ADVERTISEMENT

ಚರ್ಚೆ: ಅಡಿಕೆ ಆಮದು– ನಮ್ಮದೇ ಸರ್ಕಾರದ ತಪ್ಪು ನಿರ್ಣಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 21:43 IST
Last Updated 7 ಅಕ್ಟೋಬರ್ 2022, 21:43 IST
   

ಕೇಂದ್ರ ಸರ್ಕಾರವುವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯದ (ಡಿಜಿಎಫ್‌ಟಿ) ಮೂಲಕ ಅಧಿಸೂಚನೆ ಹೊರಡಿಸಿ ನೆರೆಯ ಭೂತಾನ್‌ನಿಂದ ಪ್ರತಿ ವರ್ಷ 17,000 ಟನ್‌ ಹಸಿರು ಅಡಿಕೆಯನ್ನು ಕನಿಷ್ಠ ಆಮದು ದರದ ನಿರ್ಬಂಧವಿಲ್ಲದೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಅನಿರ್ದಿಷ್ಟ ಅವಧಿಗೆ ಇದು ಅನ್ವಯವಾಗಲಿದೆ. ಭೂತಾನ್ ದೇಶದಿಂದ ಹಸಿರು ಅಡಿಕೆ ಆಮದು ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ. ಇದು ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಅಡಿಕೆ ಬೆಳೆಗಾರರ ಪಾಲಿಗೆ ಮಾರಣಾಂತಿಕ ನಿರ್ಧಾರ. ನಮ್ಮದೇ ಸರ್ಕಾರದ ತಪ್ಪು ನಿರ್ಣಯ.

ವಿಶೇಷವಾಗಿ, ಡಿಜಿಎಫ್‌ಟಿಯ ಸುತ್ತೋಲೆ ಪ್ರಕಾರ ಕನಿಷ್ಠ ಆಮದು ದರವನ್ನು ಅನ್ವಯಿಸದೆಯೇ ದೇಶಕ್ಕೆ ಅಡಿಕೆ ಆಮದು ಮಾಡುವುದು ನಮ್ಮ ಅಡಿಕೆ ಬೆಳೆಗಾರರಿಗೆ ಮಾಡುವ ಬಹು ದೊಡ್ಡ ಅನ್ಯಾಯವಾಗಿದೆ.ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ಕೊಟ್ಟರೆ, ಬರ್ಮಾ ಮತ್ತು ಇತರ ದೇಶಗಳಿಂದ ಅಕ್ರಮವಾಗಿ ಅಡಿಕೆ ತರುವುದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆಕರ್ನಾಟಕದ ಎಲ್ಲ ಅಡಿಕೆ ಮಾರಾಟ ಸಹಕಾರ ಸಂಘಗಳ ಮುಖಾಂತರ ಮನವಿ ನೀಡಿ ಚಾಲಿ ಅಡಿಕೆಗೆ ಕೆ.ಜಿ.ಗೆ ₹360 ಕನಿಷ್ಠ ಆಮದು ಬೆಲೆ ನಿಗದಿ ಮಾಡುವಂತೆ ವಿನಂತಿಸಲಾಗಿದೆ. ಈಗ, ಕನಿಷ್ಠ ಆಮದು ದರದ ನಿರ್ಬಂಧವೇ ಇಲ್ಲದೆ ಅಡಿಕೆ ಆಮದಿಗೆ ಅವಕಾಶ ಕಲ್ಪಿಸಿದ್ದನ್ನು ನೋಡಿದರೆ ಇದರಲ್ಲಿ ಸ್ಥಾಪಿತ ಹಿತಾಸಕ್ತಿ ಇದೆ, ಹುನ್ನಾರ ಇದೆ ಎಂಬ ಅನುಮಾನ ಬರುತ್ತದೆ. ನಮ್ಮ ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶೋತ್ತರಕ್ಕೆ ತಿಲಾಂಜಲಿ ಕೊಡಲಾಗಿದೆ ಎಂಬ ಭಾವನೆ ಬರುತ್ತದೆ.ನಮ್ಮ ರಾಜ್ಯದ ರಾಜಕೀಯ ನಾಯಕರಿಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂಬ ರೈತರ ಅನಿಸಿಕೆಗೆ ಈಗಿನ ನಿರ್ಧಾರವು ಇಂಬುಕೊಡುತ್ತದೆ.

