ADVERTISEMENT

BTS 2022 | ನ. 16ರಿಂದ ಬೆಂಗಳೂರು ತಾಂತ್ರಿಕ ಶೃಂಗ

ಉದ್ಯಮಿಗಳೊಂದಿಗೆ ವಿಚಾರ ವಿನಿಮಯ: ಸಚಿವ ಅಶ್ವತ್ಥನಾರಾಯಣ ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 20:18 IST
Last Updated 18 ಅಕ್ಟೋಬರ್ 2022, 20:18 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ನವದೆಹಲಿ: ಬೆಂಗಳೂರು ತಂತ್ರಜ್ಞಾನ ಶೃಂಗದ (ಬಿಟಿಎಸ್‌) 25ನೇ ವರ್ಷದ ರಜತ ಮಹೋತ್ಸವವು ನ.16ರಿಂದ 18ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

‘ಈ ಬಾರಿ 5ಜಿ ತಂತ್ರಜ್ಞಾನ ಸೇರಿದಂತೆ ಹೈಬ್ರಿಡ್ ಕ್ಲೌಡ್‌, ಎಡ್ಜ್ ಕಂಪ್ಯೂಟಿಂಗ್, ಫಿನ್‌ಟೆಕ್‌, ಜಿನೋಮಿಕ್ಸ್‌ 2.0 ಮುಂತಾದ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಮತ್ತು ಈ ಕ್ಷೇತ್ರದಲ್ಲಿ ಆಗಬೇಕಾದ ಹೂಡಿಕೆಗಳ ಬಗ್ಗೆ ಪ್ರಧಾನವಾಗಿ ಗಮನ ಹರಿಸಲಾಗುವುದು’ ಎಂದು ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದರು.

ಬಿಟಿಎಸ್‌-25ಕ್ಕೆ ಪೂರ್ವ ಭಾವಿಯಾಗಿ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ರೋಡ್‌ಶೋ ಮತ್ತು ಉದ್ಯಮಿಗಳೊಂದಿಗಿನ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಸಮ್ಮೇಳನವು ಈ ಬಾರಿ ಬೆಂಗಳೂರು ಅರಮನೆ ಆವರಣದಲ್ಲಿ ಭೌತಿಕ ಸ್ವರೂಪದಲ್ಲಿ ನಡೆಯಲಿದೆ. ಇಲ್ಲಿ ಭವಿಷ್ಯದ ಸಂಚಾರ ವ್ಯವಸ್ಥೆ, ಜೀನ್‌ ಎಡಿಟಿಂಗ್, ಬಯೋಫಾರ್ಮಾ, ಕ್ಲೀನ್‌ ಟೆಕ್ನಾಲಜಿ, ಏರೋಸ್ಪೇಸ್‌ ಮತ್ತು ಇಎಸ್‌ಜಿ ವಲಯ ಕುರಿತು ಪರಿಣತರು ಮತ್ತು ಉದ್ಯಮಿಗಳು ಚರ್ಚಿಸಲಿದ್ದಾರೆ ಎಂದು ಅವರು ವಿವರಿಸಿದರು.

ಸಮಕಾಲೀನ ಉದ್ಯಮಗಳಿಗೆ ನಾವು ತೆರೆದುಕೊಂಡಿದ್ದು, ಇದಕ್ಕಾಗಿ ಜಗತ್ತಿನ ಪ್ರಮುಖ ಆವಿಷ್ಕಾರ ತಾಣಗಳೊಂದಿಗೆ ಜಾಗತಿಕ ಆವಿಷ್ಕಾರ ಸಹಭಾಗಿತ್ವ ಉಪಕ್ರಮದಡಿ ಒಪ್ಪಂದಗಳನ್ನು ಮಾಡಿಕೊಳ್ಳಲು ಉತ್ಸುಕವಾಗಿದ್ದೇವೆ ಎಂದು ಅವರು ತಿಳಿಸಿದರು.

ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಐಟಿ-ಬಿಟಿ ವಲಯದ ಕೊಡುಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ. ಜತೆಗೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಿಂದ ಸಂಶೋಧನೆಯ ಹೆಬ್ಬಾಗಿಲು ತೆರೆದಿದೆ. ಈಗ ಉದ್ಯಮಗಳು ಶೈಕ್ಷಣಿಕ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿವೆ. ಇದು ರಾಜ್ಯದಲ್ಲಿ ಔದ್ಯಮಿಕ ಪ್ರಗತಿಗೆ ನಿರ್ಣಾಯಕ ಶಕ್ತಿಯಾಗಲಿದ್ದು, ಕೌಶಲಪೂರ್ಣ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಿದೆ ಎಂದರು.

ಕಳೆದ ಆರ್ಥಿಕ ವರ್ಷದಲ್ಲಿ ದೇಶಕ್ಕೆ 83 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ನೇರ ವಿದೇಶಿ ಹೂಡಿಕೆ ಹರಿದುಬಂದಿದೆ. ಇದರಲ್ಲಿ ಶೇ 38ರಷ್ಟು ಬಂಡವಾಳವನ್ನು ಸೆಳೆಯುವಲ್ಲಿ ಕರ್ನಾಟಕವು ಯಶಸ್ವಿಯಾಗಿದೆ. ಜೊತೆಗೆ ದೇಶದಲ್ಲಿರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಪೈಕಿ ಶೇ 40ರಷ್ಟು ಕರ್ನಾಟಕದಲ್ಲೇ ನೆಲೆಯೂರಿವೆ. 2025ರ ಹೊತ್ತಿಗೆ ದೇಶದ ಆರ್ಥಿಕತೆಗೆ ರಾಜ್ಯವು 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಇಟ್ಟುಕೊಂಡಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಎಸ್‌ಟಿಪಿಐ ಮಹಾನಿರ್ದೇಶಕ ಅರವಿಂದ್‌ ಕುಮಾರ್, ಎಸ್‌ಟಿಪಿಐ ಬೆಂಗಳೂರಿನ ನಿರ್ದೇಶಕ ಶೈಲೇಂದ್ರ ಕುಮಾರ್‌ ತ್ಯಾಗಿ, ಎಂಎಂ ಆಕ್ಟಿವ್ ಮುಖ್ಯಸ್ಥ ಜಗದೀಶ ಪಟ್ಟಣ್ಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.