ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮನ ದೇವಸ್ಥಾನದ ಸಂಭವಿಸಿದ ವಿಷ ಪ್ರಸಾದ ದುರಂತದ ಆಘಾತದಿಂದ ಜಿಲ್ಲೆ ಇನ್ನೂ ಹೊರಬಂದಿಲ್ಲ.
1997ರಲ್ಲಿ ಚಾಮರಾಜನಗರವು ಮೈಸೂರಿನಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾದ ನಂತರ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಾವು –ನೋವು ಸಂಭವಿಸಿಲ್ಲ. ಇಂತಹ ಪೈಶಾಚಿಕ ಕೃತ್ಯವೂ ನಡೆದಿಲ್ಲ.
‘ಪ್ರಾಣಘಾತುಕ ವಿಷ ಆಹಾರವನ್ನು ಸೇವಿಸಿ, ಜನರು ಸಾಮೂಹಿಕವಾಗಿ ಪ್ರಾಣಕಳೆದುಕೊಂಡ ಅಥವಾ ತೀವ್ರ ರೀತಿಯಲ್ಲಿ ಅಸ್ವಸ್ಥಗೊಂಡು 80–90 ಜನರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಪ್ರಕರಣಗಳು ನಡೆದಿಲ್ಲ’ ಎಂದು ಹೇಳುತ್ತಾರೆ ಜಿಲ್ಲೆಯ ಹಿರಿಯ ಪರಿಸರವಾದಿ ಪುಣಜನೂರು ದೊರೆಸ್ವಾಮಿ.
ವೀರಪ್ಪನ್ ಕ್ರೌರ್ಯಗಳೇ ಕೊನೆ: ಜಿಲ್ಲೆ ಇನ್ನೂ ಮೈಸೂರಿನೊಂದಿಗೆ ಬೆಸೆದಿದುಕೊಂಡಿದ್ದ ಅವಧಿಯಲ್ಲಿ, 90ರ ದಶಕದ ಆರಂಭದಲ್ಲಿ ಮಲೆಮಹದೇಶ್ವರ ಅರಣ್ಯ ಹಾಗೂ ಇನ್ನಿತರ ಅರಣ್ಯ ಪ್ರದೇಶಗಳನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ನರಹಂತಕ ವೀರಪ್ಪನ್ ನಾಲ್ಕೈದು ಬಾರಿ ದ್ವೇಷದ ಕ್ರೌರ್ಯ ಮೆರೆದು ಸಾಮೂಹಿಕವಾಗಿ ಹಲವರನ್ನು ಹತ್ಯೆ ಮಾಡಿದ್ದ. ಅದೇ ಕೊನೆ. ಆ ನಂತರ ಸಾಮೂಹಿಕ ನರಮೇಧ ಪ್ರಕರಣಗಳು ಈ ಭಾಗದಲ್ಲಿ ನಡೆದಿರಲಿಲ್ಲ ಎಂದು ಹೇಳುತ್ತಾರೆ ಹಿರಿಯರು.
ಸದಾ ಪೊಲೀಸರ ಮೇಲೆ ದ್ವೇಷ ಕಾರುತ್ತಲೇ ಇದ್ದ ವೀರಪ್ಪನ್ 1992ರ ಮೇ 19ರಂದು ಹನೂರು ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣೆಯ ಮೇಲೆ ಏಕಾಏಕಿ ದಾಳಿ ನಡೆಸಿ ಐವರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ. ಅದೇ ವರ್ಷ ಆಗಸ್ಟ್ 14ರಂದು ಮೀಣ್ಯಂ ಬಳಿ ಹೊಂಚು ಹಾಕಿ ಕುಳಿತು, ಅಂಬಾಸಿಡರ್ ಕಾರಿನಲ್ಲಿ ಬರುತ್ತಿದ್ದ ಎಸ್‌ಪಿ ಹರಿಕೃಷ್ಣ, ಪೊಲೀಸ್ ಅಧಿಕಾರಿ ಶಕೀಲ್ ಅಹಮದ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ಮಳೆಗೆರದು, ಏಳು ಜನರನ್ನು ಹತ್ಯೆ ಮಾಡಿ ಕ್ರೌರ್ಯ ಮೆರೆದಿದ್ದ.
