ಬೆಂಗಳೂರು: ವಿದ್ಯುತ್ ಮಾರ್ಗದ ತಂತಿಗಳು ಜೋತು ಬಿದ್ದಿವೆಯೇ? ಪಾದಚಾರಿ ಮಾರ್ಗದಲ್ಲಿರುವ ಟ್ರಾನ್ಸ್
ಫಾರ್ಮರ್‌ಗಳಿಂದ ಪಾದಚಾರಿ ಗಳಿಗೆ ಸಮಸ್ಯೆ ಎದುರಾಗುತ್ತಿದೆಯೇ? ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿದೆಯೇ. ಬೆಂಗಳೂರು ಮಹಾನಗರದ ಐದು ಉಪವಿಭಾಗಗಳನ್ನು ಗುರುತಿಸಿ ಅಲ್ಲಿ ಇಂತಹ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲು ಬೆಸ್ಕಾಂ ಕ್ರಮ ಕೈಗೊಂಡಿದೆ.
ಇದನ್ನೂ ಓದಿ:ಬಿಲ್ ಪಾವತಿಗೆ ‘ಬೆಸ್ಕಾಂ ಮಿತ್ರ’ ಆ್ಯಪ್ ಬಳಸಿ
‘ಈ ಉಪವಿಭಾಗಗಳಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸುವ ಹಾಗೂ ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆ ತಡೆಗಟ್ಟುವ ಮೂಲಕ ಸೇವೆಯನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನವಿದು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದರು. ‘ಪ್ರಜಾವಾಣಿ’ ವತಿಯಿಂದ ಬುಧವಾರ ಏರ್ಪಡಿಸಿದ್ದ ಫೋನ್–ಇನ್ ಕಾರ್ಯಕ್ರಮದಲ್ಲಿ ಗ್ರಾಹಕರ ಅಹವಾಲುಗಳನ್ನು ಆಲಿಸಿದ ಅವರು ತ್ವರಿತ ಪರಿಹಾರದ ಭರವಸೆ ನೀಡಿದರು.
ಪವರ್ ಕಟ್ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು, ಸುಧಾರಿತ ಮೂಲಸೌಕರ್ಯ ಒದಗಿಸುವುದು, ಸ್ಮಾರ್ಟ್ ಮೀಟರ್‌ಗಳನ್ನು ಜೋಡಿಸುವುದು ಹಾಗೂ ಅತ್ಯಾಧುನಿಕ ಸುರಕ್ಷತಾ ಸಾಧನಗಳನ್ನು ಅಳವಡಿಸುವ ಕಾರ್ಯಗಳನ್ನು ಮಾದರಿ ಉಪವಿಭಾಗಗಳಲ್ಲಿ ಬೆಸ್ಕಾಂ ಕೈಗೊಳ್ಳಲಿದೆ. ವಿದ್ಯುತ್ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಟೆಂಡರ್ ಆಹ್ವಾನಿಸಿರುವ ಕಂಪನಿ, ಈ ಸಲುವಾಗಿಯೇ ₹ 951.51 ಕೋಟಿ ಕಾಯ್ದಿರಿಸಿದೆ. ಎರಡು ವರ್ಷಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದೆ.
ಮಳೆಗಾಲದ ಸಮಸ್ಯೆಗೆ ಮುಕ್ತಿ: ಮಳೆ ಬಂದಾಗ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಬಗ್ಗೆ ಅನೇಕ ಮಂದಿ ಅಹವಾಲು ಹೇಳಿಕೊಂಡರು. ಐದಾರು ಗಂಟೆ ವಿದ್ಯುತ್ ಇಲ್ಲದೆಯೇ ಕಳೆಯಬೇಕಾದ ಪ್ರಮೇಯ ಸೃಷ್ಟಿಯಾಗುತ್ತಿದೆ ಎಂದು ಸಮಸ್ಯೆ ವಿವರಿಸಿದರು.
‘ಗಾಳಿ ಮಳೆಗೆ ಮರ ಹಾಗೂ ಕೊಂಬೆಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳು ಮುರಿದು ಬೀಳುತ್ತವೆ. ಅವುಗಳನ್ನು ತೆರವುಗೊಳಿಸಿ ಕಂಬವನ್ನು ನಿಲ್ಲಿಸಿ ವಿದ್ಯುತ್ ಪೂರೈಕೆ ಮತ್ತೆ ಆರಂಭಿಸಲು ನಾಲ್ಕೈದು ಗಂಟೆ ಸಮಯ ಬೇಕಾಗುತ್ತದೆ. ಈ ಸಮಸ್ಯೆ ತಾತ್ಕಾಲಿಕ’ ಎಂದು ಶಿಖಾ ಸಮಜಾಯಿಷಿ ನೀಡಿದರು.
