ADVERTISEMENT

ಭಾರತ್‌ ಜೋಡೊ ಪಾದಯಾತ್ರೆಗೆ ಉತ್ಸಾಹ ತುಂಬಿದ ಸೋನಿಯಾ

ಭಾರತ್‌ ಜೋಡೊ ಪಾದಯಾತ್ರೆ: 20 ನಿಮಿಷ ನಡೆದ ಕಾಂಗ್ರೆಸ್‌ ನಾಯಕಿ

ಎಂ.ಎನ್.ಯೋಗೇಶ್‌
Published 6 ಅಕ್ಟೋಬರ್ 2022, 21:06 IST
Last Updated 6 ಅಕ್ಟೋಬರ್ 2022, 21:06 IST
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಕ್ರಾಸ್‌ ಬಳಿ ಪಾದಯಾತ್ರೆ ಯಲ್ಲಿ ತಾಯಿ ಸೋನಿಯಾ ಗಾಂಧಿ ಅವರ ಶೂ ಲೇಸ್‌ ಕಟ್ಟಿದ ರಾಹುಲ್‌ ಗಾಂಧಿ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಕ್ರಾಸ್‌ ಬಳಿ ಪಾದಯಾತ್ರೆ ಯಲ್ಲಿ ತಾಯಿ ಸೋನಿಯಾ ಗಾಂಧಿ ಅವರ ಶೂ ಲೇಸ್‌ ಕಟ್ಟಿದ ರಾಹುಲ್‌ ಗಾಂಧಿ   

ಮಂಡ್ಯ: ಆಯುಧಪೂಜೆ, ವಿಜಯದಶಮಿಯ ಬಿಡುವಿನ ನಂತರ ಪುನರಾರಂಭಗೊಂಡ ಭಾರತ್‌ ಜೋಡೊ ಪಾದಯಾತ್ರೆಗೆ ಗುರುವಾರ ಹೊಸ ಹುರುಪು ಬಂದಿತ್ತು. ಕಾಂಗ್ರೆಸ್‌ ನಾಯಕಿ,ತಾಯಿ ಸೋನಿಯಾ ಗಾಂಧಿ ಪಾಲ್ಗೊಂಡಿದ್ದರಿಂದ ರಾಹುಲ್‌ ಗಾಂಧಿ ಹೆಚ್ಚು ಉತ್ಸಾಹದಿಂದ ಹೆಜ್ಜೆ ಹಾಕಿದರು.

ಸೋನಿಯಾ ಇದೇ ಮೊದಲ ಬಾರಿಗೆ ಯಾತ್ರೆಯಲ್ಲಿ ಪಾಲ್ಗೊಂಡರು. ಪಾಂಡವಪುರ ತಾಲ್ಲೂಕು ಬೆಳ್ಳಾಳೆ ಗ್ರಾಮದಿಂದ ಆರಂಭವಾದ ಯಾತ್ರೆಗೆ ಮಾಣಿಕ್ಯನಹಳ್ಳಿ ಗೇಟ್‌ ಬಳಿ ಬೆಳಿಗ್ಗೆ 8.30ರಲ್ಲಿ ಸೇರಿಕೊಂಡರು. ಮಗ, ಕಾಂಗ್ರೆಸ್ ಮುಖಂಡರು, ಸಾವಿರಾರು ಕಾರ್ಯಕರ್ತರೊಂದಿಗೆ15 ನಿಮಿಷ ನಡೆದರು. 30 ಸಾವಿರಕ್ಕೂ ಹೆಚ್ಚು ಜನರಿದ್ದರು.

ಆರತಿ ಬೆಳಗಿ, ಪೂರ್ಣಕುಂಭ ಸ್ವಾಗತ ಕೋರಿದ ಗ್ರಾಮೀಣ ಮಹಿಳೆಯರ ಬಳಿಗೆ ತೆರಳಿದಸೋನಿಯಾ ಗಾಂಧಿ ಫೋಟೊ ತೆಗೆಸಿಕೊಂಡರು. ವಿದ್ಯಾರ್ಥಿಗಳು, ಮಕ್ಕಳಿಗೆ ಚಾಕೋಲೆಟ್‌ ಕೊಟ್ಟರು. ಅಮೃತಿ ಗ್ರಾಮದವರೆಗೆ ನಡೆದು, ಪುತ್ರನ ಸಲಹೆಯಂತೆ ಕಾರು ಹತ್ತಿ, ಜಕ್ಕನಹಳ್ಳಿ ಗೇಟ್‌ ಬಳಿ ಅಮ್ಮಾಸ್‌ ಕೆಫೆಯಲ್ಲಿ ಕಾಫಿ ಕುಡಿದರು. 10 ನಿಮಿಷ ವಿಶ್ರಾಂತಿ ನಂತರ 5 ನಿಮಿಷ ನಡೆದರು.

