ADVERTISEMENT

ವಿಮಾನನಿಲ್ದಾಣ ಪ್ರಾಧಿಕಾರದಲ್ಲಿ ಇಂಟರ್ನ್‌ಶಿಪ್‌: ಒಪ್ಪಂದ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 21:56 IST
Last Updated 15 ಅಕ್ಟೋಬರ್ 2024, 21:56 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದಲ್ಲಿ (ಎಎಐ) ಇಂಟರ್ನ್‌ಶಿಪ್‌ ತೆಗೆದುಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಇಂಟರ್ನ್‌ಶಿಪ್‌ ಅವಕಾಶಗಳನ್ನು ಒದಗಿಸಲು ಬೆಂಗಳೂರು ವಿಶ್ವವಿದ್ಯಾಲಯ ಎಎಐ ಜತೆ ಒಪ್ಪಂದ ಮಾಡಿಕೊಂಡಿದೆ. 

‘ಆರಂಭದಲ್ಲಿ ಈ ಅವಕಾಶವನ್ನು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಲಾಗಿತ್ತು. ಆದರೆ, ವಿಜ್ಞಾನ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳಿಗೂ ಅವಕಾಶ ನೀಡಲು ಎಎಐ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಮೊದಲ ವರ್ಷ ಇಂಟರ್ನ್‌ಶಿಪ್‌ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು’ ಎಂದು ಕೌಶಲ ಅಭಿವೃದ್ಧಿ ನಿರ್ದೇಶಕಿ ಕೆ. ನಿರ್ಮಲಾ ಹೇಳಿದರು.

ADVERTISEMENT

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರನೇ ಸೆಮಿಸ್ಟರ್‌ನಲ್ಲಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಐದನೇ ಸೆಮಿಸ್ಟರ್‌ನಲ್ಲಿ ಇಂಟರ್ನ್‌ಶಿಪ್‌ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಶಿಷ್ಯವೇತನ ಹಾಗೂ ವಿದ್ಯಾರ್ಥಿಗಳ ಸಾರಿಗೆ ವೆಚ್ಚವನ್ನು ಎಎಐ ಪಾವತಿಸುತ್ತದೆ.

‘ಪ್ರಯಾಣ ಮತ್ತು ಪ್ರವಾಸೋದ್ಯಮ, ವ್ಯವಸ್ಥಾಪಕ ಕೌಶಲ, ಆತಿಥ್ಯ, ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ, ನಾಗರಿಕ ವಿಮಾನಯಾನ ಮೊದಲಾದ ವಿಷಯಗಳಲ್ಲಿ ಇಂಟರ್ನ್‌ಶಿಪ್‌ ಮಾಡಬಹುದು. ಅವಧಿಯು ನಾಲ್ಕು ವಾರಗಳಿಂದ 20 ವಾರಗಳವರೆಗೆ ಇರುತ್ತದೆ. ಈ ಕುರಿತು ಈಚೆಗೆ ನಡೆದ ಸಿಂಡಿಕೇಟ್‌ ಸಭೆಯಲ್ಲೂ ಅನುಮೋದನೆ ಪಡೆಯಲಾಗಿತ್ತು’ ಎಂದು ಕುಲಪತಿ ಎಸ್.ಎಂ. ಜಯಕರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.