ADVERTISEMENT

ಮುಕ್ತ ಮನಸ್ಸಿನ ರಾಹುಲ್ ಜೊತೆ ಹೆಜ್ಜೆ...: ಹುಬ್ಬಳ್ಳಿಯ ಕಿರಣ್ ಮೂಗಬಸವ ಮಾತು

136 ದಿನಗಳ ‘ಭಾರತ್ ಜೋಡೊ’ ಪಾದಯಾತ್ರೆ: ಹುಬ್ಬಳ್ಳಿಯ ಕಿರಣ್ ಮೂಗಬಸವ ಭಾಗಿ

ರಾಮಕೃಷ್ಣ ಸಿದ್ರಪಾಲ
Published 4 ಫೆಬ್ರುವರಿ 2023, 4:33 IST
Last Updated 4 ಫೆಬ್ರುವರಿ 2023, 4:33 IST
ರಾಹುಲ್‌ ಗಾಂಧಿ ಅವರೊಂದಿಗೆ ‘ಭಾರತ್ ಜೋಡೊ’ ಯಾತ್ರೆಯಲ್ಲಿ ಹೆಜ್ಜೆಹಾಕಿದ್ದ ಹುಬ್ಬಳ್ಳಿಯ ಕಿರಣ್ ಮೂಗಬಸವ
ರಾಹುಲ್‌ ಗಾಂಧಿ ಅವರೊಂದಿಗೆ ‘ಭಾರತ್ ಜೋಡೊ’ ಯಾತ್ರೆಯಲ್ಲಿ ಹೆಜ್ಜೆಹಾಕಿದ್ದ ಹುಬ್ಬಳ್ಳಿಯ ಕಿರಣ್ ಮೂಗಬಸವ   

ಹುಬ್ಬಳ್ಳಿ: ‘ವಿವಿಧತೆಯಲ್ಲಿ ಏಕತೆ ಅಂದರೆ ಏನು? ಅನ್ನುವುದನ್ನು ನಾವು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಕಣ್ಣಾರೆ
ಕಂಡೆವು, ರಾಹುಲ್‌ ಜೊತೆಗೆ 136 ದಿನಗಳ ಕಾಲ ನಿರಂತರವಾಗಿ ಹೆಜ್ಜೆ ಹಾಕಿದ್ದು ಬದುಕಿನಲ್ಲಿ ಮರೆಯಲಾಗದ ಅನುಭವ...’

‘ರಾಹುಲ್‌ ಅವರದ್ದು ಮಾತು ಕಡಿಮೆ; ಮುಕ್ತ ಮನಸ್ಸು. ದೂರದೃಷ್ಟಿ ಯುಳ್ಳ ನಾಯಕ. ಜನರ ಸಂಕಷ್ಟ ಅರಿಯಲು ಪಾದಯಾತ್ರೆಯೇ ಸೂಕ್ತವೆಂದು ನಂಬಿದ್ದರು, ಅದರಂತೆ ನಡೆದ ಸರಳ ವ್ಯಕ್ತಿ...’

–ರಾಹುಲ್‌ ಗಾಂಧಿ ಅವರೊಂದಿಗೆ ‘ಭಾರತ್ ಜೋಡೊ’ ಯಾತ್ರೆಯಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದ ಪಂಥ್‌ಚೌಕ್‌ನಲ್ಲಿ ತ್ರಿವರ್ಣಧ್ವಜ ಹಾರಿಸುವವರೆಗೆ ಒಟ್ಟು 136 ದಿನಗಳ ಕಾಲ, 14 ರಾಜ್ಯ, 75 ಜಿಲ್ಲೆಗಳಲ್ಲಿ ಸಾಗಿ, 3,570 ಕಿ.ಮೀ ಹೆಜ್ಜೆ ಹಾಕಿರುವ ಹುಬ್ಬಳ್ಳಿಯ ಕಿರಣ್ ಮೂಗಬಸವ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಮನದಾಳದ ಮಾತುಗಳಿವು.