ADVERTISEMENT

ಹಳದಿ ರೋಗ, ಎಲೆ ಚುಕ್ಕೆ ರೋಗ, ಕೊಳೆ ರೋಗ ಮತ್ತು ಉತ್ಪಾದನಾ ವೆಚ್ಚ ಏರಿಕೆಯಿಂದ ಕಂಗೆಟ್ಟಿರುವ ನಮ್ಮ ರೈತರಿಗೆ ಈ ನಿರ್ಣಯದಿಂದಾಗಿ ಗಾಯದ ಮೇಲೆ ಬರೆ ಇಟ್ಟಂತಾಗಿದೆ. ಕ್ಯಾಂಪ್ಕೊ ಸಂಸ್ಥೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿದ್ದು, ಅದರ ಸ್ವಲ್ಪ ಅಂಶದಿಂದಾದರೂ ರೈತರ ಅನುಕೂಲಕ್ಕಾಗಿ ಸಂಶೋಧನೆಗೆ ಅನುವು ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಆದರೆ ಅದರ ಬದಲಿಗೆ ಈ ರೀತಿಯ ಅನ್ಯಾಯ ಮಾಡುವುದು ಸರಿಯಲ್ಲ. ಅನ್ಯಾಯದ ಆಮದಿಗೆ ಅವಕಾಶ ಕಲ್ಪಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಪ್ರಧಾನಿಯವರು ಈ ನಿರ್ಧಾರವನ್ನು ಕೂಡಲೇ ಹಿಂಪಡೆದು, ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾಗುವರೆಂಬ ಆಶಾಭಾವನೆ ನಮ್ಮದು.

ಕೇಂದ್ರದ ಸಂಬಂಧಪಟ್ಟ ಸಚಿವರ ಮೇಲೆ ರಾಜ್ಯದ ರಾಜಕೀಯ ನಾಯಕರು ಒತ್ತಡ ಹೇರಿ, ಈ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಮಾಡಬೇಕು ಎಂಬ ಒತ್ತಾಯ ನಮ್ಮದು. ಭೂತಾನ್‌ ದೇಶಕ್ಕೆ ನೆರವಾಗಬೇಕು ಎಂಬ ಇಚ್ಛೆ ಇದ್ದರೆ ಅದಕ್ಕೆ ಬೇರೆ ಹಲವು ದಾರಿಗಳನ್ನು ಕಂಡುಕೊಳ್ಳಬಹುದು. ನಮ್ಮ ದೇಶದಲ್ಲಿ ನಮಗೆ ಬೇಕಾಗುವಷ್ಟು ಅಡಿಕೆಯನ್ನು ಈಗಾಗಲೇ ಬೆಳೆಯಲಾಗುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ರಫ್ತು ಮಾಡುವ ಶಕ್ತಿಯೂ ನಮಗೆ ದೊರೆಯಲಿದೆ. ಹೀಗಾಗಿ, ನಾವು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

ಅಡಿಕೆ ಮಾರುಕಟ್ಟೆ ಯಾರ ಹಿಡಿತದಲ್ಲಿಯೂ ಇಲ್ಲ. ಸರ್ಕಾರದ ಯಾವುದೇ ಬಿಗಿ ನೀತಿ, ಅಧಿಕಾರಿಗಳ ನಿರ್ಲಿಪ್ತ ಧೋರಣೆ ಮತ್ತು ಖಾಸಗಿ ವರ್ತಕರಿಂದ ಸರ್ಕಾರದ ಬೊಕ್ಕಸಕ್ಕೆ ತೆರಬೇಕಾದ ತೆರಿಗೆ ಕಳ್ಳತನ– ಇವೆಲ್ಲವೂ ಅಡಿಕೆ ಬೆಲೆ ಏರಿಕೆಗೆ ಮಾರಕ. ಸರಿಯಾಗಿ ತೆರಿಗೆ ಕಟ್ಟುವವರಿಗೆ ಮಾತ್ರ ಬಿಗಿ ನೀತಿ ಎಂಬಂತಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಬೆಳೆಗಾರರಲ್ಲಿ ಒಗ್ಗಟ್ಟಿನ ಕೊರತೆಯೂ ಕಾಣುತ್ತದೆ. ಮಾರುಕಟ್ಟೆಯಲ್ಲಿ ಬಿಳಿ ಚೀಟಿ ವ್ಯವಹಾರಕ್ಕೆ ಹಿಂಬದಿಯಿಂದ ನಮ್ಮವರದೇ ಕುಮ್ಮಕ್ಕು ಇರುವುದು ಕೂಡ ಬೇಸರದ ಸಂಗತಿ. ಇದರಿಂದಾಗಿ, ಯಾವುದೇ ಸಹಕಾರ ಸಂಸ್ಥೆಗೆ ನಿಖರವಾಗಿ ದರ ನೀಡುವುದು ಕಷ್ಟವಾಗುತ್ತದೆ.

