ADVERTISEMENT

ಚಿತ್ರದುರ್ಗದಲ್ಲಿ ಜುಲೈ 18ರಂದು ಭೋವಿ ಜನೋತ್ಸವ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 23:20 IST
Last Updated 20 ಜೂನ್ 2024, 23:20 IST
‘ಭೋವಿ ಜನೋತ್ಸವ’ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತು ಸಚಿವ ಶಿವರಾಜ ತಂಗಡಗಿ ಚರ್ಚಿಸಿದರು. 
‘ಭೋವಿ ಜನೋತ್ಸವ’ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತು ಸಚಿವ ಶಿವರಾಜ ತಂಗಡಗಿ ಚರ್ಚಿಸಿದರು.    

ಬೆಂಗಳೂರು: ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಜುಲೈ 18ರಂದು ರಾಜ್ಯಮಟ್ಟದ ಬೃಹತ್ ಭೋವಿ ಜನೋತ್ಸವ, ಗುರುಗಳ ಜನ್ಮದಿನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲು ಗುರುವಾರ ನಡೆದ ಸಮಾಜದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ನಗರದ ಜಸ್ಮಾ ಭವನದಲ್ಲಿ‌ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಭೆ ನಡೆಯಿತು.

ಸಮಾಜದ ಸಂಘಟನೆಯ ದೃಷ್ಟಿಯಿಂದ ಭೋವಿ ಜನೋತ್ಸವವನ್ನು ಅದ್ದೂರಿಯಾಗಿ ನಡೆಸಬೇಕು. ಸಮುದಾಯದ ನೂತನ ಸಂಸದರು, ನಿಗಮ ಮಂಡಳಿ ಅಧ್ಯಕ್ಷರ ಗೌರವ ಸಮರ್ಪಣೆ ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳ ಸನ್ಮಾನ ಕಾರ್ಯಕ್ರಮ ಆಯೋಜಿಸಿ, ಈ ಸಮಾರಂಭದಲ್ಲಿ ಸಮಾಜದ ಜನರನ್ನು ತೊಡಗಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಸಲಹೆ ನೀಡಿದರು.

ADVERTISEMENT

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಸಂಘಟನೆಗೊಂಡ ಸಮಾಜ ಮಾತ್ರ ಎಲ್ಲ ರಂಗಗಳಲ್ಲಿಯೂ ಮುಖ್ಯವಾಹಿನಿಗೆ ಬಂದಿದೆ. ಇದನ್ನರಿತು ಬಾಬಾ ಸಾಹೇಬರ ನುಡಿಯಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಆದ್ಯತೆ ನೀಡಬೇಕು. ಎಲ್ಲ ರಂಗಗಳ ಸಾಧಕರನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಕ್ಷೇತ್ರವಾಗಿ ಭೋವಿ ಗುರುಪೀಠ ಕಾರ್ಯನಿರ್ವಹಿಸುತ್ತಿದೆ. ಭೋವಿ ಸಮಾಜದ ಭೂತ, ವರ್ತಮಾನ, ಭವಿಷ್ಯ ದಿಕ್ಸೂಚಿ ಮಹಾಸಂಗಮವೇ ಭೋವಿ ಜನೋತ್ಸವ’ ಎಂದು ಬಣ್ಣಿಸಿದರು.

ಭೋವಿ ಸಮಾಜವನ್ನು ಕಟ್ಟುವ ಕೆಲಸ ಕಷ್ಟದ ಕಾರ್ಯ. ಇಮ್ಮಡಿ ಶ್ರೀಗಳ ಬದ್ಧತೆಯಿಂದಾಗಿ ಭೋವಿ ಸಮಾಜವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಬಲಗೊಳ್ಳುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ನಿಗಮದ ಮಾಜಿ ಅಧ್ಯಕ್ಷ ಸೀತರಾಮ್, ವಕೀಲ ಶಂಕರಪ್ಪ, ಕಲಬುರಗಿಯ ಸಮಾಜದ ಮುಖಂಡ ತಿಪ್ಪಣ್ಣ, ಹಾವೇರಿ ಜಿಲ್ಲಾಧ್ಯಕ ರವಿ‌ಪೂಜಾರ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.