ADVERTISEMENT

ಆನ್‌ಲೈನ್‌ ಪಾವತಿಗೆ ನಿರಾಕರಣೆ: ‍ಪ್ರಮಾಣಪತ್ರ ಸಲ್ಲಿಸಲು ಬೆಸ್ಕಾಂಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:40 IST
Last Updated 26 ಜುಲೈ 2024, 16:40 IST
ಬೆಸ್ಕಾಂ
ಬೆಸ್ಕಾಂ   

ಬೆಂಗಳೂರು: ‘ಇಡೀ ಜಗತ್ತು ಡಿಜಿಟಲ್‌ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವಾಗ, ನೀವು ಮಾತ್ರ ಆನ್‌ಲೈನ್ ಪಾವತಿಗಳನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ’ ಎಂದು ಹೈಕೋರ್ಟ್‌, ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದೆ.

ಈ ಸಂಬಂಧ ಹೊಸಕೋಟೆ ನಿವಾಸಿ ಸೀತಾಲಕ್ಷ್ಮಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದ್ದು, ವಿಚಾರಣೆಯನ್ನು ಆಗಸ್ಟ್‌ 9ಕ್ಕೆ ಮುಂದೂಡಿದೆ.

ಪ್ರಕರಣವೇನು?: ‘ವಾಣಿಜ್ಯ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿರುವ ಕಾರಣ ಸಾಮರ್ಥ್ಯ ಪ್ರಮಾಣವನ್ನು ಹೆಚ್ಚಿಸಿ’ ಎಂದು ಅರ್ಜಿದಾರರು ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಎಂಜಿನಿಯರ್‌, ₹16 ಸಾವಿರ ಪಾವತಿಸುವಂತೆ ತಿಳಿಸಿದ್ದರು. ಇದರನ್ವಯ ಅರ್ಜಿದಾರರು ನಗದು ಪಾವತಿಸಲು ಕಚೇರಿಗೆ ತೆರಳಿದಾಗ, ಡಿಡಿ ಅಥವಾ ಆರ್‌ಟಿಜಿಎಸ್ ಮೂಲಕ ಹಣ ಪಾವತಿಸುವಂತೆ ಸೂಚಿಸಿದ್ದರು. ‘ನನಗೆ 65 ವರ್ಷವಾಗಿದ್ದು, ಓಡಾಡಲು ಸಾಧ್ಯವಿಲ್ಲ. ಹಾಗಾಗಿ, ಆನ್‌ಲೈನ್‌ ಮೂಲಕ ಹಣ ಪಾವತಿಸುತ್ತೇನೆ’ ಎಂದು ಅರ್ಜಿದಾರರು ತಿಳಿಸಿದ್ದರು. ಆದರೆ ಎಂಜಿನಿಯರ್, ಇದಕ್ಕೆ ಅವಕಾಶ ನೀಡಿರಲಿಲ್ಲ.

ADVERTISEMENT

ಇದಕ್ಕೆ ಅರ್ಜಿದಾರರು ಪ್ರೀ–ಪೇಯ್ಡ್‌ ಮೀಟರ್ ನೀಡುವಂತೆ ಮನವಿ ಮಾಡಿದ್ದರು. ಅಧಿಕಾರಿಗಳು ಅರ್ಜಿದಾರರ ಮನವಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರರು, ‘ವಿದ್ಯುತ್ ಸರಬರಾಜು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿ ಹಾಗೂ ಪ್ರೀ–ಪೇಯ್ಡ್‌ ಮೀಟರ್ ಕೊಡಲು ನಿರಾಕರಿಸಿ ಬೆಸ್ಕಾಂ ಹೊಸಕೋಟೆ ವೃತ್ತದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ 2024ರ ಮೇ 8ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿದ್ದರು.

‘ಪ್ರೀಪೇಯ್ಡ್‌ ಮೀಟರ್ ನೀಡಬೇಕು, ಆರ್‌ಬಿಐ ಮಾರ್ಗಸೂಚಿ ಹಾಗೂ ಕೆಇಆರ್‌ಸಿ ನಿಯಮಗಳ ಪ್ರಕಾರ ಯುಪಿಐ, ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವಂತೆ ಬೆ‌ಸ್ಕಾಂ ಹಾಗೂ ಇತರ ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದ್ದರು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.