‘ನೆಲದ ಮೇಲಿನ ವಿದ್ಯುತ್ ಮಾರ್ಗಗಳ ಬದಲು ನೆಲದಡಿ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ₹ 1,800 ಕೋಟಿ ವೆಚ್ಚದ ಈ ಯೋಜನೆಯನ್ನು ಮಳೆಗಾಲ ಮುಗಿದ ಬಳಿಕ ಆರಂಭಿಸಲಿದ್ದೇವೆ. ಇದರಿಂದ ಮಳೆಗಾಲದಲ್ಲಿ ವಿದ್ಯುತ್ ಕಂಬಗಳು ಅಥವಾ ತಂತಿಗಳು ತುಂಡಾಗಿ ಪೂರೈಕೆ ವ್ಯತ್ಯಯವಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಅವರು ಭರವಸೆ ನೀಡಿದರು.
‘ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿ ವಿದ್ಯುತ್ ಪೂರೈಕೆಯಲ್ಲಿ ಏರುಪೇರಾಗುತ್ತಿದೆ. ಈ ಬಗ್ಗೆ ಮುನ್ಸೂಚನೆಯನ್ನೂ ನೀಡುತ್ತಿದ್ದೇವೆ. ಇಲಾಖೆ ವೆಬ್‌ಸೈಟ್‌ನಲ್ಲಿ ಮೊಬೈಲ್ ನಂಬರ್ ಜೋಡಿಸಿರುವ ಗ್ರಾಹಕರಿಗೂ ಎಸ್‌ಎಂಎಸ್ ಕಳುಹಿಸುತ್ತಿದ್ದೇವೆ’ ಎಂದರು.
ಬೆಸ್ಕಾಂ ತಾಂತ್ರಿಕ ನಿರ್ದೇಶಕ ಅಶೋಕ್ ಕುಮಾರ್, ಹಣಕಾಸು ವಿಭಾಗದ ನಿರ್ದೇಶಕ ಚೇತನ್, ಚಿತ್ರದುರ್ಗ ವಲಯದ ಮುಖ್ಯ ಎಂಜಿನಿಯರ್ ಬಿ.ಗುರುಮೂರ್ತಿ, ಬೆಂಗಳೂರು ಮಹಾನಗರ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ನಾಗರಾಜ್, ಉತ್ತರ ವಲಯದ ಮುಖ್ಯ ಎಂಜಿನಿಯರ್ ಉಮೇಶ್, ಗ್ರಾಮೀಣ ವಲಯದ ಮುಖ್ಯ ಎಂಜಿನಿಯರ್ ಸಿದ್ದರಾಜು, ಮುಖ್ಯ ಪ್ರಧಾನ ವ್ಯವಸ್ಥಾಪಕ ವೆಂಕಟೇಶ ಕುಮಾರ್, ಪ್ರಧಾನ ವ್ಯವಸ್ಥಾಪಕ ಎಚ್.ಎಂ. ಶಿವಪ್ರಕಾಶ್, ಉಪಪ್ರಧಾನ ವ್ಯವಸ್ಥಾಪಕಿ ಹರಿಣಿ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ ಗ್ರಾಹಕರ ಅಹವಾಲು ಆಲಿಸಿತು.
ಹೈಟೆನ್ಷನ್ ಮಾರ್ಗದ ಕೆಳಗೆ ಮನೆ ಕಟ್ಟದಿರಿ’
‘ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಗಡೆ ಯಾರೂ ಮನೆ ಕಟ್ಟಲೇಬಾರದು. ಒಂದು ವೇಳೆ ಕಟ್ಟಿದ್ದರೂ, ವಿದ್ಯುತ್ ಮಾರ್ಗದಿಂದ ಸುರಕ್ಷಿತ ಅಂತರವನ್ನು ಕಾಪಾಡಲಾಗಿದೆಯೇ ಎಂದು ಖಾತರಿಪಡಿಸಿಕೊಳ್ಳಬೇಕು’ ಎಂದು ಶಿಖಾ ಕಿವಿಮಾತು ಹೇಳಿದರು.
