ಬೆಂಗಳೂರು: ‘ದೇಶದ ಸಂಸ್ಕೃತಿಯನ್ನು ಉಳಿಸುವ ಮತ್ತು ಪರಿಚಯಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವ–7 ಮತ್ತು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿಯಲ್ಲಿ ಎಲ್ಲರೂ ಭಾಗಿಯಾಗಬೇಕು’ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಮ್ ವಿಕಾಸ ಅಕಾಡೆಮಿ ಮತ್ತು ಭಾರತ ವಿಕಾಸ ಸಂಗಮ ಸಹಯೋಗದಲ್ಲಿ 2025ರ ಜನವರಿ 29ರಿಂದ ನಡೆಯಲಿರುವ ಉತ್ಸವದ ಆಹ್ವಾನ ಪತ್ರಿಕೆಯನ್ನು ಅವರು ಭಾನುವಾರ ಬಿಡುಗಡೆ ಮಾಡಿದರು. ‘ಲಕ್ಷಾಂತರ ಮಂದಿ ಭಾಗಿಯಾಗುವ ಈ ಉತ್ಸವವನ್ನು ಸರ್ಕಾರದ ಸಹಾಯವಿಲ್ಲದೇ ನಡೆಸಲಾಗುತ್ತಿದೆ’ ಎಂದರು.
ಭಾರತೀಯ ವಿಕಾಸ ಸಂಗಮದ ಪೋಷಕರಾದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಜನವರಿ 29ರಿಂದ ಫೆ.6ರವರೆಗೆ ಉತ್ಸವ ನಡೆಯಲಿದೆ. ಸುಮಾರು 240 ಎಕರೆ ಪ್ರದೇಶದಲ್ಲಿ ಉತ್ಸವ ನಡೆಸಲಾಗುತ್ತಿದ್ದು, ಲಕ್ಷಾಂತರ ಜನ ಭಾಗಿಯಾಗಲಿದ್ದಾರೆ. ರಾಜ್ಯದ ಪ್ರಮುಖ ನಾಯಕರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಉತ್ಸವದ ವೆಚ್ಚವನ್ನು ಮೂರೂ ಸಂಸ್ಥೆಗಳು ಭರಿಸಲಿದ್ದು, ಸಾವಿರಾರು ಮಂದಿ ದೇಣಿಗೆ ನೀಡಿದ್ದಾರೆ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ನೀಲಹಳ್ಳಿ, ಕೊಂಕನಹಳ್ಳಿ ಮತ್ತು ಬೀರನಹಳ್ಳಿ ಗ್ರಾಮಗಳ ಕೃಷಿ ಜಮೀನಿನಲ್ಲಿ ಉತ್ಸವ ನಡೆಯಲಿದೆ. ಆ ಗ್ರಾಮಗಳ 40 ರೈತರು 240 ಎಕರೆ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಕೈಬಿಟ್ಟು, ಉತ್ಸವಕ್ಕೆ ಭೂಮಿ ಬಿಟ್ಟುಕೊಟ್ಟಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.