ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಗೆ ರಾಜ್ಯದಲ್ಲಿ ಉತ್ತಮ ಜನಸ್ಪಂದನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.
ಚಿಕ್ಕಮಗಳೂರಿಂದ ಇಂದಿರಾ ಗಾಂಧಿ ಹಾಗೂ ಬಳ್ಳಾರಿಯಿಂದ ಸೋನಿಯಾ ಗಾಂಧಿ ಸಂಸದರಾಗಿ ಆಯ್ಕೆಯಾಗಿದ್ದ ವಿಚಾರವನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ.
‘ಇಂದಿರಾ ಗಾಂಧಿಯವರ ರಾಜಕೀಯ ಜೀವನದಲ್ಲಿ ಮಹತ್ತರ ಶಕ್ತಿ ತುಂಬಿದ್ದು ಕರ್ನಾಟಕದ ಚಿಕ್ಕಮಗಳೂರು. ಸೋನಿಯಾ ಗಾಂಧಿಯವರನ್ನು ಲೋಕಸಭೆಗೆ ಆಯ್ಕೆ ಮಾಡಿದ್ದು ಬಳ್ಳಾರಿ’ ಎಂದು ತಿಳಿಸಿದೆ.
‘ಇತಿಹಾಸದಲ್ಲಿ ಕಾಂಗ್ರೆಸ್ ಪುಟಿದೆದ್ದಿದ್ದು ಕರ್ನಾಟಕದ ನೆಲದಿಂದಲೇ, ಈಗಲೂ ಮತ್ತೊಮ್ಮೆ ಇತಿಹಾಸ ಮರುಕಳಿಸಲಿದೆ’ ಎಂದು ಹೇಳಿದೆ.
‘ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಹೆಜ್ಜೆ ಹಾಕಿದರು, ಭವ್ಯ ಭಾರತದೆಡೆಗೆ ಅವರಿಗಿರುವ ಪ್ರೀತಿ, ಅಭಿಮಾನ, ಬದ್ಧತೆಗಳಿಗೆ ವಯಸ್ಸು, ಆಯಾಸ, ಅನಾರೋಗ್ಯ ಯಾವುದೂ ಅಡ್ಡಿಯಾಗುವುದಿಲ್ಲ. ಅನಾರೋಗ್ಯದಲ್ಲೂ ಅವರ ಈ ಉತ್ಸಾಹವು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ಟ್ವೀಟಿಸಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಬೆಳ್ಳಾಳೆಯಿಂದ ಇಂದು ಆರಂಭಗೊಂಡ ಭಾರತ್ ಜೋಡೊ ಪಾದಯಾತ್ರೆ ಜಕ್ಕನಹಳ್ಳಿ ಕ್ರಾಸ್ ತಲುಪಿದೆ. ಇಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.