ಚಿಕ್ಕಬಾಣಾವರದ ಕವಿತಾ, ‘ಮೂರು ವರ್ಷದ ಹಿಂದೆ ಮನೆ ಕಟ್ಟಿದ್ದೇವೆ. ವಿದ್ಯುತ್ ಮಾರ್ಗದಿಂದ 14 ಅಡಿ ಅಂತರದಲ್ಲಿದ್ದರೂ ಮನೆ ಕೆಡಹುವಂತೆ ನೋಟಿಸ್ ನೀಡಿದ್ದಾರೆ. ನಾವು ಮೊದಲೇ ಕಷ್ಟದಲ್ಲಿದ್ದೇವೆ. ಇಷ್ಟೆಲ್ಲ ಬಂಡವಾಳ ಹಾಕಿ ನಿರ್ಮಿಸಿದ ಮನೆಯನ್ನು ಕೆಡವಿ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು. ವಿಜಯನಗರದ ಸುಬ್ಬಣ್ಣ ಗಾರ್ಡನ್ ನಿವಾಸಿ ರಂಗನಾಥ್ ಅವರೂ ಈ ಕುರಿತು ಆತಂಕ ತೋಡಿಕೊಂಡರು.
‘ಮನೆಯು ಹೈಟೆನ್ಷನ್ ಮಾರ್ಗದಿಂದ ನೇರವಾಗಿ ಕೆಳಗಡೆಯೇ ಇದ್ದರೆ ಅದನ್ನು ನೆಲಸಮ ಮಾಡಲೇಬೇಕು. ಇಲ್ಲದಿದ್ದರೆ ಕಟ್ಟಡದ ಯಾವ ಭಾಗವು ವಿದ್ಯುತ್ ಮಾರ್ಗದ ಅಸುರಕ್ಷಿತ ವಲಯದಲ್ಲಿದೆಯೋ ಅದನ್ನು ಕೆಡವಬೇಕಾಗುತ್ತದೆ. ಈ ಬಗ್ಗೆ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಸಿಬ್ಬಂದಿ ಜಂಟಿ ಸರ್ವೆ ನಡೆಸಿ ನಿಮಗೆ ಮಾರ್ಗದರ್ಶನ ಮಾಡುತ್ತಾರೆ’ ಎಂದು ಶಿಖಾ ತಿಳಿಸಿದರು.
ಚನ್ನಪಟ್ಟಣದ ಎಚ್.ಶಿವಣ್ಣ ಹಾಗೂ ಶಿರಾ ನಿವಾಸಿ ನಿರ್ಮಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಟ್ಟಡದ ಸಮೀಪ 11 ಕೆ.ವಿಗಿಂತ ಕಡಿಮೆ ಸಾಮರ್ಥ್ಯದ ಮಾರ್ಗವಿದ್ದರೆ ಅದನ್ನು ಸ್ಥಳಾಂತರಿಸಬಹುದು. ಆದರೆ, ಅದರ ವೆಚ್ಚವನ್ನು ಮಾತ್ರ ಆಯಾ ಮನೆಯವರೇ ಭರಿಸಬೇಕು’ ಎಂದು ಮಾಹಿತಿ ನೀಡಿದರು.
147 ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತ
ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಗಡೆ ನಿರ್ಮಾಣ ಹಂತದಲ್ಲಿದ್ದ 147 ಕಟ್ಟಡಗಳ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ.
ಈ ಹಿಂದೆಯೇ ಸಂಪರ್ಕ ಪಡೆದಿರುವ 7,482 ಕಟ್ಟಡಗಳ ಮಾಲೀಕರಿಗೆ ಬೆಸ್ಕಾಂ ನೋಟಿಸ್ ನೀಡಿದೆ.
‘ನೀರಾವರಿಗೆ ತುರ್ತು ವಿದ್ಯುತ್ ಕಲ್ಪಿಸಲು ತತ್ಕಾಲ್’
ನೀರಾವರಿ ಪಂಪ್‌ಸೆಟ್‌ಗಳಿಗೆ ಅಕ್ರಮ–ಸಕ್ರಮ ಯೋಜನೆ ಅಡಿ ಟಿ.ಸಿ ಅಳವಡಿಸುವ ಪ್ರಕ್ರಿಯೆ ವಿಳಂಬವಾಗಿರುವ ಕುರಿತು ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದ ಅನೇಕ ಕರೆಗಳು ಬಂದವು.
ಟಿ.ಸಿಗೆ ಅರ್ಜಿ ಸಲ್ಲಿಸಿ 2 ವರ್ಷವಾಯಿತು. ಇನ್ನೂ ಬಂದಿಲ್ಲ ಎಂದು ಮಧುಗಿರಿಯ ರಾಮಣ್ಣ ದೂರಿದರು.
