ಬೆಂಗಳೂರು: ಕಾವೇರಿ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ 5 ಮೆಗಾ ವಾಟ್ 'ಭರಚುಕ್ಕಿ ಕಿರು ಜಲ ವಿದ್ಯುತ್ ಯೋಜನೆ’ ಸ್ಥಾಪನೆಗಾಗಿ ‘ಮಧ್ಯರಂಗ ಎನರ್ಜಿ ಲಿಮಿಟೆಡ್’ ಸರ್ಕಾರಕ್ಕೆ ಎರಡನೇ ಬಾರಿ ಪ್ರಸ್ತಾವ ಸಲ್ಲಿಸಿದೆ.
ಈ ಹಿಂದೆ 2015ರಲ್ಲಿ 4.41 ಹೆಕ್ಟೇರ್ ಅರಣ್ಯ ಭೂಮಿಯನ್ನು ಜಲವಿದ್ಯುತ್ ಯೋಜನೆಗೆ ನೀಡಬೇಕು ಎಂದು ಪ್ರಸ್ತಾವ ಸಲ್ಲಿಸಿತ್ತು. ಭರಚುಕ್ಕಿ ಮೀಸಲು ಅರಣ್ಯ, ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಆನೆಗಳು ಓಡಾಡುವ ಪ್ರದೇಶವಾಗಿದ್ದರಿಂದ ಪ್ರಸ್ತಾವ ತಿರಸ್ಕರಿಸಲು ಅರಣ್ಯ ಇಲಾಖೆ ಶಿಫಾರಸ್ಸು ಮಾಡಿತ್ತು. ಇದೀಗ ವಿದ್ಯುತ್ ಯೋಜನೆಗೆ ಅಗತ್ಯವಿರುವ ಭೂಮಿಯ ವಿಸ್ತೀರ್ಣವನ್ನು ಕಡಿಮೆ ಮಾಡಿ ಮಧ್ಯರಂಗ ಸಂಸ್ಥೆ ಹೊಸದಾಗಿ ಪ್ರಸ್ತಾವ ಸಲ್ಲಿಸಿದ್ದು, ಅದು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೆ ತಿರಸ್ಕೃತಗೊಂಡಿದ್ದು ಏಕೆ?:
2015ರಲ್ಲಿ ಮಧ್ಯರಂಗ ಪ್ರಸ್ತಾವ ಸಲ್ಲಿಸಿದ್ದ ಹಿನ್ನೆಲೆಯಲ್ಲಿ 2016ರಲ್ಲಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್, ಕ್ಷೇತ್ರ ಪರಿಶೀಲನೆ ನಡೆಸಿ ಚಾಮರಾಜನಗರ ಸಿಸಿಎಫ್ ಅವರಿಗೆ ವರದಿ ಸಲ್ಲಿಸಿದ್ದರು.
‘ಯೋಜನೆಗೆ ಗುರುತಿಸಿರುವ ಸ್ಥಳವು ಭರಚುಕ್ಕಿ ಜಲಪಾತದ ನದಿ ಪಾತ್ರದಲ್ಲಿದ್ದು, ಇದು ಆನೆಗಳ ಸಂಚಾರದ ಕಾರಿಡಾರ್ ವ್ಯಾಪ್ತಿಯಲ್ಲಿದೆ. ಒಂದು ವೇಳೆ ಯೋಜನೆ ಜಾರಿಯಾದರೆ, ಇಲ್ಲಿ ಆನೆಗಳ ಸರಾಗ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಇದರಿಂದ ಮಾನವ– ಆನೆ ಸಂರ್ಘಕ್ಕೂ ಕಾರಣವಾಗುತ್ತದೆ. ಆದ್ದರಿಂದ ಈ ಯೋಜನೆ ಅನುಷ್ಠಾನ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ವರದಿ ಸ್ಪಷ್ಟವಾಗಿ ಹೇಳಿತ್ತು.
ಅಲ್ಲದೇ, ಉದ್ದೇಶಿತ ವೆಸ್ಲಿ ಪಕ್ಷಿಧಾಮದ ಜೀವ ವೈವಿಧ್ಯದ ಮೇಲೂ ಪರಿಣಾಮ ಬೀರುತ್ತದೆ. ವಿದ್ಯುತ್ ಉತ್ಪಾದನಾ ಘಟಕವು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳ ಮಧ್ಯೆ ಸ್ಥಾಪನೆಗೊಳ್ಳುವುದರಿಂದ ಭೂಗತ ನೀರಿನ ಪೈಪ್‌ಲೈನ್ ಮತ್ತು ಭೂಮಿಯ ಮೇಲಿನ ವಿದ್ಯುತ್ ಪೂರೈಕೆ ಲೈನ್‌ಗಳು ಪ್ರವಾಸಿಗರ ಪಾರ್ಕಿಂಗ್ ಜಾಗದಲ್ಲಿ ಹಾದು ಹೋಗುತ್ತವೆ. ಇದರಿಂದ ಅವಳಿ ಜಲಪಾತದ ಸಹಜ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಈಗಿರುವ ಕಟ್ಟಡಗಳು ಮತ್ತು ಭವಿಷ್ಯದ ಪರಿಸರ ಪ್ರವಾಸೋದ್ಯಮಕ್ಕೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿತ್ತು.