ADVERTISEMENT

ಬಾಲಕಿಯನ್ನು ಸಂತೈಸಿದರು: ಪಾದಯಾತ್ರೆಗೆ ಸ್ವಾಗತ ಕೋರಲು ರಸ್ತೆ ಬದಿ ನಿಂತಿದ್ದ ಬಾಲಕಿಯೊಬ್ಬಳು ಜನ
ಜಂಗುಳಿಯ ತಳ್ಳಾಟದಲ್ಲಿ ಕೆಳಗೆ ಬಿದ್ದಾಗ, ಧಾವಿಸಿದ ತಾಯಿ–ಮಗ ಬಾಲಕಿಯನ್ನು ಮೇಲೆತ್ತಿ ಬೆನ್ನು ಸವರಿ ಸಂತೈಸಿ, ಚಾಕೋಲೆಟ್‌ ಕೊಟ್ಟು ಕಳುಹಿಸಿದರು.

ಶೂ ಲೇಸ್‌ ಕಟ್ಟಿದ ರಾಹುಲ್‌: ಜಕ್ಕನಹಳ್ಳಿ ಕ್ರಾಸ್‌ ಬಳಿ ತಾಯಿಯ ಎಡಗಾಲಿನ ಶೂ ಲೇಸ್‌ ಕಳಚಿದಾಗ ಕಟ್ಟಲು ಮುಂದಾದಕಾರ್ಯಕರ್ತರನ್ನು ತಡೆದ ರಾಹುಲ್‌ ಗಾಂಧಿ ತಾವೇ ಕಟ್ಟಿದರು. ಪಾದಯಾತ್ರೆ
ನಾಗಮಂಗಲ ತಾಲ್ಲೂಕು ಖರಡ್ಯ ತಲುಪಿದಾಗ ಸೋನಿಯಾ ನಿರ್ಗಮಿಸಿದರು.

‘ಕರ್ನಾಟಕ ಶಕ್ತಿ ತುಂಬಿದೆ’

ಮಂಡ್ಯ: ‘3,500 ಕಿ.ಮೀ ಪಾದಯಾತ್ರೆ ಸುಲಭವಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ಜನ ಸಹಕರಿಸುತ್ತಿರುವುದರಿಂದ ನನ್ನ ಉತ್ಸಾಹ ಕಡಿಮೆಯಾಗಿಲ್ಲ’ ಎಂದು ರಾಹುಲ್‌ ಗಾಂಧಿ ಗುರುವಾರ ಹೇಳಿದರು.

ನಾಗಮಂಗಲ ತಾಲ್ಲೂಕು ಬ್ರಹ್ಮದೇವರಹಳ್ಳಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ನನಗೆ ಶಕ್ತಿ ತುಂಬಿದೆ, ಬಸವಣ್ಣನವರ ಶಾಂತಿಮಂತ್ರವನ್ನು ನಾನು ಇಲ್ಲೇ ಕಲಿತಿದ್ದೇನೆ. ಪಾದಯಾತ್ರೆಯಲ್ಲಿ ಜನರ ನೋವಿನ ಕೂಗು ಕೇಳುತ್ತಾ ಮುನ್ನಡೆಯುತ್ತಿದ್ದೇನೆ’ ಎಂದರು.

‘ಸಮಾಜದಲ್ಲಿ ಯಾರೂ ವಿಷದ ಬೀಜ ಬಿತ್ತಬಾರದು, ದ್ವೇಷ ಮೂಡಿಸಬಾರದು. ಶಾಂತಿಯ ಸಮಾಜ ನಿರ್ಮಾಣ ಮಾಡಬೇಕು. ಇದು ಪಾದಯಾತ್ರೆಯ ಪ್ರಮುಖ ಉದ್ದೇಶ’ ಎಂದು ಅವರು
ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.