‘ಈ ಯೋಜನೆ ಅಡಿ ಬಹಳಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಜ್ಯೇಷ್ಠತೆ ಆಧಾರದಲ್ಲಿ ಇವುಗಳನ್ನು ವಿಲೇ ಮಾಡಬೇಕಿದೆ. ಯಾವುದಾದರೂ ರೈತರಿಗೆ ತುರ್ತಾಗಿ ಸೇವೆ ಬೇಕಿದ್ದರೆ, ತತ್ಕಾಲ್ ಯೋಜನೆ ಅಡಿ ಅರ್ಜಿ ಸಲ್ಲಿಸಬಹುದು. ಆದರೆ, ತತ್ಕಾಲ್ ಯೋಜನೆಯಲ್ಲಿ ವಿದ್ಯುತ್ ಮೂಲಸೌಕರ್ಯದ ವೆಚ್ಚವನ್ನು ರೈತರೇ ಭರಿಸಬೇಕು. ಆದರೆ ಟಿ.ಸಿಯನ್ನು ಮಾತ್ರ ನಾವು ಉಚಿತವಾಗಿ ನೀಡುತ್ತೇವೆ’ ಎಂದು ಶಿಖಾ ತಿಳಿಸಿದರು.
ಲೈನ್‌ಮ್ಯಾನ್‌ಗಳಿಗೆ ಸಲಾಂ
ಇತ್ತೀಚೆಗೆ ನಗರದಲ್ಲಿ ಭಾರಿ ಮಳೆಯಾದಾಗ ಲೈನ್‌ಮ್ಯಾನ್‌ಗಳು ನೀಡಿದ ತುರ್ತು ಸೇವೆಗೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರು.
‘ಗಾಳಿ ಮಳೆಯನ್ನೂ ಲೆಕ್ಕಿಸದೆ ಸೇವೆ ನೀಡುವಅವರು ಪ್ರತಿ ಮನೆಯಲ್ಲಿ ಬೆಳಕು ಮೂಡಿಸುತ್ತಾರೆ’ ಎಂದು ಆರ್.ಟಿ.ನಗರದ ಸುನೀತಾ ಹೊಗಳಿದರು.
‘ಇತ್ತೀಚೆಗೆ ಮಳೆಯಾದಾಗ ಅನೇಕ ಲೈನ್‌ಮ್ಯಾನ್‌ಗಳು ಸತತ ಮೂರು ದಿನ ಮನೆಗೇ ಹೋಗಿಲ್ಲ. ಅವರ ಅವಿರತ ಶ್ರಮದಿಂದಾಗಿಯೇ ನಾವು ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ’ ಎಂದು ಶಿಖಾ ಅಭಿನಂದನೆ ಸೂಚಿಸಿದರು.
ಸಂಜೆಯೊಳಗೆ ಬದಲಾಯಿತು ಟಿ.ಸಿ
‘ಟಿ.ಸಿ. ಬದಲಾವಣೆ ಅರ್ಜಿ ಸಲ್ಲಿಸಿ 15 ದಿನವಾದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ಮಾಲೂರಿನಲ್ಲಿ ಶ್ರೀಧರ ಜಿ.ಎಂ. ಫೋನ್–ಇನ್‌ನಲ್ಲಿ ಅಹವಾಲು ಹೇಳಿಕೊಂಡಿದ್ದರು.
ಮಂಗಳವಾರ ಸಂಜೆಯೊಳಗೇ ಟಿ.ಸಿ. ಬದಲಾಯಿಸಲಾಗಿದೆ.
ತಕ್ಷಣವೇ ಬಗೆಹರಿಸಬಹುದಾದ 13 ದೂರುಗಳನ್ನು ಮಂಗಳವಾರವೇ ಪರಿಹರಿಸಲಾಗಿದೆ ಎಂದು ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.
ಯಾವ ಮೂಲಸೌಕರ್ಯ ಮೇಲ್ದರ್ಜೆಗೆ?
