪದಲ್ಲಿರುವ ತುಂಗಾ ನದಿಯ ತೀರದಲ್ಲಿ ತಾವೇ ತಯಾರಿಸಿದ್ದ ಐಇಡಿ ಪರೀಕ್ಷಾರ್ಥ ಸ್ಫೋಟ ನಡೆಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಸದ್ಯ ಜೈಲಿನಲ್ಲಿರುವ ಮಾಝ್‌ ಮುನೀರ್ ಅಹ್ಮದ್‌ ಹಾಗೂ ಇತರರ ಜೊತೆಗೂ ಮುಸಾವೀರ್ ಒಡನಾಟವಿಟ್ಟುಕೊಂಡಿದ್ದ’ ಎಂದು ಮೂಲಗಳು ಹೇಳಿವೆ.

‘ಐಎಸ್‌ ಉಗ್ರರ ಜೊತೆ ಶಂಕಿತರ ನಂಟು’

‘ಶಂಕಿತ ಮುಸಾವೀರ್ ಸೇರಿ 17 ಶಂಕಿತರ ವಿರುದ್ಧ ಬೆಂಗಳೂರು ಸುದ್ದುಗುಂಟೆ ಪಾಳ್ಯ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಐಎಸ್‌ ಉಗ್ರರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಶಂಕಿತರು, ತಮಿಳುನಾಡಿನ ಹಿಂದು ಸಂಘಟನೆಯೊಂದರ ಮುಖಂಡ ಸುರೇಶ್ ಹತ್ಯೆಯಲ್ಲೂ ಭಾಗಿಯಾಗಿದ್ದರು’ ಎಂದು ಮೂಲಗಳು ಹೇಳಿವೆ.

‘ಗುರಪ್ಪನಪಾಳ್ಯದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಹಲವರನ್ನು ಬಂಧಿಸಿದ್ದರು. ಪ್ರಕರಣದ 17ನೇ ಆರೋಪಿಯಾಗಿದ್ದ ಮುಸಾವೀರ್, ಅಂದಿನಿಂದಲೇ ತಲೆಮರೆಸಿಕೊಂಡಿದ್ದ. ಇದೇ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು’ ಎಂದು ತಿಳಿಸಿವೆ.

‘ಸುದ್ದುಗುಂಟೆಪಾಳ್ಯದಲ್ಲಿ ಸ್ಫೋಟಕ ಸಂಗ್ರಹ’

‘ಶಂಕಿತ ಮುಸಾವೀರ್ ಸೇರಿ 17 ಶಂಕಿತರ ವಿರುದ್ಧ ಬೆಂಗಳೂರು ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಐಎಸ್‌ ಉಗ್ರರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಶಂಕಿತರು ತಮಿಳುನಾಡಿನ ಹಿಂದು ಸಂಘಟನೆಯೊಂದರ ಮುಖಂಡ ಸುರೇಶ್ ಹತ್ಯೆಯಲ್ಲೂ ಭಾಗಿಯಾಗಿದ್ದರು’ ಎಂದು ಮೂಲಗಳು ಹೇಳಿವೆ. ‘ಗುರಪ್ಪನಪಾಳ್ಯದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿದ್ದರು. ಪ್ರಕರಣದ 17ನೇ ಆರೋಪಿಯಾಗಿದ್ದ ಮುಸಾವೀರ್ ಅಂದಿನಿಂದಲೇ ತಲೆಮರೆಸಿಕೊಂಡಿದ್ದ. ಇದೇ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.