ಬೆಂಗಳೂರು: ‘ನಿಮ್ಮ ಮನೆಯ ನಲ್ಲಿಗಳಲ್ಲಿ ರಾತ್ರಿ ವೇಳೆ ನೀರು ಸೋರುವುದನ್ನು ನಿಲ್ಲಿಸಿದರೆ, ಶೇ 8ರಿಂದ ಶೇ 10ರಷ್ಟು ನೀರನ್ನು ಉಳಿಸಬಹುದು’ ಎಂದು ನೆದರ್‌ಲೆಂಡ್‌ನ ಟೆಕ್ನಿಮ್ಯಾಕ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೋ ಚೆರಿಯನ್ ಹೇಳಿದರು.
ತಂತ್ರಜ್ಞಾನ ಶೃಂಗದಲ್ಲಿ ‘ನೀರಿನ ಪ್ರತಿ ಹನಿಯೂ ಮುಖ್ಯ’ ವಿಷಯ ಕುರಿತ ಸಂವಾದದಲ್ಲಿ ಅವರು ಮಾಡಿದ ಈ ಪ್ರತಿಪಾದನೆ ಮೇಲೆ ಚರ್ಚೆ ನಡೆಯಿತು. ಸಭಿಕರೊಬ್ಬರು, ‘ರಾತ್ರಿ ವೇಳೆಯೇ ನೀರು ಹೆಚ್ಚು ಸೋರಿಕೆ ಆಗುವುದು ಏಕೆ’ ಎಂದು ಪ್ರಶ್ನಿಸಿದರು.
ಅದಕ್ಕೆ ಜೋ, ‘ರಾತ್ರಿಯ ವೇಳೆ ಎಲ್ಲ ನಲ್ಲಿಗಳ ಬಳಕೆ ನಿಲ್ಲುತ್ತದೆ. ಆದರೆ ಓವರ್ ಹೆಡ್ ಟ್ಯಾಂಕ್‌ನಿಂದ ಕೆಳಗಿಳಿಯುವ ನೀರಿನ ಒತ್ತಡ ಕಡಿಮೆ ಆಗಿರುವುದಿಲ್ಲ. ಹೀಗಾಗಿ ನಲ್ಲಿಗಳು ಸೋರಲಾರಂಭಿಸುತ್ತವೆ. ನೀರಿನ ಒತ್ತಡವನ್ನು ಕಡಿಮೆ ಮಾಡಲು, ವಾಲ್ವ್ ಅನ್ನು ತಿರುಗಿಸಿದರೆ ಆಯಿತು’ ಎಂದರು.
ಮತ್ತೊಬ್ಬ ಸಭಿಕರು, ‘ಪ್ರತಿದಿನವೂ ವಾಲ್ವ್ ಅನ್ನು ತಿರುಗಿಸುವುದು ಕಾರ್ಯಸಾಧುವೇ’ ಎಂದು ಪ್ರಶ್ನಿಸಿದರು.
‘ರಾತ್ರಿ ವೇಳೆ ಈ ಕೆಲಸವನ್ನು ಸ್ವಯಂಚಾಲಿತವಾಗಿ ಕಡಿಮೆ ಮಾಡುವ ಸಾಧನಗಳನ್ನು ನೆದರ್‌ಲೆಂಡ್‌ನಲ್ಲಿ ಅಭಿವೃದ್ಧಿಪಡಿಸಲಾಯಿತು. ಸರ್ಕಾರವು ಅಂತಹ ಸಾಧನಗಳ ಬಳಕೆಯನ್ನು ಕಡ್ಡಾಯ ಮಾಡಿತು. ಇದರಿಂದ ನೀರಿನ ಸೋರಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯಿತು’ ಎಂದರು.
ನೆದರ್‌ಲೆಂಡ್‌ನ ಹೈಡ್ರೊಲೂಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಲೆಕ್ಸಾಂಡರ್ ಎಲ್ಯೂರ್, ‘ಭಾರತದ ಮೆಟ್ರೊ ನಗರಗಳಲ್ಲಿ ಬಳಕೆಯಾಗುವ ನೀರಿನಲ್ಲಿ ಶೇ 40ರಷ್ಟು, ಶೌಚಾಲಯದ ಫ್ಲಶ್, ಕಾರು, ಮನೆ ಅಂಗಳ, ಪಾತ್ರೆ ಮತ್ತು ಬಟ್ಟೆ ಸ್ವಚ್ಛತೆಗೇ ಬಳಕೆಯಾಗುತ್ತದೆ. ಇದರಲ್ಲಿ ಬಹುತೇಕ ನೀರನ್ನು ಮರುಬಳಕೆ ಮಾಡಬಹುದು. ಇದರಿಂದ ನಗರಗಳಲ್ಲಿನ ನೀರಿನ ಬೇಡಿಕೆಯನ್ನು ಶೇ 30ರಿಂದ 35ರವರೆಗೂ ಕಡಿಮೆ ಮಾಡಬಹುದು’ ಎಂದರು.
