ಬೆಂಗಳೂರು: ‘ಕರ್ನಾಟಕದ ಪ್ರತಿನಿಧಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿ ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ರಾಜ್ಯದ ಹಿತಾಸಕ್ತಿ ಕಾಪಾಡಲು ವಿಫಲರಾಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಂಗಳವಾರ ಆರೋಪಿಸಿದ್ದು, ‘ಈ ಬಗ್ಗೆ ಸಚಿವರಿಗೆ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.
‘ಸ್ಥಳೀಯ ಭಾಷೆಯಲ್ಲೂ ಬ್ಯಾಕಿಂಗ್ ಪರೀಕ್ಷೆ ಬರೆಯಲು ಅವಕಾಶ ಸಿಗಬೇಕು. ಸದ್ಯ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಅವಕಾಶ ಇದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್ ಧ್ವನಿ ಎತ್ತುತ್ತಿಲ್ಲ’ ಎಂದು ದಿನೇಶ್ ಟೀಕಿಸಿದರು.
‘ಬೆಂಗಳೂರಿನಲ್ಲಿ ನಡೆಯುವ ಏರೋ ಇಂಡಿಯಾ ಪ್ರದರ್ಶನಕ್ಕೆ ವಿಶ್ವದ ಎಲ್ಲ ಕಡೆಗಳಿಂದ ಜನ ಬರುತ್ತಾರೆ. ಅದನ್ನು ಲಖನೌಕ್ಕೆ ಸ್ಥಳಾಂತರಿಸುವ ಚಿಂತನೆ ನಡೆದಿದೆ. ಈ ವಿಷಯದಲ್ಲಿ ರಾಜ್ಯಪರ ನಿಲ್ಲದ ನೀವು, ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದು ಯಾವ ಪುರುಷಾರ್ಥಕ್ಕೆ’ ಎಂದು ನಿರ್ಮಲಾ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ 13ರಂದು ಬೀದರ್‌ನಲ್ಲಿ ಕೆಪಿಸಿಸಿ ವತಿಯಿಂದ ‘ಜನಧ್ವನಿ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸುಮಾರು ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ದಿನೇಶ್ ಹೇಳಿದರು
ಪ್ರಶ್ನೆಯೊಂದಕ್ಕೆ ಉತ್ತರಿಸಿದ ದಿನೇಶ್, ‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಜೆಡಿಎಸ್ ನೂತನ ರಾಜ್ಯ ಅಧ್ಯಕ್ಷ ಎಚ್. ವಿಶ್ವನಾಥ್ ಸೇರುವ ವಿಷಯ ಜೆಡಿಎಸ್‌ಗೆ ಬಿಟ್ಟಿದ್ದು. ಅದು ಆ ಪಕ್ಷದ ಆಂತರಿಕ ವಿಚಾರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.