ಬೆಂಗಳೂರು: ‘ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕ ನಿರ್ಮಿಸಲು ಕನಿಷ್ಠ 10 ಎಕರೆ ಪ್ರದೇಶವನ್ನು ಮೀಸಲಿಡಲು ಸೂಕ್ತ ಆದೇಶ ಹೊರಡಿಸಬೇಕು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಗ್ರೀನ್ ಎನರ್ಜಿ ಉತ್ಪಾದನೆ ಮತ್ತು ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ನೂತನ ನೀತಿ ರೂಪಿಸುವುದಾಗಿ ಎಂ.ಬಿ. ಪಾಟೀಲ ಇತ್ತೀಚೆಗೆ ಪ್ರಕಟಿಸಿದ್ದರು. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಜೈವಿಕ ಇಂಧನ ಕಾರ್ಯ ಯೋಜನೆಗಳ ಕುರಿತು ಸುಧೀಂದ್ರ ಅವರು ಸಚಿವರ ಜೊತೆ ಶನಿವಾರ ಚರ್ಚೆ ನಡೆಸಿದರು.
ರಾಜ್ಯ ಜೈವಿಕ ಇಂಧನ ನೀತಿ ರೂಪಿಸಲು ಬೇರೆ ಬೇರೆ ರಾಜ್ಯಗಳ ನೀತಿಗಳನ್ನು ಮಂಡಳಿಯು ಈಗಾಗಲೇ ಪರಿಶೀಲಿಸಿರುವ ಕುರಿತು ಮಾಹಿತಿ ನೀಡಿದ ಸುಧೀಂದ್ರ, ಮಂಡಳಿಯು ಬಯೋ ಡೀಸೆಲ್, 2ಜಿ ಎಥನಾಲ್, ಕಂಪ್ರೆಸ್ಡ್ ಬಯೋ ಗ್ಯಾಸ್, ಗ್ರೀನ್ ಹೈಡ್ರೋಜನ್ ಮುಂತಾದ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸಿರುವ ಅರಿವು ಜಾಗೃತಿ ಪ್ರಾತ್ಯಕ್ಷಿಕೆಗಳ ಮೂಲಕ ರೈತರು, ವಿದ್ಯಾರ್ಥಿಗಳು, ಉದ್ದಿಮೆದಾರರ ಜೊತೆ ಭಾಗಿಯಾಗಿರುವ ಕುರಿತು ವಿವರಣೆ ನೀಡಿದರು.
ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ್ ಮತ್ತು ಇತರ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.