ಬೆಂಗಳೂರು: ಪದೇ ಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಮನೆ ಮೇಲೆ ವಿದ್ಯುತ್ ತಂತಿ ಹಾದು ಹೋಗಿದೆ, ಜಮೀನಿನಲ್ಲಿ ಹೈಟೈನ್ಷನ್ ವೈರ್ ಹಾಕಲಾಗಿದೆ, ಬಿಲ್ ಪಾವತಿಸುವುದು ತಡವಾದರೆ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸುತ್ತಾರೆ....
ಇಂತಹ ಹಲವಾರು ಪ್ರಶ್ನೆಗಳಿಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸಮಾಧಾನದಿಂದ ಉತ್ತರಿಸಿದರು. ‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ‘ಫೋನ್ –ಇನ್’ ಕಾರ್ಯಕ್ರಮದಲ್ಲಿ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಕೆಲವು ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಗ್ರಾಹಕರ ಪ್ರಶ್ನೆಗಳಿಗೆ ಮಹಾಂತೇಶ ಬೀಳಗಿ ಅವರು ನೀಡಿರುವ ಉತ್ತರಗಳ ವಿವರ ಇಲ್ಲಿದೆ.
l ಹೊಸದಾಗಿ ಮನೆ ಕಟ್ಟುವವರು ₹5–6 ಸಾವಿರ ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಬೇಕಾಗಿದೆ. ವಿದ್ಯುತ್ ಬಳಸದಿದ್ದರೂ ₹1500 ಕಟ್ಟಿಸಿಕೊಳ್ಳುತ್ತಾರೆ. ಹಣ ಕಟ್ಟದಿದ್ದರೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ.
–ಹರೀಶ್, ರಾಮನಗರ
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ನಿರ್ದಿಷ್ಟ ದರ ನಿಗದಿಪಡಿಸಲಾಗಿದೆ. ಶಾಶ್ವತ ಸಂಪರ್ಕಕ್ಕೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ತಾತ್ಕಾಲಿಕ ಸಂಪರ್ಕಕ್ಕೆ ನಿರ್ದಿಷ್ಟ ಅವಧಿ ನಿಗದಿಪಡಿಸಲಾಗುತ್ತದೆ. ಈ ಅವಧಿಯ ಬಳಿಕ ಮತ್ತೆ ಶುಲ್ಕ ಪಾವತಿಸಿ ಸಂಪರ್ಕವನ್ನು ನವೀಕರಣಗೊಳಿಸಬೇಕು. ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿದ್ದರೆ ಪರಿಶೀಲಿಸುತ್ತೇವೆ. ಶುಲ್ಕಕ್ಕೆ ಸಂಬಂಧಿಸಿದ ವಿವರಗಳು ಬೆಸ್ಕಾಂ ಕಚೇರಿಗಳಲ್ಲಿ ಲಭ್ಯ. ಬಡವರಿಗೆ ಈ ಮೊತ್ತ ಹೆಚ್ಚು ಎನ್ನುವುದಾದರೆ ಸರ್ಕಾರದ ಗಮನಕ್ಕೆ ತರುತ್ತೇವೆ.
l ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಹತ್ತು ಗಂಟೆ ನಂತರ ಬೆಳಿಗ್ಗೆ 9 ಗಂಟೆಯವರೆಗೂ ವಿದ್ಯುತ್ ಇರುವುದಿಲ್ಲ. ಹಲವು ಸಿಬ್ಬಂದಿ 10–12 ವರ್ಷಗಳಿಂದ ಒಂದೇ ಸ್ಥಳದಲ್ಲಿದ್ದಾರೆ, ಬದಲಾವಣೆಯಾಗಿಲ್ಲ.
–ಸತೀಶ್, ಮೂದಿಗೆರೆ, ಚನ್ನಗಿರಿ ತಾಲ್ಲೂಕು.
ವಿದ್ಯುತ್ ಕಡಿತವಾದರೆ ಆರು ತಾಸುಗಳ ಒಳಗೆ ಸಂಪರ್ಕ ಕಲ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸುತ್ತೇವೆ. ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿರುವ ಸಿಬ್ಬಂದಿಯನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಇಲಾಖೆಯಲ್ಲಿ ಚೈತನ್ಯ ಭರಿತ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಳ್ಳುತ್ತೇವೆ.
l ನಮಗೆ ಮಾಹಿತಿ ನೀಡದೆಯೇ ನಮ್ಮ ಜಮೀನಿನಲ್ಲಿ ಹೈಟೆನ್ಷನ್ ವೈರ್ ಹಾಕಲಾಗಿದೆ. ಒಂದೂವರೆ ಎಕರೆ ಜಾಗದಲ್ಲಿ ತಂತಿ ಹಾದು ಹೋಗಿದೆ. ಈ ಬಗ್ಗೆ ದೂರು ನೀಡಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪರಿಹಾರವನ್ನೂ ನೀಡಿಲ್ಲ
–ಸುಮಾ, ಕಾಚನಾಯಕನಹಳ್ಳಿ, ಚಂದಾಪುರ.
