ADVERTISEMENT

ಡಿನೋಟಿಫಿಕೇಷನ್‌ ಪ್ರಕರಣ: ಬಿಎಸ್‌ವೈ ನಿರಾಳ

ಮಧ್ಯಂತರ ರಕ್ಷಣೆ ರದ್ದು ಕೋರಿದ್ದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 18:42 IST
Last Updated 23 ಜನವರಿ 2023, 18:42 IST
ಬಿ.ಎಸ್‌ ಯಡಿಯೂರಪ್ಪ
ಬಿ.ಎಸ್‌ ಯಡಿಯೂರಪ್ಪ    

ನವದೆಹಲಿ: ಅಕ್ರಮ ಡಿನೋಟಿಫಿಕೇಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಡಿನೋಟಿಫಿಕೇಷನ್‌ ‍ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ಮಧ್ಯಂತರ ರಕ್ಷಣೆ ನೀಡಿತ್ತು. ಇದನ್ನು ಪ್ರಶ್ನಿಸಿ ಉದ್ಯಮಿ ಆಲಂ ‍ಪಾಷಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ವಿಕ್ರಮ್‌ನಾಥ್‌ ಅವರನ್ನು ಒಳಗೊಂಡ ಪೀಠ, ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದ ಮುಖ್ಯ ಅರ್ಜಿಯ ವಿಚಾರಣೆ ಜನವರಿ 30ರಂದು ನಡೆಯಲಿದೆ.

ದೇವನಹಳ್ಳಿಯಲ್ಲಿ 2011ರಲ್ಲಿ 26 ಎಕರೆ ಡಿನೋಟಿಫಿಕೇಷನ್‌ ಮಾಡಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಆಲಂ ಪಾಷಾ ದೂರು ನೀಡಿದ್ದರು.

ADVERTISEMENT

ಈ ದೂರಿನ ಮೇರೆಗೆ ದಾಖಲಾದ ಪ್ರಕರಣದಲ್ಲಿ, ಯಡಿಯೂರಪ್ಪ ಅವರ ವಿರುದ್ಧದ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಕೈಬಿಟ್ಟಿತ್ತು.
ಈ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿತ್ತು. ಕೂಡಲೇ ವಿಚಾರಣೆ ಕೈಗೆತ್ತಿಕೊಳ್ಳುವಂತೆಯೂ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.