ADVERTISEMENT

ಪಟ್ಲ ಸತೀಶ್ ಶೆಟ್ಟರನ್ನು ಮೇಳಕ್ಕೆ ಸೇರಿಸಿ ತಪ್ಪನ್ನು ಸರಿಪಡಿಸಿ: ಅಭಿಮಾನಿ ಬಳಗ

ಕಟೀಲು ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದ ಪಟ್ಲ ಸತೀಶ್ ರನ್ನು ಭಾಗವತಿಕೆ ಮಾಡದಂತೆ ಮೇಳದ ವೇದಿಕೆಯಿಂದ ಕೆಳಗಿಳಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 11:43 IST
Last Updated 24 ನವೆಂಬರ್ 2019, 11:43 IST
   

ಮಂಗಳೂರು: ಕಲಾವಿದರ ಘನತೆಗೆ ತಕ್ಕಂತೆ ಸೂಕ್ತ ಸೌಹಾರ್ದಯುತ ಪರಿಹಾರವನ್ನು ರೂಪಿಸಿ, ಭಾಗವತರನ್ನು ಮರಳಿ ಮೇಳಕ್ಕೆ ಸಂಯೋಜಿಸುವ ಮೂಲಕ ಆಗಿರುವ ತಪ್ಪನ್ನು ಸರಿಪಡಿಸಬೇಕು. ಈ ಬಗ್ಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಕಟೀಲು ಕ್ಷೇತ್ರದ ಭಕ್ತರ ಒಂದು ಸಮೂಹ ಹಾಗೂ ಪಟ್ಲ ಅಭಿಮಾನಿ ಬಳಗದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಭಾಗವತ ಪಟ್ಲ ಸತೀಶ್‌ ಶೆಟ್ಟಿಯವರಿಗೆ ಭಾಗವತಿಕೆಗೆ ಅವಕಾಶ ನೀಡದಿರುವುದು ಖಂಡನೀಯ. ಭಾಗವತರನ್ನು ರಂಗಸ್ಥಳದಿಂದ ಇಳಿಸಿದ ಆಡಳಿತದ ಕ್ರಮವನ್ನು ಖಂಡಿಸುವ ನಿರ್ಣಯವನ್ನು ಶನಿವಾರ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಕಲಾವಿದ ಸರಪಾಡಿ ಅಶೋಕ್‌ ಶೆಟ್ಟಿ ಮಾತನಾಡಿ, ‘ಘಟನೆ ಅತೀವ ನೋವು ತಂದಿದೆ. ಇದು ಕಲಾವಿದರಿಗೆ ಅವಮಾನ’ ಎಂದರು.

ADVERTISEMENT

ಡಾ. ಪ್ರಭಾಕರ ಜೋಷಿ ಮಾತನಾಡಿ, ‘ಯಕ್ಷಗಾನ ರಂಗದಲ್ಲಿ ನನ್ನ 55 ವರ್ಷಗಳ ಅನುಭವದಲ್ಲಿ ಇಂತಹ ಘಟನೆ ನಡೆದಿರಲಿಲ್ಲ’ ಎಂದರು.ಕಲಾವಿದ ಸಂಜಯ ಕುಮಾರ್‌ ಗೋಣಿಬೀಡು, ‘ಪಟ್ಲ ಸತೀಶ್‌ ಶೆಟ್ಟಿಯವರಿಗೆ ನ್ಯಾಯ ಸಿಗಬೇಕು ಮತ್ತು ಪ್ರಕರಣ ಸುಖಾಂತ್ಯ ಆಗಬೇಕು’ ಎಂದು ಆಗ್ರಹಿಸಿದರು.

ಕದ್ರಿ ನವನೀತ ಶೆಟ್ಟಿ, ಬೋಳಾರ ತಾರಾನಾಥ ಶೆಟ್ಟಿ, ಪ್ರದೀಪ್‌ ಆಳ್ವ, ದೇವಿ ಪ್ರಸಾದ್‌ ಶೆಟ್ಟಿ, ಆರ್‌.ಕೆ. ಭಟ್‌, ಸಂಜಯ ರಾವ್‌, ಸತ್ಯನಾರಾಯಣ ಪುಣಿಂಚಿತ್ತಾಯ, ಶಾಂತಾರಾಮ ಕುಡ್ವಾ ಘಟನೆಯನ್ನು ಖಂಡಿಸಿದರು.

ಸೂಚನೆ ನೀಡಿರಲಿಲ್ಲ: ಘಟನೆಯ ಬಗ್ಗೆ ಸಭೆಯಲ್ಲಿ ವಿವರ ನೀಡಿದ ಪಟ್ಲ ಸತೀಶ್‌ ಶೆಟ್ಟಿ, ‘ರಂಗಸ್ಥಳಕ್ಕೆ ಭಾಗವತಿಕೆಗೆ ಹೋಗದಂತೆ ನನಗೆ ಮೊದಲು ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಮೇಳದ ವ್ಯವಸ್ಥಾಪಕರು ಕೂಡ ವಿಷಯ ತಿಳಿಸಿರಲಿಲ್ಲ. ನಾನು ನಮ್ಮ ಮೇಳದ ಹಿರಿಯ ಭಾಗವತರಿಂದ ಅನುಮತಿ ಪಡೆದು ರಂಗಸ್ಥಳಕ್ಕೆ ಹೋದೆ. ಆಗ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಅವರು ನನ್ನನ್ನು ಭಾಗವತಿಕೆ ಮಾಡದಂತೆ ಹಿಂದಕ್ಕೆ ಕರೆಸಿದರು’ ಎಂದು ತಿಳಿಸಿದರು.

‘ಮೇಳದ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದ 7 ಕಲಾವಿದರನ್ನು ಮೇಳದ ಯಜಮಾನರು ಶ್ರೀ ಕ್ಷೇತ್ರಕ್ಕೆ ಕರೆಯಿಸಿ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ನನ್ನಲ್ಲಿ ಏನಾದರೂ ತಪ್ಪಾಗಿದ್ದರೆ ನನ್ನನ್ನೂ ಕರೆಯಿಸಿ ಕೇಳಬಹುದಿತ್ತು. ಇದು ಯಾವುದೂ ಮಾಡದೇ ನಾನು ರಂಗಸ್ಥಳಕ್ಕೆ ಹೋದ ಮೇಲೆ ನನ್ನನ್ನು ಹಿಂದಕ್ಕೆ ಕರೆದಿದ್ದಾರೆ. ಸುಮಾರು 20 ವರ್ಷಗಳಿಂದ ನಾನು ಯಕ್ಷಗಾನ ಕಲಾಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ನನ್ನಿಂದ ಆದಷ್ಟು ಸಹಾಯ ಮಾಡಿದ್ದೇನೆ. ಮೇಳಕ್ಕೆ, ಯಜಮಾನರಿಗೆ, ಸೇವಾಕರ್ತರಿಗೆ ಎಂದೂ ದ್ರೋಹ ಮಾಡಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.