ಕೈಗಾರಿಕೆಗಳಿಗೆ ಮತ್ತು ವಾಣಿಜ್ಯ ಉದ್ದೇಶಕ್ಕೆ ಹೈಟೆನ್ಷನ್ ವಿದ್ಯುತ್ ಮಾರ್ಗಗಳು ಅನಿವಾರ್ಯ. ಬೇರೆ ಕಡೆ ಸ್ಥಳಾಂತರಿಸಲು ಸಾಧ್ಯವಿದ್ದರೆ ಪರಿಶೀಲಿಸಲಾಗುವುದು. ಒಂದು ವೇಳೆ, ಇದೇ ಮಾರ್ಗದಲ್ಲಿ ವಿದ್ಯುತ್ ತಂತಿ ಹಾಕುವುದು ಅನಿವಾರ್ಯವಾಗಿದ್ದರೆ ಪರಿಹಾರ ನೀಡಲಾಗುವುದು.
l ಬಿಲ್ ಪಾವತಿಸುವುದು ತಡವಾಗಿದ್ದಕ್ಕೆ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿದ್ದಾರೆ. ನಮ್ಮಿಂದ ತಪ್ಪಾಗಿದೆ ನಿಜ. ಆದರೆ, ಸ್ಪಲ್ವ ಸಮಯಾವಕಾಶ ನೀಡಬೇಕಾಗಿತ್ತು. ವಿದ್ಯುತ್ ಕಡಿತಗೊಳಿಸಿದರೆ ಹೇಗೆ?
–ರಿಯಾಜ್ ಕೋಡಿಗೆಹಳ್ಳಿ, ಬೆಂಗಳೂರು.
ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿಗೆ ಪಾಠ ಮಾಡುತ್ತೇವೆ. ಸಕಾಲಕ್ಕೆ ಬಿಲ್ ಪಾವತಿಸುವುದು ಸಹ ಗ್ರಾಹಕರ ಕರ್ತವ್ಯ.
l ನಮ್ಮ ಪ್ರದೇಶದಲ್ಲಿ ಬೀದಿ ದೀಪಗಳ ಸಮಸ್ಯೆ ಇದೆ. ಇಲ್ಲಿನ ಎಲೆಕ್ಟ್ರಿಕಲ್ ಪ್ಯಾನಲ್‌ಗಳು ಹಾಳಾಗಿರುವುದರಿಂದ ಸರಿಪಡಿಸಬೇಕು.
–ಮಧು, ಬನಶಂಕರಿ, 6ನೇ ಹಂತ, ವೃಷಭಾವತಿ ನಗರ
ಬೀದಿ ದೀಪಗಳನ್ನು ಅಳವಡಿಸುವುದು ಸ್ಥಳೀಯ ಸಂಸ್ಯೆಯ ಜವಾಬ್ದಾರಿಯಾಗಿದೆ. ಎಲೆಕ್ಟ್ರಿಕಲ್ ಪ್ಯಾನೆಲ್ ದುರಸ್ತಿಗೊಳಿಸಲಾಗುವುದು.
l ವಿದ್ಯುತ್ ಬಿಲ್ ಪಾವತಿಸಲು ಇಂಟರ್‌ನೆಟ್ ಸಮಸ್ಯೆಯಾಗುತ್ತಿದೆ.
–ಅಂಬರೀಷ್. ಮುಳಬಾಗಿಲು, ಕೋಲಾರ
ಎರಡು ತಿಂಗಳಿಂದ ಈ ಸಮಸ್ಯೆಯಾಗಿತ್ತು. ಈಗ ಬೆಳಿಗ್ಗೆ 8 ಗಂಟೆಯಿಂದ 1.30ರವರೆಗೆ ಬಿಲ್ ಪಾವತಿಸಿಕೊಳ್ಳಲಾಗುತ್ತಿದೆ. ಈಗ ಸಾಫ್ಟ್‌ವೇರ್ ಸಮಸ್ಯೆ ಬಗೆಹರಿಸಲಾಗಿದೆ.
‘ಅಮೃತ ಜ್ಯೋತಿ ಸ್ಥಗಿತಗೊಳಿಸಿಲ್ಲ’
l ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಸುಧಾರಣೆಯಾಗಿದೆ. ನೆಲದಡಿಯಲ್ಲಿ ಕೇಬಲ್ ಹಾಕುವಾಗ ಸಮಸ್ಯೆಯಾಗುತ್ತಿದೆ. ‘ಅಮೃತ ಜ್ಯೋತಿ’ ಯೋಜನೆ ಸ್ಥಗಿತಗೊಳಿಸಲಾಗುತ್ತಿದೆಯೇ?
–ಅಶ್ವತ್ಥರೆಡ್ಡಿ,ರೈತ. ಮಾಲೂರು, ಕೋಲಾರ ಜಿಲ್ಲೆ.
ನೆಲದಡಿಯಲ್ಲಿ ಹಾಕುವ ಕೇಬಲ್ ಸಮಸ್ಯೆ ಸರಿಪಡಿಸುತ್ತೇವೆ. ಅಮೃತ
ಯೋಜನೆ ಮುಂದುವರಿಸುತ್ತೇವೆ.
ಸ್ಥಗಿತಗೊಳಿಸುವುದಿಲ್ಲ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ (ಭಾಗ್ಯಜ್ಯೋತಿ, ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ
‘ಎಂಟು ಜಿಲ್ಲೆಗಳಲ್ಲಿನ 1.30 ಕೋಟಿ ಗ್ರಾಹಕರನ್ನು ಹೊಂದಿರುವ ಬೆಸ್ಕಾಂ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಲು ಪ್ರಯತ್ನಿಸುತ್ತಿದೆ. ಬೆಸ್ಕಾಂ ಸಿಬ್ಬಂದಿ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಾರೆ’ ಎಂದು ಮಹಾಂತೇಶ ಬೀಳಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.