ಬೆಳಗಾವಿ: 'ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಗಳಿಂದ ವಂಚಿತರಾಗಿ ಅತೃಪ್ತರಾಗಿರುವ ಶಾಸಕರನ್ನು ಸಮಾಧಾನಪಡಿಸುವ ಸಲುವಾಗಿ, ನಿಗಮ-ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡುವ ಸಂಪ್ರದಾಯ ನಿಲ್ಲಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ದಾಖಲಿಸಲಾಗುವುದು' ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಚ್ಚರಿಕೆ ನೀಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ನಿಯಮಾವಳಿಗಳಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಲ್ಲೂ ಯಾವುದೇ ದಾಖಲೆ ಲಭ್ಯವಿಲ್ಲ. ಆದರೆ, ಮುಖ್ಯಮಂತ್ರಿ ಸೂಚಿಸಿದವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಡುತ್ತೇವೆ ಎಂದು ಶಿಷ್ಟಾಚಾರ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ಹೇಳುತ್ತಾರೆ. ನಿಯಮಾವಳಿಯಲ್ಲೇ ಅವಕಾಶ ಇರದಿದ್ದರೆ, ಸಂಪುಟ ದರ್ಜೆ ಸ್ಥಾನಮಾನ ಹೇಗೆ ಕೊಡುತ್ತಾರೆ' ಎಂದು ಪ್ರಶ್ನಿಸಿದರು.
'ನಿಗಮ-ಮಂಡಳಿಗಳಿಗೆ ಬರುವ ಕೆಲಸಗಳಿಗೆ ಪ್ರತ್ಯೇಕವಾದ ಇಲಾಖೆಗಳಿವೆ. ಐಎಎಸ್ ಅಧಿಕಾರಿಗಳು ಅವುಗಳಿಗೆ ಪ್ರಧಾನ ಕಾರ್ಯದರ್ಶಿಗಳಾಗಿರುತ್ತಾರೆ. ಅಲ್ಲದೆ, ಆಯಾ ಇಲಾಖೆಗೆ ಸಚಿವರಿದ್ದಾರೆ. ಹೀಗಿರುವಾಗ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ, ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿರುವುದು ಸರಿಯಲ್ಲ' ಎಂದು ಆರೋಪಿಸಿದರು.
'ಶಾಸಕರ ಸಂಖ್ಯಾಬಲಕ್ಕೆ ಅನುಗುಣವಾಗಿ ಶೇ 15ರಷ್ಟು ಮಂದಿ ಮಾತ್ರ ಸಚಿವರಾಗಲು ಸಂವಿಧಾನದ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಅದಕ್ಕಿಂತ ಹೆಚ್ಚಿನ ಜನರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಡಲು ಅವಕಾಶವಿಲ್ಲ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.