ADVERTISEMENT

ಸಹಬಾಳ್ವೆ ಸಿದ್ಧಾಂತ ಮುಂದಿಟ್ಟು ‘ಭಾರತ ಒಗ್ಗೂಡಿಸಿ’ ಯಾತ್ರೆ: ದಿಗ್ವಿಜಯ ಸಿಂಗ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 9:34 IST
Last Updated 1 ಸೆಪ್ಟೆಂಬರ್ 2022, 9:34 IST
   

ಬೆಂಗಳೂರು: ‘ಭಾರತ ಒಗ್ಗೂಡಿಸಿ (ಭಾರತ್ ಜೋಡೋ) ಯಾತ್ರೆ ಪಕ್ಷದ ಬಹುದೊಡ್ಡ ರಾಜಕೀಯ ಕಾರ್ಯಕ್ರಮ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಈ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಸರ್ವಧರ್ಮ ಸಹಬಾಳ್ವೆ ನಮ್ಮ ಪಕ್ಷದ ಸಿದ್ಧಾಂತ. ಈ ಸಿದ್ಧಾಂತ ಮುಂದಿಟ್ಟುಕೊಂಡೇ ಈ ಯಾತ್ರೆ ನಡೆಯಲಿದೆ’ ಎಂದು ಯಾತ್ರೆಯ ರಾಷ್ಟ್ರೀಯ ಸಮಿತಿ ಅಧ್ಯಕ್ಷ ದಿಗ್ವಿಜಯ ಸಿಂಗ್ ಹೇಳಿದರು.

‘ಭಾರತ್ ಜೋಡೋ’ ಯಾತ್ರೆ ಕುರಿತು ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳು, ನಾನಾ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಸಮನ್ವಯಕಾರರು, ಹಿರಿಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಭ್ರಷ್ಟಾಚಾರ, ಜಿಎಸ್‌ಟಿ, ನಿರುದ್ಯೋಗ, ಬಡತನ ಇವುಗಳನ್ನು ಮುಂದಿಟ್ಟುಕೊಂಡು ಯಾತ್ರೆ ಮಾಡುತ್ತೇವೆ. ದೇಶದ ಜನರನ್ನು ಒಂದುಗೂಡಿಸಲು ಹೊರಟಿದ್ದೇವೆ‘ ಎಂದರು.

ADVERTISEMENT

‘ಬಿಜೆಪಿ ಕೋಮುವಾದ ರಾಜಕಾರಣ ಮಾಡುತ್ತಿದೆ. ಆದರೆ, ನಮ್ಮದು ಸರ್ವರನ್ನೊಳಗೊಂಡ ಅಭಿವೃದ್ಧಿ ಸಿದ್ಧಾಂತ. ಮೂರು ಹಂತಗಳಲ್ಲಿ ಈ ಯಾತ್ರೆ ನಡೆಯಲಿದೆ. ಕರ್ನಾಟಕದಲ್ಲಿ 21 ದಿನ ಪಾದಯಾತ್ರೆ ಸಾಗಲಿದೆ. ರಾಹುಲ್ ಗಾಂಧಿ ಜೊತೆ ಎಲ್ಲರೂ ಹೆಜ್ಜೆ ಹಾಕಲಿದ್ದಾರೆ. ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬಹುದು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಇದೆ. ಇದೊಂದು ಯಾತ್ರೆ ಎಲ್ಲರನ್ನೂ‌ ತಲುಪಲಿದೆ. ಹಳ್ಳಿ, ಗ್ರಾಮ, ತಾಂಡಾ, ಕೇರಿ ಎಲ್ಲವನ್ನೂ ಸುತ್ತಲಿದೆ. ಪಾದಯಾತ್ರೆಯ ಸಂದೇಶ ಎಲ್ಲರನ್ನು ತಲುಪಲಿದೆ’ ಎಂದರು.

‘ಪ್ರತಿದಿನ 7 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ವಿಭಿನ್ನ ಸಮುದಾಯಗಳ ಜನರ ಜೊತೆ ಸಂವಾದ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಪಾದಯಾತ್ರೆ ಮಾರ್ಗದಲ್ಲೇ ಈ ಮಾತುಕತೆ ನಡೆಸುತ್ತಾರೆ. ಮಧ್ಯಾಹ್ನ 3.30ಕ್ಕೆ ಮತ್ತೆ ಪಾದಯಾತ್ರೆ ಮುಂದುವರೆಯಲಿದೆ. ಈ ಪಾದಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಗಲಿದೆ. ಇಡೀ ದೇಶವನ್ನು ಈ ಯಾತ್ರೆ ಬದಲಾವಣೆ ಮಾಡಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜೈರಾಂ ರಮೇಶ್ ಮಾತನಾಡಿ, ‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಸಾಗಲಿದೆ. ಒಟ್ಟು 3,570ಕಿ.ಮೀ ದೂರ ಈ ಯಾತ್ರೆ ಇರಲಿದೆ. 12 ರಾಜ್ಯಗಳಲ್ಲಿ ಪಾದಯಾತ್ರೆ ಸಾಗಲಿದೆ. ಸೆ. 7ರಂದು ಯಾತ್ರೆ ಆರಂಭವಾಗಲಿದೆ. ತಮಿಳುನಾಡು 3,‌ ಕೇರಳ 18, ಕರ್ನಾಟಕ 21, ತೆಲಂಗಾಣ 21, ಆಂಧ್ರಪ್ರದೇಶ 3, ಮಹಾರಾಷ್ಟ್ರ 16, ಮಧ್ಯಪ್ರದೇಶ 16, ರಾಜಸ್ತಾನ 21, ಉತ್ತರಪ್ರದೇಶ 3, ಹರ್ಯಾಣ 2, ಜಮ್ಮು- ಕಾಶ್ಮೀರದಲ್ಲಿ 2 ದಿನ ಯಾತ್ರೆ ಸಾಗಲಿದೆ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಯಾತ್ರೆ ಸಾಗುವುದಿಲ್ಲ’ ಎಂದು ಮಾಹಿತಿ ನೀಡಿದರು.

