ADVERTISEMENT

ಶ್ರೀಗಳಿಗೆ ಭಾರತ ರತ್ನ: ಮುಗಿದ ಅಧ್ಯಾಯ –ಸಂಸದ ಸುರೇಶ ಅಂಗಡಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 7:11 IST
Last Updated 27 ಜನವರಿ 2019, 7:11 IST
   

ಬೆಳಗಾವಿ: ‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಗೌರವವನ್ನು ಕೊಟ್ಟಿದ್ದರೆ ಮೊನ್ನೆಯೇ ಕೊಡಬೇಕಿತ್ತು. ಕೊಡದಿರುವುದರಿಂದ ಈಗ ಅದು ಮುಗಿದ ಅಧ್ಯಾಯ’ ಎಂದು ಸಂಸದ, ಬಿಜೆಪಿಯ ಸುರೇಶ ಅಂಗಡಿ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅವರು ಪ್ರಶಸ್ತಿಗಾಗಿ ಸೇವಾ ಕಾರ್ಯ ಮಾಡಿದವರಲ್ಲ. ಅವರಿಗೆ ಇರುವಷ್ಟು ಘನತೆ ಭಾರತ ಸರ್ಕಾರಕ್ಕೂ ಇಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಭಾರತ ರತ್ನಕ್ಕಿಂತಲೂ ಮಿಗಿಲಾದವರವರು’ ಎಂದು ಪ್ರತಿಕ್ರಿಯಿಸಿದರು.

‘ಶ್ರೀಗಳಿಗೆ ಭಾರತ ರತ್ನ ಕೊಡಬೇಕಿತ್ತು ಎನ್ನುವುದು ಎಲ್ಲರ ಬೇಡಿಕೆಯಾಗಿದೆ. ಆದರೆ, ಯಾಕೆ ಕೊಡಲಿಲ್ಲ ಎನ್ನುವ ಕಾರಣ ನನಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಪ್ರಧಾನಿ ಅವರೊಂದಿಗೆ ಚರ್ಚಿಸಲಾಗುವುದು. ಪ್ರಧಾನಿ ಹಾಗೂ ಗೃಹ ಸಚಿವರ ಕಚೇರಿಯಲ್ಲೂ ವಿಚಾರಿಸುತ್ತೇನೆ. ಬಳಿಕ, ಈಗ ಯಾಕೆ ಕೊಡಲಿಲ್ಲ ಹಾಗೂ ಕೊಡುತ್ತಾರೆಯೋ ಇಲ್ಲವೋ ಎನ್ನುವುದನ್ನು ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಭಾರತ ರತ್ನಕ್ಕಿಂತಲೂ

ಸುರೇಶ ಅಂಗಡಿ

ಮಿಗಿಲಾದವರು. ಅವರಿಗೆ ಭಾರತ ರತ್ನ ಕೊಡಲಿಲ್ಲವೆಂದು ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳುತ್ತಿರುವ ಕಾಂಗ್ರೆಸ್‌ನವರು, ಶೋಕಾಚರಣೆ ನಡುವೆಯೂ ಬೆಂಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಿದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸೊಲ್ಲೆತ್ತುತ್ತಿಲ್ಲವೇಕೆ?’ ಎಂದು ಕೇಳಿದರು.

‘ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿರಬಹುದು. ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹೋಲಿಸಲಾಗುತ್ತಿದೆ. ಅವರಿಂದ ಪಕ್ಷಕ್ಕೆ ಏನೂ ತೊಡಕಾಗುವುದಿಲ್ಲ. ಮಹಿಳೆಯರಿಗೆ ಅಧಿಕಾರ ಸಿಗಬೇಕು ಎನ್ನುವುದಕ್ಕಿಂತ ಸ್ವಾಮಿ ವಿವೇಕಾನಂದರ ಪ್ರತಿರೂಪವಾಗಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಮಹಿಳಾ ಮೋರ್ಚಾದ ಗುರಿ. ಇದಕ್ಕಾಗಿ ಎಂತಹ ತ್ಯಾಗಕ್ಕೂ ನಾವು ಸಿದ್ಧವಿದ್ದೇವೆ. ಕಾಂಗ್ರೆಸ್‌ ಅಥವಾ ಅವರೊಂದಿಗೆ ಕೈಜೋಡಿಸಿರುವ ಕಳ್ಳರಿಗೆ ದೇಶ ನೀಡುವುದಕ್ಕೆ ಬಯಸುವುದಿಲ್ಲ. ಮಹಿಳೆಯರಿಗೆ ಮೀಸಲಾತಿ, ಅಧಿಕಾರ ದೊರೆಯಬೇಕು ಎನ್ನುವುದಕ್ಕಿಂತ ನಮಗೆ ದೇಶ ಬಹಳ ಮುಖ್ಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.