ಬೆಂಗಳೂರು: ಕಾನೂನು ರಚನೆ, ಭಾಷಾ ಬಳಕೆ, ಶಿಕ್ಷಣ ಮತ್ತು ಸಂಶೋಧನೆ, ಉದ್ಯೋಗ, ನ್ಯಾಯಾಲಯ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕವಾಗಿ ಎಲ್ಲ ಹಂತಗಳಲ್ಲೂ ಕನ್ನಡ ಬಳಕೆಗಾಗಿ ಪ್ರತ್ಯೇಕ ಮಾರ್ಗಸೂಚಿ ರೂಪಿಸಲು ಸಮಗ್ರ ಕನ್ನಡ ಭಾಷಾ (ಪ್ರಸಾರ ಮತ್ತು ವ್ಯಾಪಕ ಬಳಕೆ) ಮಸೂದೆ ಮಂಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರವನ್ನು ಒತ್ತಾಯಿಸಿದೆ.
ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಬೇಕು. ಈ ಮೂಲಕ ಕನ್ನಡ ಭಾಷೆ
ಬಳಕೆಗೆ ಅಧಿಕೃತ ಮಾನ್ಯತೆ ತಂದುಕೊಡಬೇಕು ಎಂದೂ ಹೇಳಿದೆ. ಪ್ರಾಧಿಕಾರ ಕರೆದಿದ್ದ ಸಭೆಯಲ್ಲಿ ಕನ್ನಡ ಪರ ಚಿಂತಕರು, ಕಾನೂನು ಸಲಹೆಗಾರರು, ಸಾಹಿತಿಗಳು, ಹೋರಾಟಗಾರರು ಈ ನಿರ್ಣಯ ತೆಗೆದುಕೊಂಡಿದ್ದಾರೆ.
ಮಸೂದೆಯನ್ನು ರೂಪಿಸುವ ಸಂಬಂಧ ಕನ್ನಡ ಪರ ಚಿಂತಕರು, ಕಾನೂನು ಪಂಡಿತರು, ಸಾಹಿತಿಗಳು, ಹೋರಾಟಗಾರರು, ಕನ್ನಡ ಮತ್ತು ಸಂಸ್ಕೃತಿ ಚಿಂತಕರು, ವಾಣಿಜ್ಯ ಮತ್ತು ಕೈಗಾರಿಕಾ ತಜ್ಞರು, ಭಾಷಾ ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡದ ಅಭಿವೃದ್ಧಿ ಮತ್ತು ಬಳಕೆಗೆ ಕಾಲ ಕಾಲಕ್ಕೆ ಆದೇಶಗಳನ್ನು ಹೊರಡಿಸುತ್ತಾ ಬಂದಿದ್ದರೂ, ಸಮನ್ವಯದ ಕೊರತೆಯಿಂದ ಕನ್ನಡ ಪರ ಕಾಳಜಿಯ ಆದೇಶಗಳು ಅನುಷ್ಠಾನಗೊಂಡಿಲ್ಲ. ಬೇರೆ ರಾಜ್ಯಗಳಲ್ಲೂ ಇಂತಹದೇ ಸ್ಥಿತಿ ಉದ್ಭವಿಸಿದಾಗ ಅದಕ್ಕೆ ಪರಿಹಾರವಾಗಿ ಭಾಷಾ ಬಳಕೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನೂ ಒಟ್ಟುಗೂಡಿಸಿ ‘ಸಮಗ್ರ ಭಾಷಾ ಬಳಕೆ ಕಾಯ್ದೆ’ ರೂಪಿಸಿವೆ. ಆದ್ದರಿಂದ, ರಾಜ್ಯದಲ್ಲಿ ಮಸೂದೆಯ ಅಗತ್ಯವಿದೆ ಎಂದು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.
ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಸುಬ್ರಹ್ಮಣ್ಯ, ಸಾಹಿತಿ ದೊಡ್ಡರಂಗೇಗೌಡ, ಸಾಮಾಜಿಕ ಕಾರ್ಯಕರ್ತೆ ಮಾಳವಿಕಾ ಅವಿನಾಶ್, ಸಂಸದೀಯ ವ್ಯವಹಾರಗಳ ಇಲಾಖೆ ನಿವೃತ್ತ ಕಾರ್ಯದರ್ಶಿ ದ್ವಾರಕನಾಥ ಬಾಬು, ಕನ್ನಡಪರ ಹೋರಾಟಗಾರ ರಾ.ನಂ.ಚಂದ್ರಶೇಖರ್‌ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.