1993ರ ಏಪ್ರಿಲ್ 9ರಂದು ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಎರಡು ವಾಹನಗಳನ್ನು ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಪಾಲಾರ್‌ನಲ್ಲಿ ರಸ್ತೆಯಲ್ಲಿ ನೆಲಬಾಂಬ್ ಹುದಗಿಸಿಟ್ಟು ಸ್ಫೋಟಿಸಿದ್ದ. ಈ ಭೀಕರ ದುರಂತದಲ್ಲಿ 22 ಮಂದಿ ಜೀವ ತೆತ್ತಿದ್ದರು. 1991-93ರ ನಡುವಿನ ಅವಧಿಯಲ್ಲಿ, ತನ್ನ ಪತ್ನಿಯನ್ನು ತಮಿಳುನಾಡು ಪೊಲೀಸರಿಗೆ ಒಪ್ಪಿಸಿದ ಕಾರಣಕ್ಕೆ ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಲ್ಲಿ ಐವರು ನಾಗರಿಕರನ್ನು ದಾರುಣವಾಗಿ ಕೊಂದು ರಣಕೇಕೆ ಹಾಕಿದ್ದ.
‘ನಮ್ಮ ರಾಜ್ಯದವರು ಹಾಗೂ ತಮಿಳುನಾಡಿನವರು ಸೇರಿದಂತೆ ವೀರಪ್ಪನ್ ಒಟ್ಟು 114 ಜನರನ್ನು ಹತ್ಯೆ ಮಾಡಿದ್ದ. ಪೊಲೀಸರು, ಅರಣ್ಯ ಅಧಿಕಾರಿಗಳು ಹಾಗೂ ತನ್ನ ಬಗ್ಗೆ ಮಾಹಿತಿ ನೀಡುತ್ತಿರುವವರ ಮೇಲೆ ಸದಾ ಹಗೆ ಸಾಧಿಸುತ್ತಿದ್ದ ವೀರಪ್ಪನ್ ಅವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡುವ ಮೂಲಕ ಸ್ಥಳೀಯರಲ್ಲಿ ಭಯ ಬಿತ್ತಿದ್ದ’ ಎಂದು ವೀರಪ್ಪನ್ ಅಟ್ಟಹಾಸಗಳನ್ನು ಹತ್ತಿರದಿಂದ ಬಲ್ಲ ದೊರೆಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಎಲ್ಲೆಲ್ಲೂ ದುರಂತದ ಬಗ್ಗೆಯೇ ಚರ್ಚೆ
ಊಹಿಸಲು ಸಾಧ್ಯವಾಗದ ಈ ಪೈಶಾಚಿಕ ಪ್ರಕರಣದ ಬಗ್ಗೆ ಜಿಲ್ಲೆಯಾದ್ಯಂತ ಚರ್ಚೆಗಳು ನಡೆಯುತ್ತಿವೆ.ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಸಂಘ– ಸಂಸ್ಥೆಗಳಲ್ಲಿ ಇದರ ಬಗ್ಗೆಯೇ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ದೇವರ ಪ್ರಸಾದಕ್ಕೆ ವಿಷ ಹಾಕುವಷ್ಟರ ಮಟ್ಟಿಗೆ ಮನುಷ್ಯನಲ್ಲಿ ಕ್ರೌರ್ಯ ಬೆಳೆಯಿತೇ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಯಾರದೋ ವೈಯಕ್ತಿಕ ದ್ವೇಷಕ್ಕೆ ಅಮಾಯಕ ಭಕ್ತರ ಪ್ರಾಣವನ್ನು ಕಿತ್ತುಕೊಂಡದ್ದು ಎಷ್ಟು ಸರಿ ಎಂದು ಕೇಳುವವರೂ ಇದ್ದಾರೆ.
ಮೃತಪಟ್ಟವರ ಕುಟುಂಬದವರ ಕಥೆಗಳನ್ನು ಕೇಳಿ, ಅವರ ಹಾಗೂ ಅಸ್ವಸ್ಥರಾಗಿ ಜೀವನ್ಮರಣ ಸ್ಥಿತಿಯಲ್ಲಿ ಇರುವವರ ಕುಟುಂಬದವರ ಆಕ್ರಂದನವನ್ನು ಕೇಳಿ ಜಾತಿ ಭೇದ, ಧರ್ಮ ಭೇದ ಮರೆತು ಎಲ್ಲರೂ ಮರುಗುತ್ತಿದ್ದಾರೆ.
‘ಸುಳ್ವಾಡಿ ದೇವಾಲಯದಲ್ಲಿ ನಡೆದಿರುವ ವಿಷ ಪ್ರಸಾದ ದುರಂತ ಯಾವ ನರಮೇಧಕ್ಕೂ ಕಡಿಮೆ ಇಲ್ಲ. ವೈಯಕ್ತಿಕ ಈರ್ಷ್ಯೆ, ದ್ವೇಷದ ಕಾರಣಕ್ಕೆ ನಡೆದಿರಬಹುದು ಎಂದು ಬಲವಾಗಿ ಶಂಕಿಸಿರುವ ಈ ಪ್ರಕರಣದ ಹಿಂದೆ ಯಾರೇ ಇದ್ದರೂ, ಅವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು’ ಎಂಬುದು ಜಿಲ್ಲೆಯ ಜನತೆಯ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.