ಬೆಂಗಳೂರಿಗೆ ಬೇಕು ಅದರದ್ದೇ ಪರಿಹಾರ...
‘ಮಳೆ ಮತ್ತು ವಾತಾವರಣದ ದತ್ತಾಂಶಗಳನ್ನು ಬಳಸಿಕೊಂಡು ಪ್ರವಾಹವನ್ನು ಮೊದಲೇ ಅಂದಾಜಿಸುವ ಹಾಗೂ ಅದರ ಪರಿಣಾಮಗಳನ್ನು ತಡೆಗಟ್ಟುವ ಕ್ರಮಗಳನ್ನು ನೆದರ್‌ಲೆಂಡ್ ಕೈಗೊಂಡಿದೆ. ಬೆಂಗಳೂರಿನಲ್ಲೂ ಇಂತಹ ಕೆಲಸ ಮಾಡಬಹುದು’ಎಂದು ಭಾರತದಲ್ಲಿನ ನೆದರ್‌ಲೆಂಡ್ ಹೈಕಮಿಷನರ್ ಮರಿಸಾ ಗೆರಾರ್ಡ್ಸ್ ಸಂವಾದದಲ್ಲಿ ಹೇಳಿದರು. ಅದನ್ನು ಪ್ರಶ್ನಿಸಿದ ಸಭಿಕರೊಬ್ಬರು ‘ಈಚೆಗೆ ಸ್ಪೇನ್‌ನಲ್ಲಿ ಬಾರಿ ಪ್ರವಾಹ ಉಂಟಾಗಿತ್ತು. ಅಷ್ಟು ಮುಂದುವರಿದ ದೇಶಗಳಲ್ಲೇ ಪ್ರವಾಹ ಸ್ಥಿತಿ ಎದುರಿಸಲು ಸಾಧ್ಯವಾಗದೇ ಇದ್ದರೆ ಬೆಂಗಳೂರಿನಲ್ಲಿ ಹೇಗೆ ಸಾಧ್ಯ’ ಎಂದರು. ಸಭಿಕರ ಮಧ್ಯೆಯೇ ಇದ್ದ ಸ್ಪೇನ್‌ನ ತಂತ್ರಜ್ಞರೊಬ್ಬರು ‘ದತ್ತಾಂಶಗಳಲ್ಲಿ ಲೆಕ್ಕಾಚಾರದಲ್ಲಿನ ಲೋಪದಿಂದ ಪ್ರವಾಹ ಅಂದಾಜಿಸುವಲ್ಲಿ ಸಮಸ್ಯೆ ಆಗಿತ್ತು. ಎಲ್ಲ ನಗರಗಳಿಗೂ ಒಂದೇ ಪರಿಹಾರ ಅನ್ವಯವಾಗುವುದಿಲ್ಲ. ಬೆಂಗಳೂರಿಗೆ ಅದರದ್ದೇ ಆದ ಪರಿಹಾರವನ್ನು ರೂಪಿಸಬೇಕಾಗುತ್ತದೆ’ ಎಂದರು.
ಶೃಂಗದ ಒಳ ಹೊರಗು
* ಶೃಂಗದ ಎರಡನೇ ದಿನ ವಸ್ತು ಪ್ರದರ್ಶನಕ್ಕೆ ಹೆಚ್ಚು ಜನರು ಬಂದಿದ್ದರು. ಅವರಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಕ್ಕೆ ಸಂಬಂಧಿಸಿದ ಮಳಿಗೆಗಳಲ್ಲಿ ಹೆಚ್ಚು ಸಮಯ ಕಳೆದರು. ಪ್ರದರ್ಶನ ಕೇಂದ್ರಗಳ ಹೊರಗೆ ಇರಿಸಲಾಗಿದ್ದ ಕಲಾಕೃತಿಗಳ ಎದುರು ನಿಂತು ಚಿತ್ರ ತೆಗೆಸಿಕೊಂಡರು. ಶೃಂಗದಲ್ಲಿ ಭಾಗಿಯಾಗಿದ್ದ ವಿದೇಶಿಯರು ಅರಮನೆ ಮೈದಾನದಲ್ಲಿ ಬೀದಿ ಬದಿ ವ್ಯಾಪಾರಿಗಳ ಬಳಿ ಬೇಲ್‌ಪುರಿ ಸವಿದರು
* ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಳಿಗೆಯಲ್ಲಿ ಇರಿಸಲಾಗಿದ್ದ ಸೇನಾ ವಿಮಾನಗಳು ಕಾವೇರಿ ಎಂಜಿನ್‌ನ ಮಾದರಿಗಳನ್ನು ನೋಡಲು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪ್ರದರ್ಶನದಲ್ಲಿ ಇರಿಸಿದ್ದ ಮಾದರಿಗಳ ವಿಶೇಷ ಮತ್ತು ಮಹತ್ವವನ್ನು ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿವರಿಸಿದರು. ವಿವಿಧ ಸೇನಾ ವಿಮಾನಗಳ ಅರ್ಜುನ ಟ್ಯಾಂಕ್‌ನ ಎಂಜಿನ್‌ಗಾಗಿ ಅಭಿವೃದ್ಧಿ ಪಡಿಸಲಾದ ಟರ್ಬೊ ಚಾರ್ಜರ್ ನೆಲಬಾಂಬ್ ಶೋಧಕ ಕ್ಷಿಪಣಿ ದಾಳಿ ತಡೆ ವ್ಯವಸ್ಥೆಗಳ ಮಾದರಿಗಳು ಪ್ರದರ್ಶನದಲ್ಲಿ ಇದ್ದವು
* ಶೃಂಗದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ 50 ನವೋದ್ಯಮಗಳು ತಮ್ಮ ಉತ್ಪನ್ನಗಳನ್ನು ಭೌತಿಕವಾಗಿ ಮತ್ತು ವರ್ಚ್ಯುವಲ್ ರೂಪದಲ್ಲಿ ಅನಾವರಣ ಮಾಡಿದವು. ವಿದ್ಯಾರ್ಥಿಗಳ ಕಲಿಕೆಯಲ್ಲಿ ನೆರವಾಗುವ ಎಐ ಕಿಟ್‌ಗಳು ಆಟಿಕೆಗಳು ಅತ್ಯಾಧುನಿಕ ಹೆಲ್ಮೆಟ್ ಸ್ವಯಂಚಾಲಿತ ಗಾಲಿಕುರ್ಚಿ ಜಿಪಿಎಸ್ ಟ್ರ್ಯಾಕರ್ ಗಮನ ಸೆಳೆದವು
* ನವೋದ್ಯಮಿಗಳು ತಮ್ಮ ಉತ್ಪನ್ನಗಳ ತಯಾರಿಕೆ ಮತ್ತು ಮಾರುಕಟ್ಟೆಗೆ ಬಂಡವಾಳ ಸಂಗ್ರಹಿಸಲು ಬಿ2ಬಿ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. 50ಕ್ಕೂ ಹೆಚ್ಚು ವಿದೇಶಿ ಹೂಡಿಕೆದಾರರೊಂದಿಗೆ ನವೋದ್ಯಮಿಗಳು ಚರ್ಚಿಸಿದರು ತಮ್ಮ ಉತ್ಪನ್ನಗಳ ಪ್ರಾತಕ್ಷಿಕೆ ನೀಡಿದರು
* ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಜತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿ ಗೊಳಿಸುವುದಾಗಿ ಅಮೆರಿಕದ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಹಾಡ್ಜಸ್ ಹೇಳಿದರು. ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಜತೆಗಿನ ಸಭೆಯಲ್ಲಿ ಅವರು ಈ ಮಾತು ಹೇಳಿದರು
ಇನ್ಫೊಸಿಸ್‌ಗೆ ‘ಕರ್ನಾಟಕದ ಐ.ಟಿ ರತ್ನ’ ಪ್ರಶಸ್ತಿ
2023–24ನೇ ಆರ್ಥಿಕ ವರ್ಷದಲ್ಲಿ ₹15000 ಕೋಟಿಗೂ ಹೆಚ್ಚು ಮೌಲ್ಯದ ಮಾಹಿತಿ ತಂತ್ರಜ್ಞಾನ ಸೇವೆ ರಫ್ತು ಮಾಡಿದ ಇನ್ಫೊಸಿಸ್‌ಗೆ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾವು ‘ಕರ್ನಾಟಕದ ಐ.ಟಿ ರತ್ನ’ ಪ್ರಶಸ್ತಿ ನೀಡಿದೆ. ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಒಟ್ಟು 26 ಕಂಪನಿಗಳಿಗೆ ವಿವಿಧ ‘ಐ.ಟಿ ರಫ್ತು ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಯಿತು. ₹15000 ಕೋಟಿಗಿಂತಲೂ ಕಡಿಮೆ ಮೊತ್ತದ ಮಾಹಿತಿ ತಂತ್ರಜ್ಞಾನ ಸೇವೆ ರಫ್ತು ಮಾಡಿದ 11 ಕಂಪನಿಗಳಿಗೆ ‘ಕರ್ನಾಟಕದ ಐ.ಟಿ ಹೆಮ್ಮೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.