ಬೆಂಗಳೂರು: ಬಹುಸಂಖ್ಯಾತ ಹಿಂದೂಗಳ ಪರವಾಗಿರುವ ಪ್ರತೀ ನಿರ್ಧಾರಗಳಿಗೂ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಮತಾಂತರ ನಿಯಂತ್ರಣ ಹಾಗೂ ಶಾಲಾ ತರಗತಿಗಳಲ್ಲಿ ‘ಭಗವದ್ಗೀತೆ’ ಬೋಧನೆ ವಿಚಾರಗಳನ್ನು ಪ್ರಸ್ತಾಪಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ‘ಕಾಂಗ್ರೆಸ್‌ನಿಂದ ಗೋಹತ್ಯೆ ನಿಷೇಧ ಕಾನೂನಿಗೂ ವಿರೋಧ, ಮತಾಂತರ ನಿಯಂತ್ರಣ ಕಾಯ್ದೆಗೂ ವಿರೋಧ, ದೇವಾಲಯಗಳನ್ನು ಸರ್ಕಾರಿ ಆಡಳಿತದಿಂದ ಮುಕ್ತ ಮಾಡುವ ನಿರ್ಧಾರಕ್ಕೂ ವಿರೋಧ, ಈಗ ಭಗವದ್ಗೀತೆಗೂ ವಿರೋಧ ವ್ಯಕ್ತವಾಗಿದೆ. ಇದು #ಹಿಂದೂವಿರೋಧಿಕಾಂಗ್ರೆಸ್ ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ವಾಗ್ದಾಳಿ ನಡೆಸಿದೆ.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮದೇ ಕೋಟೆ ಕನಕಪುರ, ಕಪಾಲಿ ಬೆಟ್ಟ, ಹಾರೋಬೆಲೆ ವ್ಯಾಪ್ತಿಯಲ್ಲಿ ಮತಾಂತರದ ಪರವಾಗಿರುವವರ ಮತಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮತಾಂತರದ ಪರವಾಗಿರುವವರ ಓಲೈಕೆಗಾಗಿ ಮತಾಂತರ ನಿಯಂತ್ರಣ ಕಾಯ್ದೆಯಂತಹ ಜನಸ್ನೇಹಿ ಕಾನೂನಿಗೆ ವಿರೋಧಿಸುತ್ತಿದ್ದೀರಿ ಅಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಮತಾಂತರ ನಿಯಂತ್ರಣ ಕಾಯ್ದೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಕ್ರೋಶ ಭರಿತರಾಗಿದ್ದಾರೆ. ಇಟಲಿ ಮೂಲದವರನ್ನು (ಸೋನಿಯಾ ಗಾಂಧಿ, ರಾಹುಲ್ ಗಾಂಧಿ) ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ? ಹಿಂದೂಗಳು ಮತಾಂತರವಾದರೂ ಪರವಾಗಿಲ್ಲ ಎನ್ನುವ ನಿಮ್ಮ ಹಿಂದೂ ವಿರೋಧಿ ನಿಲುವಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.