ADVERTISEMENT

ಮುಷ್ಕರ: ಚಿಂತಾಮಣಿಯಲ್ಲಿ ಸಿಪಿಎಂ ಮುಖಂಡ ಕೃಷ್ಣಾರೆಡ್ಡಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 6:32 IST
Last Updated 8 ಜನವರಿ 2020, 6:32 IST
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಬುಧವಾರ ಮುಷ್ಕರವನ್ನು ವಿಫಲಗೂಳಿಸಲು ಪೊಲೀಸರು ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸಿಪಿಎಂ ಮುಖಂಡ ಕೃಷ್ಣಾರೆಡ್ಡಿ ಅವರನ್ನು ಮನೆಗೆ ನುಗ್ಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

ಇದರಿಂದಾಗಿ ಚಿಂತಾಮಣಿಯಲ್ಲಿ ಸ್ವಲ್ಪ ಸಮಯ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಇದನ್ನು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.ಸಿಪಿಎಂ, ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ ಜಿಲ್ಲೆಯಲ್ಲಿ ಬುಧವಾರ ಜಿಲ್ಲಾ ಬಂದ್‌ ನಡೆಸಲು ತೀರ್ಮಾನಿಸಿ ಪ್ರಚಾರ ಕೂಡ ನಡೆಸಿದ್ದವು.ಆದರೆ ಬಂದ್‌ ನಡೆಸಲು ಪೊಲೀಸ್‌ ಇಲಾಖೆ ಅನುಮತಿ ನಿರಾಕರಿಸಿತು.

ಜಿಲ್ಲೆಯಲ್ಲಿ ಬುಧವಾರ ಶಾಲೆಗಳಿಗೆ ರಜೆ ಘೋಷಿಸಿಲ್ಲ. ಜತೆಗೆ, ಹೋಟೆಲ್‌ಗಳು, ವಾಣಿಜ್ಯ ಉದ್ಯಮವೂ ಮುಷ್ಕರಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ಕೆಎಸ್‌ಆರ್‌ಟಿಸಿ ಬಸ್‌, ಆಟೊಗಳ ಸಂಚಾರವೂ ಸಹಜ ಸ್ಥಿತಿಯಲ್ಲಿದೆ.ಹೀಗಾಗಿ ಮುಷ್ಕರ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ.

ADVERTISEMENT

ನಗರದಲ್ಲಿ ಬೆಳಿಗ್ಗೆ ರಾಲಿ ನಡೆಸಿದ ಪ್ರತಿಭಟನಾಕಾರರು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ತಮ್ಮ ವೈಫಲ್ಯಗಳ ವಿರುದ್ಧ ನಡೆಯುತ್ತಿರುವ ಬಂದ್ ವಿಫಲಗೊಳಿಸಲು ಪೊಲೀಸರನ್ನು ಬಳಸಿಕೊಳ್ಳುತ್ತಿವೆ. ಬಂದ್‌ ಹತ್ತಿಕ್ಕುವ ಸರ್ಕಾರಗಳ ಧೋರಣೆಗಳನ್ನು ಖಂಡಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.