ಬೆಂಗಳೂರು: ಪಂಚಾಯತ್ ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಲು ಸದ್ಯ ಇರುವ ಎರಡು ಪ್ರವರ್ಗಗಳನ್ನು ನಾಲ್ಕು ಪ್ರವರ್ಗಗಳಾಗಿ ಮರು ವರ್ಗೀಕರಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಆಯಾ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯವನ್ನು ಖಚಿತಪಡಿಸಿದ ಬಳಿಕವೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಮತ್ತು ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲು, ಅಧ್ಯಯನ ನಡೆಸಿ ಶಿಫಾರಸು ಮಾಡಲು 2022ರ ಮೇ 16ರಂದು ಈ ಆಯೋಗವನ್ನು ಸರ್ಕಾರ ರಚಿಸಿತ್ತು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು ಸ್ಥಾನಗಳಲ್ಲಿ ಹಿಂದುಳಿದ ಜಾತಿಗಳಿಗೆ ಶೇ 33ರಷ್ಟು ಮೀಸಲಾತಿಯಿದೆ. ಚುನಾವಣೆ ಉದ್ದೇಶಕ್ಕೆ ಹಿಂದುಳಿದ ವರ್ಗಗಳನ್ನು ಪ್ರವರ್ಗ 1, 2, 3 ಮತ್ತು 4 ಎಂದು ಮರು ವರ್ಗೀಕರಿಸಿ, ಮೊದಲ ಎರಡು ಪ್ರವರ್ಗಗಳಿಗೆ ತಲಾ ಶೇ 9.9ರಂತೆ ಮತ್ತು ಪ್ರವರ್ಗ 3 ಮತ್ತು 4ಕ್ಕೆ ತಲಾ ಶೇ 6.6ರಂತೆ ಹಂಚಿಕೆ ಮಾಡಬಹುದು ಎಂದು ಆಯೋಗ ತಿಳಿಸಿದೆ.
ಹಿಂದುಳಿದ ವರ್ಗಗಳ ಮರು ವರ್ಗೀಕರಣವೂ ಸೇರಿದಂತೆ ಒಟ್ಟು ಐದು ಶಿಫಾರಸುಗಳನ್ನು ಒಳಗೊಂಡ ಮುಖ್ಯ ವರದಿಯನ್ನು 2022ರ ಜುಲೈ 21ರಂದೇ ಸರ್ಕಾರಕ್ಕೆ ಆಯೋಗವು ಸಲ್ಲಿಸಿತ್ತು. ಆ ವರದಿಯಲ್ಲಿದ್ದ ಅಂಶಗಳನ್ನೇ ಪುನರುಚ್ಚರಿಸಿ 2022ರ ಅ. 31ರಂದು ಪೂರಕ ವರದಿಯನ್ನೂ ನೀಡಿತ್ತು. ಆ ಶಿಫಾರಸುಗಳ ಪೈಕಿ, ರಾಜ್ಯ ಸರ್ಕಾರವು ಅಲ್ಪಸಂಖ್ಯಾತರೂ ಸೇರಿದಂತೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಪರಿಣಾಮಕಾರಿಯಾಗಿ ಮೀಸಲಾತಿ ನೀಡುವ ಉದ್ದೇಶದಿಂದ, 2027 ಅಥವಾ 2028ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲು ಹಿಂದುಳಿದ ವರ್ಗಗಳಲ್ಲಿ ಇನ್ನೂ ಎರಡು ಪ್ರವರ್ಗಗಳನ್ನು ಸೃಜಿಸಲು ಹಿಂದುಳಿದ ವರ್ಗಗಳ ‘ಪ್ರವರ್ಗ ಎ’ ಮತ್ತು ‘ಪ್ರವರ್ಗ ಬಿ‘ಯನ್ನು ಮರು ವಿಂಗಡಿಸುವ ಬಗ್ಗೆ ಪರಿಶೀಲಿಸಬಹುದು ಎಂದು ಮಾಡಿದ್ದ ಶಿಫಾರಸಿನ ವರದಿಯನ್ನು ಆಯೋಗ ಸಲ್ಲಿಸಿದೆ. ಕೆಲಸ ಮುಗಿದಿರುವುದರಿಂದ ಆಯೋಗವನ್ನು ವಿಸರ್ಜಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಆಯೋಗದ ಶಿಫಾರಸುಗಳ ಪೈಕಿ, ಕೆಎಂಸಿ ಕಾಯ್ದೆ –1976ರ ಸೆಕ್ಷನ್ 10ಕ್ಕೆ ತಿದ್ದುಪಡಿ ತಂದು ಮೇಯರ್ ಮತ್ತು ಉಪ ಮೇಯರ್ ಅವಧಿ 30 ತಿಂಗಳಿಗೆ ನಿಗದಿಪಡಿಸಬೇಕೆಂಬ ಶಿಫಾರಸನ್ನು ಹೊರತುಪಡಿಸಿ ಉಳಿದವುಗಳಿಗೆ ಆಗಸ್ಟ್ 12ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಅನುಮೋದನೆ ನೀಡಿತ್ತು.