‘ಇದು ಮನ್ ಕಿ‌ ಬಾತ್ ಅಲ್ಲ. ಇದು ಜನತಾ ಕಿ ಚಿಂತನ್ ಯಾತ್ರೆ. ಭಾರತ್ ಜೋಡೋದಲ್ಲಿ‌ ಯಾವುದೇ ಭಾಷಣ ಇಲ್ಲ. ಇದೊಂದು ಮೌನ ಪಾದಯಾತ್ರೆ. ಪ್ರಧಾನಿಯವರ ವಿರುದ್ಧ ಘೋಷಣೆ ಕೂಗುವುದಲ್ಲ. ಜನರ ಸಮಸ್ಯೆಗಳನ್ನು ಅರಿಯುವ ಕಾರ್ಯಕ್ರಮ. ಪಾದಯಾತ್ರೆ ವೇಳೆ ಆಶಾ ಕಾರ್ಯಕರ್ತೆಯರು, ನರೇಗಾ ಕೂಲಿ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತೇವೆ‘ ಎಂದರು.

‘ಪಕ್ಷ‌ ಬಿಟ್ಟು ಹೋಗುವವರು ಹೋಗಲಿ. ಕೆಲವರು ಡಿಪಾರ್ಚರ್ ಲಾಂಜ್‌ನಲ್ಲಿ ನಿಂತಿದ್ದಾರೆ. ಹೇಳಿಕೆಗಳನ್ನೂ ಕೊಡುತ್ತಿದ್ದಾರೆ. ಹೋಗುವವರು ಹೋಗಲಿ, ಮಾತನಾಡುವವರು ಮಾತನಾಡಲಿ. ಯಾವುದೇ ಕಾರಣಕ್ಕೂ ಈ ಯಾತ್ರೆ ನಿಲ್ಲುವುದಿಲ್ಲ‘ ಎಂದು ಸ್ಪಷ್ಟಪಡಿಸಿದರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಟೆಕ್ನಾಲಜಿ‌ ಬೆಳೆಯಬೇಕು, ಶಿಕ್ಷಣ ಎಲ್ಲರಿಗೂ ಸಿಗಬೇಕು ಎಂದು ರಾಜೀವ್ ಗಾಂಧಿ ಬಯಸಿದ್ದರು. ಇವತ್ತು ಇವನ್ನೆಲ್ಲ ಮೋದಿ ಮಾರಿಕೊಂಡು ತಿನ್ನುತ್ತಿದ್ದಾರೆ. ಗೋದಿ, ಬೆಲ್ಲ ಮಾರಾಟ ಮಾಡುತ್ತಿದ್ದ ಅದಾನಿ ಜಗತ್ತಿನ ಮೂರನೇ ಶ್ರೀಮಂತನಾಗಿದ್ದಾನೆ. ಯಾರು ಇವನಿಗೆ ಸಹಾಯ ಮಾಡಿದ್ದು? ಇದೇ ಮೋದಿ’ ಎಂದು ವಾಗ್ದಾಳಿ ನಡೆಸಿದರು.

‘ಲೋಕತಂತ್ರ, ಪ್ರಜಾತಂತ್ರ ಉಳಿವಿಗೆ ಎಲ್ಲರೂ ಭಾರತ್‌ ಜೋಡೋದಲ್ಲಿ ಭಾಗವಹಿಸಬೇಕು. ಈ ಪಾದಯಾತ್ರೆಯಿಂದ ಪಕ್ಷಕ್ಕೇನು ಲಾಭವಿಲ್ಲ. ಪಾದಯಾತ್ರೆ ಮಾಡುತ್ತಿರುವುದು ದೇಶದ ಉಳಿವಿಗಾಗಿ. ಹಲವು‌ ಮಹನೀಯರು ಈ ದೇಶ ಕಟ್ಟಿದ್ದಾರೆ. ದೇಶ ಕಟ್ಟಿದ್ದಕ್ಕೆ ವೈದ್ಯರು, ಎಂಜಿನಿಯರ್ ಸಿಕ್ಕಿದ್ದಾರೆ. ಅವರ ನೈತಿಕ ಧೈರ್ಯ ಕುಸಿಯುವ ಪ್ರಯತ್ನವನ್ನು ಮೋದಿ ಮಾಡುತ್ತಿದ್ದಾರೆ. ಚುನಾವಣೆಗಾಗಿ ಈ ಪಾದಯಾತ್ರೆ ಅಂತಿದ್ದಾರೆ. ಆದರೆ ಅದಕ್ಕಲ್ಲ, ಎಲ್ಲರ ಉಳಿವಿಗಾಗಿ ಈ ಯಾತ್ರೆ ನಡೆಯುತ್ತಿದೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಆರ್‌. ಧ್ರುವನಾರಾಯಣ್, ಹಿರಿಯ ಮುಖಂಡರಾದ ಎಚ್‌.ಕೆ. ಪಾಟೀಲ, ಕೆ.ಜೆ. ಜಾರ್ಜ್, ಯು.ಟಿ. ಖಾದರ್, ಅಲ್ಲಂ ವೀರಭದ್ರಪ್ಪ, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಚಲುವರಾಯಸ್ವಾಮಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.