ADVERTISEMENT

10 ವರ್ಷವಾದರೂ ಸಿಗದ ಬಾಂಡ್ ‘ಭಾಗ್ಯ’!

ಭಾಗ್ಯಲಕ್ಷ್ಮಿ ಯೋಜನೆ: ಕಾದಿರುವ 1,885 ಫಲಾನುಭವಿಗಳು

ಎಂ.ಮಹೇಶ
Published 2 ಡಿಸೆಂಬರ್ 2018, 16:41 IST
Last Updated 2 ಡಿಸೆಂಬರ್ 2018, 16:41 IST
   

ಬೆಳಗಾವಿ: ಜಿಲ್ಲೆಯಲ್ಲಿ ‘ಭಾಗ್ಯಲಕ್ಷ್ಮಿ’ ಯೋಜನೆಯಡಿ 2008–09ನೇ ಸಾಲಿನಲ್ಲಿ ನೋಂದಣಿ ಮಾಡಿಸಿದ 1,553 ಹಾಗೂ 2009–10ನೇ ಸಾಲಿನ 332 ಫಲಾನುಭವಿಗಳಿಗೆ ಈವರೆಗೂ ಬಾಂಡ್‌ಗಳು ಬಂದಿಲ್ಲ. ಹೀಗಾಗಿ, ಸರ್ಕಾರದಿಂದ ತಮಗೆ ಸೌಲಭ್ಯ ದೊರೆಯುತ್ತದೆಯೋ, ಇಲ್ಲವೋ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ.

ಹೆಣ್ಣುಮಕ್ಕಳ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು ಹಾಗೂ ಅವರಿಗೆ ಆರ್ಥಿಕ ರಕ್ಷಣೆ ನೀಡುವ ಉದ್ದೇಶದಿಂದ 2006-07ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ‘ಭಾಗ್ಯಲಕ್ಷ್ಮಿ’ ಯೋಜನೆ ಜಾರಿಗೊಳಿಸಿದೆ. ಮಗು ಜನಿಸಿದ ವರ್ಷದೊಳಗೆ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಂಡ ಬಿಪಿಎಲ್‌ ಕುಟುಂಬದ ಇಬ್ಬರು ಬಾಲಕಿಯರಿಗೆ ಯೋಜನೆಯ ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಲಾಗಿತ್ತು. ₹19,300 ಮೊತ್ತದ ಠೇವಣಿಯನ್ನು ಮೊದಲ ಮಗುವಿನ ಹೆಸರಲ್ಲಿ ಮತ್ತು 2ನೇ ಮಗುವಿನ ಹೆಸರಲ್ಲಿ ₹ 18,350 ಇಡಲಾಗುತ್ತದೆ. ಫಲಾನುಭವಿಗೆ 18 ವರ್ಷ ಪೂರ್ಣಗೊಂಡ ನಂತರ ₹ 1,00,097 (ಮೊದಲ ಮಗುವಿಗೆ) ಮತ್ತು 1,00,059 (2ನೇ ಮಗುವಿಗೆ) ಮೊತ್ತವನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮಹತ್ವದ ದಾಖಲೆ:

ADVERTISEMENT

ಪೋಷಕರು ತಮ್ಮ ಮಕ್ಕಳಿಗೆ ಈ ಅರ್ಥಿಕ ಸೌಲಭ್ಯ ದೊರಕಿಸುವುದಕ್ಕಾಗಿ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮೂಲಕ ಸರ್ಕಾರವು ಕೊಡಿಸುವ ಬಾಂಡ್‌ ಮಹತ್ವದ ದಾಖಲೆಯಾಗುತ್ತದೆ. ಹೀಗಾಗಿ, ಪೋಷಕರು ಬಾಂಡ್‌ ಎದುರುನೋಡುತ್ತಿದ್ದಾರೆ. ಈವರೆಗೆ ನೋಂದಾಯಿಸಿದ ಸಾವಿರಾರು ಮಂದಿಗೆ ತಲುಪಿವೆ. ಆದರೆ, 2008–09 ಹಾಗೂ 2009–10ನೇ ಸಾಲಿನಲ್ಲಿ ನೋಂದಣಿ ಮಾಡಿಸಿಕೊಂಡ ಹಲವರಿಗೆ ಮಾತ್ರ ಬಾಂಡ್‌ ತಲುಪದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

‘ಜಿಲ್ಲೆಯಲ್ಲಿ ಕೆಲವು ಫಲಾನುಭವಿಗಳಿಗೆ 10 ವರ್ಷವಾದರೂ ಬಾಂಡ್‌ಗಳು ಬಂದಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಪ್ರಗತಿ ಪರಿಶೀಲನೆ ವೇಳೆ, ವಿಷಯ ಕೇಳಿ ಅಚ್ಚರಿಯಾಯಿತು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಸಮಸ್ಯೆ ಪರಿಹಾರಕ್ಕೆ ಕೋರಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲವನ್ನೂ ಕಳುಹಿಸಲಾಗಿದೆ:

‘ಯೋಜನೆ ಆರಂಭದ ದಿನಗಳಲ್ಲಿ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸುತ್ತಿರಲಿಲ್ಲ. ದಾಖಲೆಗಳನ್ನು ಮಂಜೂರಾತಿ ಆದೇಶದ ಸಮೇತ ಸಿ.ಡಿಯಲ್ಲಿ ದಾಖಲಿಸಿ ಅದನ್ನು ಪ್ರಧಾನ ಕಚೇರಿಗೆ ರವಾನಿಸುತ್ತಿದ್ದೆವು. ಅಲ್ಲಿ ಪರಿಶೀಲಿಸಿದ ನಂತರ, ಎಲ್‌ಐಸಿಗೆ ಕಳುಹಿಸಲಾಗುತ್ತಿತ್ತು. ನಿಗಮದವರು ಸಂಬಂಧಿಸಿದವರಿಗೆ ಬಾಂಡ್‌ಗಳನ್ನು ನೀಡುತ್ತಿದ್ದರು. ಎಲ್ಲ ದಾಖಲೆಗಳನ್ನು ಸಕಾಲದಲ್ಲಿಯೇ ತಲುಪಿಸಲಾಗಿದೆ. ಆದರೆ, ಬಾಂಡ್‌ಗಳು ಬಾರದಿರಲು ಕಾರಣವೇನು ಎನ್ನುವುದು ಗೊತ್ತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಎಲ್ಲ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಂಡಿರುವ ಪೋಷಕರು, ಆಗಾಗ ಬಂದು ಬಾಂಡ್‌ಗಳ ಬಗ್ಗೆ ವಿಚಾರಿಸುತ್ತಾರೆ. ಹಲವು ಬಾರಿ ಪತ್ರ ವ್ಯವಹಾರ ನಡೆಸಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

*ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
-ಆರ್. ರಾಮಚಂದ್ರನ್,ಸಿಇಒ, ಜಿಲ್ಲಾ ಪಂಚಾಯ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.