ಮರು ವರ್ಗೀಕರಣ ಯಾಕೆ?: ‘ರಾಜಕೀಯ ಮೀಸಲಾತಿ ನೀಡಲು ಹಿಂದುಳಿದ ವರ್ಗಗಳನ್ನು ‘ಪ್ರವರ್ಗ ಎ’ ಮತ್ತು ‘ಪ್ರವರ್ಗ ಬಿ’ ಎಂದು ವರ್ಗೀಕರಿಸಲಾಗಿದೆ. ಈ ‘ಪ್ರವರ್ಗ ಎ’ಯಲ್ಲಿ ‘ಪ್ರವರ್ಗ 1ಎ’ಯಲ್ಲಿರುವ ಅತ್ಯಂತ ಹಿಂದುಳಿದ 381 ಜಾತಿಗಳು, ‘ಪ್ರವರ್ಗ 2ಎ’ಯಲ್ಲಿರುವ 368 ಜಾತಿಗಳು ಮತ್ತು ಪ್ರವರ್ಗ 2ಬಿಯಲ್ಲಿರುವ ಮುಸ್ಲಿಮರು ಸೇರಿದ್ದಾರೆ. ಈ ಜಾತಿಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿರುವ ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಉಳಿದ ಹಿಂದುಳಿದ ವರ್ಗಗಳು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗುತ್ತಿವೆ. ಈ ಕಾರಣಕ್ಕೆ ಹಿಂದುಳಿದ ವರ್ಗಗಳನ್ನು ಮರು ವರ್ಗೀಕರಿಸುವ ಅಗತ್ಯವಿದೆ’ ಎಂದು ಆಯೋಗ ಪ್ರತಿಪಾದಿಸಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಈಗಿರುವ ಎರಡು ಪ್ರವರ್ಗಗಳನ್ನು ನಾಲ್ಕು ಪ್ರವರ್ಗಗಳಾಗಿ ಮರು ವರ್ಗೀಕರಿಸಲು ಶಿಫಾರಸು ಮಾಡಲಾಗಿದೆ.ಕೆ. ಭಕ್ತವತ್ಸಲ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ
ಈಗಿರುವ ರಾಜಕೀಯ ಮೀಸಲಾತಿ
ರಾಜ್ಯದಲ್ಲಿ ಶಿಕ್ಷಣ ಮತ್ತು ಉದೋಗದಲ್ಲಿ ಮೀಸಲಾತಿ ನೀಡಲು ಹಿಂದುಳಿದ ಜಾತಿಗಳನ್ನು ಪ್ರವರ್ಗ 1ಎ 2ಎ 2ಬಿ 3ಎ ಮತ್ತು 3ಬಿ ಎಂದು ವರ್ಗೀಕರಿಸಲಾಗಿದೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ‘ಹಿಂದುಳಿದ ವರ್ಗಗಳ ‘ಪ್ರವರ್ಗ–ಎ‘ ಮತ್ತು ‘ಪ್ರವರ್ಗ ಬಿ’ ಎಂದು ಮಾತ್ರ ವರ್ಗೀಕರಿಸಲಾಗಿದೆ. ಈ ಪ್ರವರ್ಗ ’ಎ‘ ಯಲ್ಲಿ 749 ಜಾತಿಗಳನ್ನು (ಪ್ರವರ್ಗ1 2ಎ 2ಬಿಯಲ್ಲಿರುವ ಜಾತಿಗಳು) ಒಂದೆಡೆ ಸೇರಿಸಿ ಒಟ್ಟು ಸ್ಥಾನಗಳ ಶೇ 33ರಲ್ಲಿ ಶೇ 80ರಷ್ಟು (ಅಂದರೆ ಶೇ 26.4) ಮೀಸಲಾತಿ ನೀಡಲಾಗಿದೆ. ಉಳಿದ ಎಲ್ಲ 53 ಹಿಂದುಳಿದ ಜಾತಿಗಳನ್ನು (ಪ್ರವರ್ಗ 3ಎ 3ಬಿಯಲ್ಲಿರುವ ಜಾತಿಗಳು) ‘ಪ್ರವರ್ಗ ಬಿ’ಯಲ್ಲಿ ತಂದು ಶೇ 20ರಷ್ಟು (ಅಂದರೆ ಶೇ 6.6) ಮೀಸಲಾತಿ ನೀಡಲಾಗಿದೆ.