* ಅಗತ್ಯ ಇರುವೆಡೆ ಹೊಸ 11 ಕೆ.ವಿ ಮಾರ್ಗ, ಫೀಡರ್ ಮಾರ್ಗ ಸೇರ್ಪಡೆ
* ನೆಲದ ಮೇಲ್ಗಡೆ ಇರುವ 11 ಕೆ.ವಿ. ಫೀಡರ್, ಎಲ್.ಟಿ ಮಾರ್ಗ ಹಾಗೂ ಕಟ್ಟಡಕ್ಕೆ ಸಂಪರ್ಕ ಕಲ್ಪಿಸುವ ಸರ್ವಿಸ್ ಮೇನ್‌ಗಳನ್ನು ನೆಲದ ಅಡಿಯಲ್ಲಿ ಅಳವಡಿಸುವುದು
* ಸ್ವಯಂಚಾಲಿತ ಪೂರೈಕೆ ವ್ಯವಸ್ಥೆಗೆ (ಡಿಎಎಸ್) ಹೊಂದಾಣಿಕೆಯಾಗುವ ದೂರ ನಿರ್ವಹಣಾ ಘಟಕಗಳನ್ನು (ಆರ್‌ಎಂಯು) ಅಳವಡಿಸುವುದು
* ಅಪಾಯಕಾರಿ ಸ್ಥಳಗಳಲ್ಲಿ ವಿದ್ಯುತ್ ನಿರೋಧಕ ಅಳವಡಿಸಿದ ಎಲ್.ಟಿ ಕೇಬಲ್ ಜೋಡಿಸುವುದು
* ಹೊಸ ವಿದ್ಯುತ್ ಪರಿವರ್ತಕಗಳನ್ನು (ಡಿಟಿಸಿ) ಹಾಗೂ ಕಾಂಪ್ಯಾಕ್ಟ್ ಸಬ್ ಸ್ಟೇಷನ್‌ಗಳನ್ನು ಅಳವಡಿಸುವುದು
* 8/12 ವೇಸ್ ಎಲ್‌ಟಿ ಫೀಡರ್ ಪಿಲ್ಲರ್ ಬಾಕ್ಸ್ ಸಾಧನಗಳನ್ನು ಜೋಡಿಸುವುದು
ಅಹವಾಲು ಆಲಿಸುವ ವ್ಯವಸ್ಥೆ ಮೇಲ್ದರ್ಜೆಗೆ
‘ದಿನದ 24 ತಾಸೂ ಕಾರ್ಯನಿರ್ವಹಿಸುವ ಬೆಸ್ಕಾಂ ಸಹಾಯವಾಣಿಗೆ (1912) ಮಳೆಗಾಲದಲ್ಲಿ ಕೆಲವೊಮ್ಮೆ 10 ಸಾವಿರಕ್ಕೂ ಅಧಿಕ ಕರೆಗಳು ಬರುತ್ತವೆ. ಗ್ರಾಹಕರ ಅಹವಾಲು ಆಲಿಸುವ ವ್ಯವಸ್ಥೆಯನ್ನೂ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಂಡಿದ್ದೇವೆ. ‘ಚಾಟ್ ಬಾಟ್’ ವ್ಯವಸ್ಥೆಯನ್ನೂ ಶೀಘ್ರವೇ ಜಾರಿಗೆ ತರಲಿದ್ದೇವೆ’ ಎಂದು ಶಿಖಾ ತಿಳಿಸಿದರು.
‘ಗ್ರಾಹಕರ ಜೊತೆ ಸ್ವಯಂ ಮಾತುಕತೆ ನಡೆಸುವ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಆಧರಿತ ಚಾಟ್‌ಬಾಟ್ ವ್ಯವಸ್ಥೆಯಲ್ಲಿ ದ್ವಿಮುಖ ಸಂವಹನಕ್ಕೆ ಅವಕಾಶವಿದೆ’ ಎಂದರು.
‘ಸಹಾಯವಾಣಿ ನಿರ್ವಹಣೆಗೆ ಇದುವರೆಗೆ 30 ಲೈನ್‌ಗಳಿದ್ದವು. ಇವುಗಳ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಿದ್ದೇವೆ’ ಎಂದರು.
ಅಹವಾಲು ಸಲ್ಲಿಕೆ ಹೇಗೆ?: 1912
ದಿನದ 24 ತಾಸು ಕಾರ್ಯನಿರ್ವಹಿಸುವ ಸಹಾಯವಾಣಿ:5888
ಎಸ್‌ಎಂಎಸ್ ಮೂಲಕ ದೂರು ನೀಡುವ ಸಂಖ್ಯೆ:9449844640
ಅಹವಾಲು ಹೇಳಿಕೊಳ್ಳಲು ಟ್ವಿಟರ್ ಖಾತೆ:@NammaBescom
ಇ–ಮೇಲ್ ಮೂಲಕ ದೂರು ನೀಡುವ ವ್ಯವಸ್ಥೆ: helpline@bescom.co.in/ helplinebescom@gmail.com
ಆನ್‌ಲೈನ್ ದೂರು ದಾಖಲಿಸಲು: www.bescom.ipgrs.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.