ADVERTISEMENT

ಈ ಯಾತ್ರೆಯು ಎರಡು ಸಿದ್ಧಾಂತಗಳ
ನಡುವಿನ ಹೋರಾಟವೂ ಆಗಿತ್ತು. ದೇಶದಲ್ಲಿನ ನಿರುದ್ಯೋಗ, ಹಣದುಬ್ಬರ, ವರ್ಗ ಮತ್ತು ಜಾತಿ ಆಧಾರದ ಮೇಲೆ ವಿಭಜನೆ, ದ್ವೇಷದ ರಾಜಕೀಯ... ಇವೆಲ್ಲವನ್ನು ಈ ಪಯಣ
ದಲ್ಲಿ ಕಂಡೆವು ಎನ್ನುತ್ತಾರೆ ಅವರು.

ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ
ಕಿರಣ್ ರಾಹುಲ್ ಗಾಂಧಿ ಅವರ ‘ಜೋಡೊ–ಯಾತ್ರೆ’ 120 ಮಂದಿಯ
ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದ
ವರಲ್ಲಿ ಒಬ್ಬರು. ಅವರ ಅನುಭವಗಳನ್ನು ಅವರದೇ ಮಾತುಗಳಲ್ಲಿ ಕೇಳೋಣ.

ಯಾತ್ರೆ ಹೇಗಿತ್ತು?: ‘ಕನ್ಯಾಕುಮಾರಿಯಲ್ಲಿ ಸೆ.7ರಂದು ಗಾಂಧಿಮಂಟಪದ ಬಳಿಯಿಂದ ಯಾತ್ರೆ ಆರಂಭ. ಪ್ರತಿದಿನ ಬೆಳಿಗ್ಗೆ 4.30ರಿಂದ 5 ಗಂಟೆಯೊಳಗೆ ಎದ್ದು ಸ್ನಾನಾದಿ ಮುಗಿಸಿ, ತಿಂಡಿ ತಿಂದು 6 ಗಂಟೆಗೆ ನಡೆಯಲು ಶುರು ಮಾಡಿ 10 ಗಂಟೆಯ ವರೆಗೆ ನಡೆಯುತ್ತಿದ್ದೆವು. ನಿಗದಿತ ಸ್ಥಳ ತಲುಪಿ ಮಧ್ಯಾಹ್ನ 1ಕ್ಕೆ ಊಟ, 2.30ರ ವರೆಗೆ ವಿಶ್ರಾಂತಿ, ಸಂಜೆ 5.30–6ರ ವರೆಗೆ ನಡಿಗೆ. ರಾತ್ರಿ
ನಮ್ಮ ಕಂಟೈನರ್‌ನಲ್ಲಿ ವಸತಿ. ನಿತ್ಯವೂ
ಆಯಾ ಸ್ಥಳಗಳಲ್ಲಿ ನಾನಾ ಸ್ತರದ ಜನರೊಂದಿಗೆ ಮಾತುಕತೆ, ಅವರ ಕಷ್ಟ, ಸುಖ ಆಲಿಸುತ್ತಿದ್ದೆವು’.

‘ಪ್ರತಿಯೊಂದು ರಾಜ್ಯದಲ್ಲಿ ಹೆಜ್ಜೆಹಾಕುವಾಗಲೂ ಹೊಸ ಅನುಭವ ನಮಗೆ ಎದುರಾಗುತ್ತಿತ್ತು. ಕನ್ಯಾಕುಮಾರಿಯಲ್ಲಿ ಸೆಕೆ, ಮಳೆ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ನದಿ ದಂಡೆ ಮೇಲೆ ಪಯಣ, ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶಗಳಲ್ಲಿ ಚಳಿ, ಶ್ರೀನಗರ ತಲುಪುವಾಗ ಹಿಮಪಾತ...ಹೀಗೆ ಎಲ್ಲ ವಾತಾವರಣಗಳಲ್ಲಿ ಹೆಜ್ಜೆ ಹಾಕಿದೆವು’.

