ADVERTISEMENT

Bengaluru Tech summit | ಇಸ್ರೊ ಜತೆ 100ಕ್ಕೂ ಹೆಚ್ಚು ನವೋದ್ಯಮ ನೋಂದಣಿ

ಬಾಹ್ಯಾಕಾಶ ತಂತ್ರಜ್ಞಾನ: ಸಣ್ಣ ರಾಕೆಟ್‌ಗಳ ಉಡಾವಣೆಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 20:15 IST
Last Updated 17 ನವೆಂಬರ್ 2022, 20:15 IST
   

ಬೆಂಗಳೂರು: ‘ಸಣ್ಣ ರಾಕೆಟ್‌ಗಳ ಉಡಾವಣೆಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ, ಇಸ್ರೊ ಈ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಕಾರ್ಯನಿರ್ವಹಿಸುತ್ತಿದೆ’ ಎಂದು ಅಧ್ಯಕ್ಷ ಎಸ್‌. ಸೋಮನಾಥ್‌ ತಿಳಿಸಿದರು.

‘ಬೆಂಗಳೂರು ಟೆಕ್‌ ಸಮ್ಮಿಟ್‌’ನಲ್ಲಿ ಗುರುವಾರ ‘ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯು ವಿಶ್ವದ ಮೇಲೆ ಆಗಲಿರುವ ಪರಿಣಾಮ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ನವೋದ್ಯಮಗಳಿಗೆ ಇರುವ ಅವಕಾಶಗಳು ಮತ್ತು ತಂತ್ರಜ್ಞಾನದ ಅಭಿವೃದ್ಧಿ ಕುರಿತು ವಿವರಿಸಿದರು.

‘ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ನವೋದ್ಯಮಗಳು ಇಸ್ರೊದಲ್ಲಿ ನೋಂದಣಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿವೆ.ಬಾಹ್ಯಾಕಾಶ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ವಿಫುಲ ಅವಕಾಶಗಳಿವೆ. ಹಲವು ಕಂಪನಿಗಳು ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿವೆ. ಇಸ್ರೊ ಸಹ ಈ ಕಾರ್ಯಕ್ಕೆ ಉತ್ತೇಜನ ನೀಡುತ್ತಿದೆ. ಉಪಗ್ರಹ ಮತ್ತು ರಾಕೆಟ್‌ಗಳ ನಿರ್ಮಾಣದಲ್ಲಿ 10 ನವೋದ್ಯಮಗಳು ಈಗಾಗಲೇ ತೊಡಗಿಸಿಕೊಂಡಿವೆ’ ಎಂದು ತಿಳಿಸಿದರು.

ADVERTISEMENT

‘ಬಾಹ್ಯಾಕಾಶದಲ್ಲಿ ರೋಬೊ ತಂತ್ರಜ್ಞಾನ ಈಗ ಪ್ರಮುಖ ಪಾತ್ರವಹಿಸುತ್ತಿದೆ. ಬಾಹ್ಯಾಕಾಶದಲ್ಲಿನ ಅವಶೇಷಗಳನ್ನು ತೆರವುಗೊಳಿಸುವಲ್ಲಿ ರೋಬೊಗಳು ಪ್ರಮುಖ ಪಾತ್ರವಹಿಸುತ್ತಿವೆ. ಅವಶೇಷಗಳು ಉಪಗ್ರಹಗಳ ಕಾರ್ಯನಿರ್ವಹಣೆಗೆ ತೊಡಕಾಗುತ್ತಿರುವುದರಿಂದ ಇವುಗಳನ್ನು ತೆರವುಗೊಳಿಸುವ ಅಗತ್ಯ ಇದೆ’ ಎಂದು ವಿವರಿಸಿದರು.

‘ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಇನ್ನು ಕೆಲವೇ ತಿಂಗಳಲ್ಲಿ ಕಕ್ಷೆಯನ್ನು ಸೇರಲಿದೆ. ಈ ನಿಟ್ಟಿನಲ್ಲಿ ಇಸ್ರೊ, ಅಮೆರಿಕದ ನಾಸಾ ಜತೆಯೂ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯ ರಾಕೆಟ್‌ನಲ್ಲಿ ಬಳಸುವ ಕಂಪ್ಯೂಟರ್‌ ಅನ್ನು ಭಾರತದಲ್ಲೇ ತಯಾರಿಸಲಾಗಿದೆ.ಉಪಗ್ರಹಗಳನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಬಗ್ಗೆಯೂ ಇಸ್ರೊ ಕಾರ್ಯನಿರ್ವಹಿಸುತ್ತಿದೆ’ ಎಂದು ವಿವರಿಸಿದರು.

‘ಜಗತ್ತಿನ ಎಲ್ಲೆಡೆ ಈಗ ಬಾಹ್ಯಾಕಾಶ ಪ್ರವಾಸೋದ್ಯಮ ಜನಪ್ರಿಯವಾಗುತ್ತಿದೆ. ಈ ಅವಕಾಶವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆಗಳು ನಡೆಯಬೇಕು. ದೇಶದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಸೇರಿದಂತೆ ಹಲವು ಯೋಜನೆಗಳಲ್ಲಿಯೂಇಸ್ರೊ ಬಹು ಮುಖ್ಯ ಪಾತ್ರ ವಹಿಸುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.