ADVERTISEMENT

ನವೋದ್ಯಮಗಳ ಉತ್ತೇಜನಕ್ಕೆ ‘ವೆಂಚುರೈಸ್‌’ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 20:13 IST
Last Updated 1 ಸೆಪ್ಟೆಂಬರ್ 2022, 20:13 IST

ಬೆಂಗಳೂರು: ಉತ್ಪಾದನೆ ಮತ್ತು ಸುಸ್ಥಿರ ಸಂಬಂಧಿತ ವಲಯಗಳಲ್ಲಿ ನವೋದ್ಯಮಗಳನ್ನು ಗುರುತಿಸಿ, ಬೆಂಬಲಿಸುವ ‘ವೆಂಚುರೈಸ್‌’ ಸ್ಪರ್ಧೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ.

‘ವೆಂಚುರೈಸ್‌’ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ‘ಉತ್ಪಾದನೆ ಮತ್ತು ಸಂಬಂಧಿತ ವಲಯಗಳಲ್ಲಿನ ನವೋದ್ಯಮಗಳಿಗೆ ರಾಜ್ಯವನ್ನು ಆದ್ಯತೆ ತಾಣವಾಗಿ ರೂಪಿಸುವುದು ನಮ್ಮ ಆದ್ಯತೆ. ಉದ್ಯಮಿಗಳಿಗೆ ಪೂರಕ ವಾತಾವರಣ ಕಲ್ಪಿಸಲು ಅತ್ಯುತ್ತಮ ಮೂಲ ಸೌಕರ್ಯ ನಿರ್ಮಿಸಲು ನಮ್ಮ ಸರ್ಕಾರ ಬದ್ಧ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ‘ವೆಂಚುರೈಸ್‌–ಗ್ಲೋಬಲ್ ಸ್ಟಾರ್ಟ್‌ಅಪ್‌ ಪಿಚ್‌ ಚಾಲೆಂಜ್’ ಆಯೋಜಿಸಲಾಗಿದೆ. ನವೋದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸಿ, ಅವರಿಗೆ ಹೂಡಿಕೆದಾರರು ಮತ್ತು ಉದ್ಯಮ ಪಾಲುದಾರರ ಜತೆ ಸಂಪರ್ಕ ಕಲ್ಪಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ’ ಎಂದು ನಿರಾಣಿ ಹೇಳಿದರು.

ADVERTISEMENT

'ಸ್ಟಾರ್ಟ್‌ಅಪ್ ಪಿಚ್ ಚಾಲೆಂಜ್‌' ಅನ್ನು ಅಮೆಜಾನ್‌ ಆಯೋಜಿಸಿದೆ. ಮುಂದಿನ 2 ತಿಂಗಳ ಅವಧಿಯಲ್ಲಿ ನಡೆಯಲಿರುವ ಈ ಸ್ಪರ್ಧೆಯ ಮೊದಲ ಹಂತ ಆನ್‌ಲೈನ್ ಅರ್ಜಿ ಸಲ್ಲಿಕೆ. ಆನ್‌ಲೈನ್‌ ಪಿಂಚಿಂಗ್‌ ಎರಡನೇ ಭಾಗವಾದರೆ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ವಿಶ್ವದ ವಿವಿಧೆಡೆಯಿಂದ 2,000 ಕ್ಕೂ ಹೆಚ್ಚು ಅರ್ಜಿಗಳು ಬರಲಿವೆ.

2022 ರ ಸೆಪ್ಟೆಂಬರ್‌ 1 ರಿಂದ ಸೆಪ್ಟೆಂಬರ್‌ 25 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಳಾಸ – https://investkarnataka.co.in/gim2022/venturise

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.