‘ಜೋಡೊ ಯಾತ್ರೆಯಲ್ಲಿದ್ದ ಒಟ್ಟು 120 ಜನರ ತಂಡದಲ್ಲಿ ಪ್ರತಿದಿನವೂ 4–5 ಜನರಿಗೆ ರಾಹುಲ್‌ ಅವರೊಂದಿಗೆ ಮಾತನಾಡುವ ಅವಕಾಶ ಕಲ್ಪಿಸಲಾಗಿತ್ತು. ನಡೆಯುತ್ತಲೇ ಅವರು ನಮ್ಮೊಂದಿಗೆ ಚರ್ಚಿಸುತ್ತಿದ್ದರು. ನನಗೂ ಅಂಥ ಅವಕಾಶ ದೊರೆಯಿತು, ಅವರ
ಮಾರ್ಗದರ್ಶನವೂ ಲಭ್ಯವಾಯಿತು’.

ರಾಹುಲ್ ಕುತೂಹಲ: ‘ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ ರಾಹುಲ್ ಅವರಲ್ಲಿದೆ. ಅವರನ್ನು ನೋಡಲು, ಮಾತಾಡಿಸಲು ಆಯಾ ಊರುಗಳಲ್ಲಿ ಜನ ಸೇರುತ್ತಿದ್ದರು. ಶ್ರಮಿಕರು, ದುರ್ಬಲರು, ಕಾರ್ಮಿಕರನ್ನು ಕರೆದು ಮಾತನಾಡಿಸಿ ಅವರ ಸಮಸ್ಯೆ ಆಲಿಸುವ ಮುಕ್ತ ಮನಸ್ಸು ಅವರಲ್ಲಿದೆ.

ಈ ಮೊದಲು 600 ಕಿ.ಮೀ ಪಾದಯಾತ್ರೆ ಮಾಡಿದ ಅನುಭವ ನನಗಿತ್ತು. ಆದರೆ ಇದೇ ಬೇರೆ. ನಮ್ಮ ಜನ, ನಮ್ಮ ಭೂಮಿ ಮತ್ತು ನನ್ನನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಯಾತ್ರೆ ಬಹಳ ನೆರವಾಯಿತು’ ಎನ್ನುತ್ತಾರೆ ಕಿರಣ್.

ರಾಹುಲ್ ಫಿಟ್‌ನೆಸ್ ಗುಟ್ಟು

‘ರಾಹುಲ್‌ ದೈಹಿಕವಾಗಿ ಬಹಳ ಗಟ್ಟಿಮುಟ್ಟಾಗಿದ್ದಾರೆ. ಟೀ–ಶರ್ಟ್ ಧರಿಸಿ ಅಂತಹ ಚಳಿಯಲ್ಲೂ ನಡೆದರು. ರಸ್ತೆ ಬದಿಯ ಅಂಗಡಿ, ಡಬ್ಬಾ ಅಂಗಡಿಗಳಲ್ಲಿ ಚಹಾ, ತಿಂಡಿ ತಿಂದರು. ಮೊದಲಿನಿಂದಲೂ ಅವರಿಗೆ ಫಿಟ್‌ನೆಸ್‌ ಕಾಳಜಿ ಇದೆ. ವಾರಕ್ಕೆ 5 ದಿನ 10 ಕಿ.ಮೀ ರನ್ನಿಂಗ್ ಮಾಡಿ ಗೊತ್ತು. ಮಾರ್ಷಲ್ ಆರ್ಟ್ ಜೊತೆಗೆ ಉತ್ತಮ ಈಜುಪಟು. ಹೀಗಾಗಿ ನಡಿಗೆ ಅವರಿಗೆ ಕಷ್ಟವಾಗಲಿಲ್ಲ. ಪಾದಯಾತ್ರೆಯುದ್ದಕ್ಕೂ ಅವರು ಒಂದು ದಿನವೂ ಮಧ್ಯಾಹ್ನ ವಿಶ್ರಾಂತಿ ಬಯಸಲಿಲ್ಲ, ಬದಲಿಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸುತ್ತಿದ್ದರು’ ಎಂದು ಕಿರಣ್ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.