ಇದೇ ಜಾಗದಲ್ಲಿ 24.74 ಮೆ.ವಾ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆ ಸ್ಥಾಪನೆಗೆ ಬಸವೇಶ್ವರ ಮಿನಿ ಹೈಡಲ್ ಯೋಜನೆ 2012 ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ವನ್ಯಜೀವಿ ಮಂಡಳಿ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಈ ಜಾಗವು ಸತ್ತೇಗಾಲ ಗ್ರಾಮದ ವ್ಯಾಪ್ತಿಯಲ್ಲಿದ್ದು, ಈ ಜಾಗದ ಬಗ್ಗೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಮಧ್ಯೆ ತಕರಾರು ಇದೆ. ಈ ವಿಚಾರ ಹೈಕೋರ್ಟ್‌ನಲ್ಲಿ ಇದ್ದು, ಇನ್ನೂ ಇತ್ಯರ್ಥವಾಗಿಲ್ಲ. ಆದ್ದರಿಂದ, ಭೂಮಿಯನ್ನು ಕೊಡಬಾರದು ಎಂದು ವರದಿಯಲ್ಲಿ ಹೇಳಿತ್ತು.
ಸತ್ತೇಗಾಲ ಅರಣ್ಯ ಪ್ರದೇಶದಲ್ಲಿ ಆನೆಗಳು, ಚಿರತೆ, ನೀರು ನಾಯಿ, ಮಹಶೀರ್ ಮೀನು, ಮೊಸಳೆ ಮುಂತಾದ ಅಪರೂಪದ ಪ್ರಾಣಿಗಳು ವಾಸವಿರುವುದರಿಂದ ಯೋಜನೆಗೆ ಅನುಮತಿ ನೀಡಬಾರದು ಎಂದು ಶಿಫಾರಸ್ಸು ಮಾಡಿತ್ತು.
ಹೊಸ ಪ್ರಸ್ತಾವದಲ್ಲಿ ಏನಿದೆ?
ಈ ಬಾರಿ 3.6 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ಮಧ್ಯರಂಗ ಪ್ರಸ್ತಾವ ಸಲ್ಲಿಸಿದೆ. ಇದರಲ್ಲಿ ಅರಣ್ಯ ಭೂಮಿ 1.45 ಹೆಕ್ಟೇರ್ ಅರಣ್ಯೇತರ ಭೂಮಿ 2.15 ಹೆಕ್ಟೇರ್. ಈ ಯೋಜನೆಯನ್ನು ₹38 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. 1.45 ಹೆಕ್ಟೇರ್ ಅರಣ್ಯ ಭೂಮಿಯನ್ನು ಈ ಯೋಜನೆಗೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದೆ.
ನ್ಯಾಯಾಲಯದ ತೀರ್ಪಿಗೆ ವಿರುದ್ಧ
ಮಾನವ- ಆನೆ ಸಂಘರ್ಷ ಕಡಿಮೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರೇ ಅಂತಾರಾಷ್ಟ್ರೀಯ ಮಾನವ- ಆನೆ ಸಂಘರ್ಷ ಸಮ್ಮೇಳನದಲ್ಲಿ ಹೇಳಿದ್ದರು. ಆದ್ದರಿಂದ ಯೋಜನೆಯನ್ನು ತಿರಸ್ಕರಿಸುವ ಮೂಲಕ ಸರ್ಕಾರ ತನ್ನ ಬದ್ಧತೆ ತೋರಿಸಬೇಕು. ಯೋಜನೆಗೆ ಅನುಮತಿ ನೀಡಿದ್ದೆ ಆದಲ್ಲಿ ಆನೆ ಸಂಘರ್ಷ ಕುರಿತು ಆನೆ ಕಾರ್ಯಪಡೆಯ ಶಿಫಾರಸ್ಸಿನ ಮೇರೆಗೆ ಹೈಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಲಿದೆ’ ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಗಿರಿಧರ ಕುಲಕರ್ಣಿ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.