ಒಟ್ಟು ಮೀಸಲಾತಿ ಶೇ 50 ಮೀರಬಾರದು
* ಹಿಂದುಳಿದ ವರ್ಗಗಳ ‘ಪ್ರವರ್ಗ ಎ’ ಮತ್ತು ’ಪ್ರವರ್ಗ ಬಿ’ ಸಮುದಾಯಗಳಿಗೆ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದರಷ್ಟು (ಶೇ 33ರಷ್ಟು) ರಾಜಕೀಯ ಮೀಸಲಾತಿಯನ್ನು ನೀಡುವ ನೀತಿ ರೂಪಿಸಬೇಕು. ಆದರೆ ಎಸ್‌ಸಿ ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಒಟ್ಟು ಮೀಸಲಾತಿ ಪ್ರಮಾಣ ಶೇ 50 ಮೀರಬಾರದು
* ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಲ್ಲಿಯೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಪರಿಶೀಲಿಸಬೇಕು
* ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ನಿಯಂತ್ರಣಕ್ಕೆ ತರಬೇಕು
* ಬಿಬಿಎಂಪಿ ಕಾಯ್ದೆ 2020ರ ಪ್ರಕಾರ ಮೇಯರ್ ಉಪ ಮೇಯರ್ ಅಧಿಕಾರ ಅವಧಿ 30 ತಿಂಗಳು. ಅದೇ ರೀತಿ ‘ಕರ್ನಾಟಕ ಪುರಸಭೆಗಳ (ಕೆಎಂಸಿ) ಕಾಯ್ದೆ 1976’ ರ ‘ಸೆಕ್ಷನ್ 10’ ಕ್ಕೆ ತಿದ್ದುಪಡಿಗೆ ಪರಿಗಣಿಸಿ ಮೇಯರ್ ಮತ್ತು ಉಪ ಮೇಯರ್ ಅವಧಿಯನ್ನು 30 ತಿಂಗಳಿಗೆ ನಿಗದಿಪಡಿಸಬೇಕು
* ಅಲ್ಪಸಂಖ್ಯಾತರೂ ಸೇರಿದಂತೆ ಒಬಿಸಿ ಪರ ಪರಿಣಾಮಕಾರಿಯಾಗಿ ಮೀಸಲಾತಿ ನೀಡುವ ಉದ್ದೇಶದಿಂದ ಮುಂದೆ 2027 ಅಥವಾ 2028ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲು ಹಿಂದುಳಿದ ವರ್ಗಗಳಲ್ಲಿ ಇನ್ನೂ ಎರಡು ಪ್ರವರ್ಗಗಳನ್ನು ಸೃಜಿಸಲು ಹಿಂದುಳಿದ ವರ್ಗಗಳ ‘ಪ್ರವರ್ಗ ಎ’ ಮತ್ತು ‘ಪ್ರವರ್ಗ ಬಿ‘ಯನ್ನು ಮರು ವಿಂಗಡಿಸುವ ಬಗ್ಗೆ ರಾಜ್ಯ ಸರ್ಕಾರ ಪರಿಶೀಲಿಸಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.