ADVERTISEMENT

ಬಯೊಮೆಡಿಕಲ್‌ ಉಪಕರಣ: ₹12 ಕೋಟಿ ನಷ್ಟ?

ಟೆಂಡರ್‌ ಅವ್ಯವಹಾರದ ಕುರಿತು ವರದಿ– ನಡೆಯದ ತನಿಖೆ

ಸಚ್ಚಿದಾನಂದ ಕುರಗುಂದ
Published 10 ಆಗಸ್ಟ್ 2022, 22:15 IST
Last Updated 10 ಆಗಸ್ಟ್ 2022, 22:15 IST
 ಡಾ.ಕೆ.ಸುಧಾಕರ್
 ಡಾ.ಕೆ.ಸುಧಾಕರ್   

ಬೆಂಗಳೂರು:ಆರೋಗ್ಯ ಇಲಾಖೆಯಲ್ಲಿನ ಬಯೊಮೆಡಿಕಲ್ ಉಪಕರಣಗಳ ನಿರ್ವಹಣೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ₹12.51 ಕೋಟಿಗೂ ಹೆಚ್ಚು ನಷ್ಟ ಮತ್ತು ಟೆಂಡರ್‌ ಪ್ರಕ್ರಿಯೆಯಲ್ಲಿಅಕ್ರಮಗಳು ನಡೆದಿದ್ದರೂ ತನಿಖೆ ನಡೆಸಲು ಸರ್ಕಾರ ಮುಂದಾಗಿಲ್ಲ.

ಇದೇ 8ರಂದು ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ವಿಷಯದ ಬಗ್ಗೆ ಚರ್ಚಿಸಲಾಗಿದ್ದು,ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಲು ಸಚಿವರಿಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಪ್ರಕರಣದ ಕುರಿತು ಹಿರಿಯ ಅಧಿಕಾರಿಯೊಬ್ಬರು ಸಮಗ್ರ ವರದಿ ಸಿದ್ಧಪಡಿಸಿ ಇಲಾಖೆಗೆ ಸಲ್ಲಿಸಿದ್ದರು. ಆದರೆ, ಇದುವರೆಗೆ ತನಿಖೆಗೆ ಆದೇಶ ನೀಡಿಲ್ಲ ಅಥವಾ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಯಾವುದೇ ರೀತಿ ಕ್ರಮಗಳನ್ನು ತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ. ಬದಲಾಗಿ, ಟೆಂಡರ್‌ ಪಡೆದ ಕಂಪನಿಗಳಿಗೆ ಬಿಲ್‌ ಪಾವತಿಸುವಂತೆ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

‘ಬಯೊಮೆಡಿಕಲ್‌ ಉಪಕರಣಗಳ ನಿರ್ವಹಣೆಯ ಟೆಂಡರ್‌ ಪ್ರಕ್ರಿಯೆಯನ್ನು ಆರೋಗ್ಯ ಇಲಾಖೆಯಕೆಲವು ಅಧಿಕಾರಿಗಳು ಬೇಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ.ಕರ್ನಾಟಕ ಸಾರ್ವ ಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಯನ್ನು ಉಲ್ಲಂಘಿಸಿದ್ದರಿಂದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ. ಹೀಗಾಗಿ, ಈ ಪ್ರಕರಣದ ಬಗ್ಗೆ ಸಮಗ್ರ ಪರಿಶೀಲನೆ ಕೈಗೊಳ್ಳುವ ಅಗತ್ಯವಿರುವುದರಿಂದ ತನಿಖಾ ಸಂಸ್ಥೆಗೆ ವಹಿಸುವುದು ಸೂಕ್ತವಾಗಿದೆ’ ಎಂದೂ ವರದಿ ಪ್ರತಿಪಾದಿಸಿದೆ.

ಪರೀಕ್ಷಾ ಕಿಟ್‌ಗಳು, ಎಕ್ಸ್‌–ರೇ ಯಂತ್ರಗಳು ಸೇರಿ ಹಲವು ಬಯೊ ಮೆಡಿಕಲ್‌ ಉಪಕರಣಗಳನ್ನು ಆಸ್ಪತ್ರೆಯಲ್ಲಿ ನಿರ್ವಹಿಸಲಾಗುತ್ತಿದೆ. ರಾಜ್ಯದಲ್ಲಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿನ ವಿವಿಧ ವೈದ್ಯಕೀಯ ಉಪಕರಣಗಳ ನಿರ್ವಹಣೆ ಮತ್ತು ದುರಸ್ತಿಗಾಗಿ 2017ರ ಮಾರ್ಚ್‌ 15ರಿಂದ ಆರಂಭವಾಗಿದ್ದ ಈ ಟೆಂಡರ್ ಪ್ರಕ್ರಿಯೆ ಹಣಕಾಸು ಇಲಾಖೆ ಅನುಮೋದನೆ ಪಡೆಯುವುದು ಸೇರಿ ವಿವಿಧ ಕಾರಣಗಳಿಂದ ವಿಳಂಬವಾಯಿತು. 2 ವರ್ಷಗಳ ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಯಿತು. ‘ಆರೋಗ್ಯ ಇಲಾಖೆಯಲ್ಲಿನ ಬಯೊಮೆಡಿಕಲ್‌ ಉಪಕರಣಗಳನ್ನು ಮೂರು ವರ್ಷ ನಿರ್ವಹಣೆ ಮಾಡಲು ₹53.96 ಕೋಟಿ ಮೊತ್ತಕ್ಕೆ ಟೆಂಡರ್‌ ನಿಗದಿಯಾಗಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅನುದಾನದ ಅಡಿಯಲ್ಲಿ ಜಾರಿಗೊಳಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಸಕಾರಣವಿಲ್ಲದೇ, ಈ ಮೊತ್ತವನ್ನು ₹74.98 ಕೋಟಿಗೆ ಹೆಚ್ಚಿಸಿ ಟೆಂಡರ್‌ ನೀಡಲಾಯಿತು. ಅನುಮೋದನೆ ನೀಡಿದ ಮೊತ್ತಕ್ಕಿಂತಲೂ ಶೇ 40ರಷ್ಟು ಹೆಚ್ಚಾಗಿತ್ತು’ ಎಂದು ವರದಿ ಹೇಳಿದೆ.

