ADVERTISEMENT

ನವೆಂಬರ್ ಅಂತ್ಯದೊಳಗೆ ಭುವನೇಶ್ವರಿ ಪ್ರತಿಮೆ ಅನಾವರಣ: ತಂಗಡಗಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:48 IST
Last Updated 30 ಅಕ್ಟೋಬರ್ 2024, 15:48 IST
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ   

ಬೆಂಗಳೂರು: ‘ವಿಧಾನಸೌಧದ ಆವರಣದಲ್ಲಿ ನ. 1ರಂದು ಭುವನೇಶ್ವರಿ ಪ್ರತಿಮೆ ಸ್ಥಾಪಿಸಬೇಕಿತ್ತು. ತಾಂತ್ರಿಕ ಕಾರಣಗಳಿಂದ ಈ ತಿಂಗಳ ಅಂತ್ಯದ ಒಳಗೆ ಪ್ರತಿಮೆ ಅನಾವರಣಗೊಳಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯೋತ್ಸವ ದಿನದಂದೇ (ನ.1) ಪ್ರತಿಮೆ ಅನಾವರಣಗೊಳಿಸಬೇಕೆಂದು ಮುಖ್ಯಮಂತ್ರಿ ಸೂಚಿಸಿದ್ದರು. ನಾವು ಕೂಡ ಎಲ್ಲ ತಯಾರಿ ಮಾಡಿದ್ದೆವು. ಆದರೆ, ದೆಹಲಿಯಲ್ಲಿ ಪ್ರತಿಮೆ ನಿರ್ಮಾಣ ಆಗುತ್ತಿದ್ದು, ಕೆಲಸ ಇನ್ನೂ ಬಾಕಿ ಇದೆ. ಹಾಗೆಂದು, ನಾವು ಪರಶುರಾಮ ಮೂರ್ತಿಯ ರೀತಿ ಪ್ರತಿಷ್ಠಾಪಿಸುವುದಿಲ್ಲ. ಪೂರ್ಣ ಕೆಲಸ ಮುಗಿದ ನಂತರವೇ ಅನಾವರಣಗೊಳಿಸುತ್ತೇವೆ’ ಎಂದರು.

ಯೋಗಿರಾಜ್‌ಗೆ ಅವಕಾಶ: ಈ ಬಾರಿ ಶಿಲ್ಪಕಲೆ ಕ್ಷೇತ್ರದಲ್ಲಿ ಅರುಣ್ ಯೋಗಿರಾಜ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರಿಗೆ ಇನ್ನೂ 41 ವರ್ಷ ವಯಸ್ಸು. 60 ವರ್ಷ ದಾಟಿದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕೆಂಬ ನಿಯಮವಿದೆ. ಅರುಣ್ ಯೋಗಿರಾಜ್ ಅವರನ್ನು ಪ್ರಶಸ್ತಿಗೆ ಹೇಗೆ ಪರಿಗಣಿಸಲಾಯಿತು ಎಂಬ ಪ್ರಶ್ನೆಗೆ ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

ADVERTISEMENT

‘ಕ್ರೀಡಾ ಕ್ಷೇತ್ರದಲ್ಲಿ ಮಾತ್ರ 60 ವರ್ಷದ ಒಳಗಿನವರಿಗೂ ಪ್ರಶಸ್ತಿ ನೀಡಲು ಅವಕಾಶ ಮಾಡಿಕೊಳ್ಳಲಾಗಿದೆ. ಅದೇ ರೀತಿ ರಾಷ್ಟ್ರೀಯ- ಅಂತರರಾಷ್ಟ್ರಿಯ ಮನ್ನಣೆ ಗಳಿಸಿದ ಸಾಧಕರಿಗೂ ವಯೋಮಿತಿ ಸಡಿಲಿಸಿ ಪ್ರಶಸ್ತಿ ನೀಡಲು ಮಾರ್ಗಸೂಚಿಯ 9ನೇ ಅಂಶದಲ್ಲಿ ಅವಕಾಶವಿದೆ. ಅದರ ಆಧಾರದಲ್ಲಿ ಅರುಣ್ ಯೋಗಿರಾಜ್‌ ಅವರನ್ನು ಪರಿಗಣಿಸಲಾಗಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.