ADVERTISEMENT

ಮಂಗಳೂರು: ಭಾರತ ಮಾತಾ ಪೂಜನ ಕಾರ್ಯಕ್ರಮ ಮುಂದೂಡಿಕೆ?

ತ್ರಿವರ್ಣ ಧ್ವಜದ ಬದಲು ಭಗವಾಧ್ವಜ ಬಳಕೆಗೆ ಸಿಎಫ್‌ಐ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 19:30 IST
Last Updated 10 ಆಗಸ್ಟ್ 2022, 19:30 IST
   

ಮಂಗಳೂರು: ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇದೇ 11ರಂದು ಹಮ್ಮಿಕೊಳ್ಳಲಾದ ‘ಭಾರತ ಮಾತಾ ಪೂಜನ’ ಕಾರ್ಯಕ್ರಮದ ಹೆಸರಿನಲ್ಲಿ ‘ಹಿಂದುತ್ವದ ಸಿದ್ಧಾಂತ’ ಪ್ರತಿಪಾದಿಸಲಾಗುತ್ತಿದೆ ಎಂದುಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾದ ಜಿಲ್ಲಾ ಸಮಿತಿ ಆರೊಪಿಸಿದೆ. ಈ ಕಾರ್ಯಕ್ರಮ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸಿಎಫ್‌ಐ ನಿಯೋಗವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

‘ಕಾಲೇಜಿನ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತದ ಭೂಪಟವನ್ನೇ ಬದಲಾಯಿಸಿ, ಮಹಿಳೆ ಭಗವಾಧ್ವಜ ಹಿಡಿದ ಚಿತ್ರ ಬಳಸಲು ಸಿದ್ಧತೆ ನಡೆದಿತ್ತು. ಧಾರ್ಮಿಕ ಆಚರಣೆಗಳಿಗೆ ಕಾಲೇಜಿನಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕೆ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಿದ್ದ ಕಾಲೇಜಿನ ಆಡಳಿತ ಮಂಡಳಿಗೆ ಈ ಕಾರ್ಯಕ್ರಮವು ಧಾರ್ಮಿಕ ಆಚರಣೆಯಂತೆ ಕಂಡಿಲ್ಲವೇ’ ಎಂದು ಸಿಎಫ್‌ಐನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ತಾಜುದ್ದೀನ್ ಪ್ರಶ್ನಿಸಿದರು.

ADVERTISEMENT

‘ಕಾರ್ಯಕ್ರಮದ ಆಯೋಜಕರು ಭಾರತದ ಭೂಪಟಕ್ಕೆ ಹಾಗೂ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಈ ಕಾರ್ಯಕ್ರಮದಿಂದ ಕಾಲೇಜಿನ ಸೌಹಾರ್ದ ವಾತಾವರಣಕ್ಕೆ ಧಕ್ಕೆ ಆಗಲಿದೆ. ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದ್ದರು.

ಕ್ಯಾಂಪಸ್‌ ಫ್ರಂಟ್‌ನ ನಿಯೋಗದಲ್ಲಿ ಸಂಘಟನೆಯ ಮಂಗಳೂರು ನಗರ ಘಟಕದ ಅಧ್ಯಕ್ಷ ಸರ್ಫುದ್ದೀನ್, ಜಿಲ್ಲಾ ನಾಯಕರಾದ ಶಂಸುದ್ದೀನ್, ಅಫೀಝ್ ಇದ್ದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕಾಲೇಜಿನ ಪ್ರಾಂಶುಪಾಲರಾದ ಅನಸೂಯ ಅವರು ಕರೆಗೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.