ಅಡಿಕೆಯ ಹಲವು ವಿಧಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದರ ಗುಣಮಟ್ಟದಿಂದಾಗಿ ದರ ವ್ಯತ್ಯಾಸವಾಗುತ್ತದೆ. ಖಾಸಗಿ ವರ್ತಕರು ಇದರ ದುರುಪಯೋಗ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಾರೆ. ಈ ವಿಚಾರವನ್ನು ಕ್ಯಾಂಪ್ಕೊ ಸಂಸ್ಥೆಯು ಸರ್ಕಾರದ ಗಮನಕ್ಕೆ ತಂದಿದ್ದು, ನಮ್ಮ ಸಂಸ್ಥೆಯನ್ನು ನೋಡಲ್ ಸಂಸ್ಥೆಯಾಗಿ ನೇಮಿಸಿ, ಗುಣಮಟ್ಟ ಹಾಗೂ ದರ ನಿರ್ಣಯಕ್ಕೆ ತೊಡಗಿಸಿಕೊಳ್ಳುವಂತೆ ಮನವಿ ಸಲ್ಲಿಸಿದ್ದೇವೆ.

ಬರ್ಮಾ ಮತ್ತು ಇತರ ದೇಶಗಳಿಂದ ದೇಶದೊಳಕ್ಕೆ ಅಡಿಕೆಯನ್ನು ಅಕ್ರಮವಾಗಿ ಸಾಗಿಸುವುದನ್ನು ಮಟ್ಟ ಹಾಕಬೇಕಾದುದು ಸರ್ಕಾರದ ಕರ್ತವ್ಯ. ಅಕ್ರಮವಾಗಿ ದೇಶದೊಳಕ್ಕೆ ಅಡಿಕೆ ಬರುವುದು ನಿಯಂತ್ರಣವಾದರೆ, ನಮ್ಮ ರೈತರು ಬೆಳೆದ ಅಡಿಕೆಗೆ ನ್ಯಾಯವಾದ ದರ ದೊರಕಿಸಿಕೊಡಲು ಕ್ಯಾಂಪ್ಕೊದಂತಹ ಸಂಸ್ಥೆಗೆ ಸಾಧ್ಯವಾಗುತ್ತದೆ.

ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್‌ ಮತ್ತು ಅಸ್ಸಾಂ ರಾಜ್ಯಗಳ ಮೂಲಕ ಅಡಿಕೆಯನ್ನು ಕಳ್ಳ ಸಾಗಾಟ ಮಾಡಿ ದೇಶದೊಳಕ್ಕೆ ತರಲಾಗುತ್ತದೆ. ಈ ವಿದೇಶಿ ಅಡಿಕೆಗೆ ತೆರಿಗೆಯನ್ನೂ ಕಟ್ಟಲಾಗುವುದಿಲ್ಲ. ಇದರಿಂದಾಗಿ ದೇಶೀಯವಾಗಿ ಬೆಳೆಯುವ ಅಡಿಕೆಗೆ ದರ ಕಡಿಮೆಯಾಗುತ್ತದೆ. ಒಣ ಹಣ್ಣುಗಳ ಹೆಸರಿನಲ್ಲಿಯೂ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ಖಂಡನೀಯ.

ಈ ರೀತಿಯ ವರ್ತನೆಗಳು ದರ ಕುಸಿತಕ್ಕೆ ಕಾರಣವಾಗುತ್ತದೆ. ಬೆಳೆಗಾರರು ಆತಂಕಗೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅಡಿಕೆಯು ಅಕ್ರಮವಾಗಿ ದೇಶ ಪ್ರವೇಶಿಸುವುದನ್ನು ತಪ್ಪಿಸಬೇಕು. ಅಡಿಕೆ ಮಾರುಕಟ್ಟೆಯಲ್ಲಿ ದರದ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಬೇಕು.

ವಿಸ್ತರಣೆ ಗಣನೀಯ

ದೇಶದಲ್ಲಿ ವಾರ್ಷಿಕವಾಗಿ 8–10 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಈ ಪ್ರಮಾಣದ ಉತ್ಪಾದನೆಯಿಂದ ಸ್ಥಳೀಯ ಬೇಡಿಕೆ ಪೂರೈಕೆ ಮಾತ್ರವಲ್ಲ, ರಫ್ತು ಕೂಡ ಮಾಡಬಹುದು. ಕರ್ನಾಟಕ, ಕೇರಳದ ಜತೆಗೆ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಅಡಿಕೆ ಬೆಳೆ ಪ್ರದೇಶ ಗಣನೀಯವಾಗಿ ವಿಸ್ತರಣೆಯಾಗಿದ್ದು, ಇನ್ನು ನಾಲ್ಕೈದು ವರ್ಷಗಳಲ್ಲಿ ದೇಶದಲ್ಲಿ 15 ಲಕ್ಷ ಟನ್ ಅಡಿಕೆ ಉತ್ಪಾದನೆ ಆಗಬಹುದೆಂದುನಿರೀಕ್ಷಿಸಲಾಗಿದೆ.

ಲೇಖನ–ಕಿಶೋರ್‌ಕುಮಾರ್ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.