‘ನಿರ್ವಹಣೆ ಮಾಡಬೇಕಿದ್ದ 28 ಸಾವಿರ ಬಯೊ ಮೆಡಿಕಲ್‌ ಉಪಕರಣಗಳ ಆಸ್ತಿ ಮೌಲ್ಯವನ್ನು ಮೊದಲ ವರ್ಷಕ್ಕೆ ₹137.20 ಕೋಟಿ ಎಂದು ನಿಗದಿಪಡಿಸಿದ್ದು ಸಹ ಅಚ್ಚರಿ ಮೂಡಿಸಿದೆ. ನಂತರ, ‘ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸಸ್‌’ಗೆ ನೀಡಿದ ಗುತ್ತಿಗೆ ಮತ್ತು ಕಾರ್ಯಾದೇಶದಲ್ಲಿ ಆಸ್ತಿ ಮೌಲ್ಯವನ್ನು ದುರುದ್ದೇಶದಿಂದ ₹316.83 ಕೋಟಿ ಎಂದು ನಮೂದಿಸಲಾಯಿತು. ಇದರಿಂದ, ₹9.55 ಕೋಟಿಗೆ ನೀಡ ಬೇಕಾಗಿದ್ದ ಗುತ್ತಿಗೆಯನ್ನು ₹22.06 ಕೋಟಿಗೆ ನೀಡಲಾಯಿತು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹12.51 ಕೋಟಿ ನಷ್ಟವಾಗಿದೆ’ ಎಂದೂ ವರದಿ ವಿವರಿಸಿದೆ.

2019ರ ಫೆಬ್ರುವರಿ 11ರಂದು ದರ ನಿಗದಿಪಡಿಸುವ ಸಂಬಂಧ ನಡೆದ ಸಭೆಯಲ್ಲಿ ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ನ ಟೆಂಡರ್‌ ಸ್ವೀಕರಿಸಲಾಯಿತು. ಈ ಸಭೆಯಲ್ಲಿ ಎನ್‌ಎಚ್‌ಎಂ ಮುಖ್ಯ ಲೆಕ್ಕಾಧಿಕಾರಿ ಭಾಗವಹಿಸಿರಲಿಲ್ಲ. ಅಲ್ಲದೆ, ಅವರ ಅಭಿಪ್ರಾಯಗಳನ್ನು ಸಹ ಪಡೆಯಲಿಲ್ಲ ಎಂದು ಉಲ್ಲೇಖಿಸಲಾಗಿದೆ.

‘ಹೆಚ್ಚುವರಿ ಹಣ ನೀಡುವ ಪ್ರಶ್ನೆ ಇಲ್ಲ’

‘ಇದು ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದ್ದ ಗುತ್ತಿಗೆ ಪ್ರಕರಣ‌. ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸದ ಕಾರಣಕ್ಕಾಗಿ ಕಂಪನಿಗೆ ನೀಡಬೇಕಾದ ಹಣವನ್ನು ತಡೆಹಿಡಿಯಲಾಗಿದೆ. ಕೋವಿಡ್ ಬಳಿಕ ಕೆಲಸ ಮುಗಿಸಿದ್ದರೂ ಹಣ ನೀಡಿಲ್ಲ. ಕಂಪನಿಯವರು ಬಾಕಿ ನೀಡುವಂತೆ ಸರ್ಕಾರಕ್ಕೆ ಮನವಿ ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆ ಅಭಿಪ್ರಾಯ ಕೋರಲಾಗಿದೆ. ಅವರಿಗೆ ನೀಡಬೇಕಾದ ಹಣವನ್ನೇ ತಡೆಹಿಡಿದಿರುವಾಗ ಹೆಚ್ಚುವರಿ ಹಣ ನೀಡುವ ಪ್ರಶ್ನೆ ಎಲ್ಲಿದೆ?’

–ಡಾ. ಕೆ.ಸುಧಾಕರ್,ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.