ಬೆಂಗಳೂರು: ನೀವು ಪಾನಿಪೂರಿ ಪ್ರಿಯರೇ.. ಹಾಗಾದರೆ ಇನ್ನು ಮೂರು ತಿಂಗಳು ಕಾಯಿರಿ. ನೀವಿರುವ ಸಮೀಪದ ಆಸುಪಾಸಿನಲ್ಲೇ ಕಾಣಬಹುದಾದ ಯಂತ್ರಕ್ಕೆ ₹30 ಪಾವತಿಸಿದರೆ ಸಾಕು (ಕ್ಯೂಆರ್ ಕೋಡ್ ಸ್ಕ್ಯಾನ್) ಸ್ವಾದಿಷ್ಟ ಪಾನಿಪೂರಿ ನಿಮ್ಮ ಕೈಸೇರುತ್ತದೆ.
ಹೆಬ್ಬಾಳದ ‘ಎಐ ಬೋಟ್ ಇಂಕ್ ಪ್ರೈವೇಟ್ ಲಿಮಿಟೆಡ್’ನ ಸುರೇಂದ್ರ–ಅಂಜಲಿ ದಂಪತಿ ಎರಡು ವರ್ಷಗಳ ಪರಿಶ್ರಮದಿಂದ ವಿಶ್ವದ ಮೊದಲ ರೋಬಾಟಿಕ್ ಪಾನಿಪೂರಿ ಯಂತ್ರ (ಗೋಲ್‌ಬೋಟ್) ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಬುಧವಾರ ಆರಂಭವಾದ ತಂತ್ರಜ್ಞಾನ ಶೃಂಗಸಭೆಯಲ್ಲಿ ಈ ಯಂತ್ರವನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಉಚಿತವಾಗಿ ನೀಡುತ್ತಿರುವ ಪಾನಿಪೂರಿ ಸವಿಯಲು ಜನರು ಸಾಲುಗಟ್ಟಿ ನಿಂತಿದ್ದರು.
ಪಾನಿಪೂರಿ, ಗೋಲಗೊಪ್ಪ ಸೇರಿದಂತೆ ನಾಲ್ಕು ವಿವಿಧ ಪೂರಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಯಂತ್ರದಲ್ಲಿ ಅಳವಡಿಸಲಾಗಿದೆ. ಹಣ ಪಾವತಿಸಿದ ತಕ್ಷಣ ಆಯ್ಕೆ ಮಾಡಿದ ತಿನಿಸು ಪಡೆಯಬಹುದು. ತನ್ನೊಳಗೆ ಸಂಗ್ರಹಿಸಿದ ಸಾಮಗ್ರಿಗಳನ್ನು ಬಳಸಿಕೊಂಡು ಒಂದು ಪ್ಲೇಟ್ ಸಿದ್ಧಪಡಿಸಲು ಈಗ ಅಭಿವೃದ್ಧಿಪಡಿಸಿರುವ ಯಂತ್ರ ಮೂರು ನಿಮಿಷ ತೆಗೆದುಕೊಳ್ಳುತ್ತಿದೆ. ಇನ್ನಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸಿದ್ಧಪಡಿಸುವ ಅವಧಿ 100 ಸೆಕೆಂಡ್‌ಗೆ ಇಳಿಯಲಿದೆ ಎನ್ನುತ್ತಾರೆ ಸುರೇಂದ್ರ.
ಕೋವಿಡ್ ಪರಿಸ್ಥಿತಿ ನೀಡಿದ ಅವಕಾಶ: ಬ್ರಿಟನ್‌ನ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುರೇಂದ್ರ, ಕೋವಿಡ್ ಸಮಯದಲ್ಲಿ ಬೆಂಗಳೂರಿಗೆ ಹಿಂದಿರುಗಿದ್ದರು. ಒಂದು ದಿನ ಪತ್ನಿ ಜತೆ ಪಾನಿಪೂರಿ ಸವಿಯಲು ಹೋದಾಗ ಸ್ವಚ್ಛತೆಯ ಕೊರತೆ, ಕೋವಿಡ್ ಸಮಯದಲ್ಲಿ ತಿನ್ನಲು ಹಿಂದೇಟು ಹಾಕುತ್ತಿದ್ದ ಜನರನ್ನು ಗಮನಿಸಿದ ಪತ್ನಿ ಅಂಜಲಿ ಇಂತಹ ಒಂದು ಯಂತ್ರದ ಪರಿಕಲ್ಪನೆ ನೀಡಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿದ ಪತಿ ಎಂಜನಿಯರ್‌ಗಳಾದ ಅರವಿಂದ್, ಗೌತಮ್ ಅವರ ಸಹಕಾರದಲ್ಲಿ ಎರಡು ವರ್ಷಗಳ ಪ್ರಯೋಗದ ನಂತರ ರೋಬಾಟಿಕ್ ಯಂತ್ರ ಸಿದ್ಧಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.