ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಹಾಜರಾತಿಯನ್ನು ಪಾರದರ್ಶಕಗೊಳಿಸುವ ಸಲುವಾಗಿ ಬಯೊಮೆಟ್ರಿಕ್ ವ್ಯವಸ್ಥೆ ಅಳವಡಿಸಬೇಕು ಎಂಬ ಆದೇಶ ಹೊರಬಿದ್ದು ವರ್ಷ ಕಳೆದರೂ ಯಾವುದೇ ಪ್ರಗತಿ ಆಗಿಲ್ಲ.
ಬಯೊಮೆಟ್ರಿಕ್ ಅಳವಡಿಸಿದರೆ ಕಾಲೇಜಿಗೆ ನಿರ್ದಿಷ್ಟ ಸಮಯಕ್ಕೆ ಬರಬೇಕು, ನಿರ್ದಿಷ್ಟ ಅವಧಿಯವರೆಗೆ ಕಾಲೇಜಿನಲ್ಲೇ ಇರಬೇಕು. ಈ ‘ಬಂಧನ’ದಿಂದ ಸಾಧ್ಯವಾದಷ್ಟು ಸಮಯ ದೂರ ಇರುವ ಸಲುವಾಗಿ ಉಪನ್ಯಾಸಕರ ಒತ್ತಾಯದ ಮೇರೆಗೆಪ್ರಾಂಶುಪಾಲರು ತಮ್ಮ ಕಾಲೇಜಿನಲ್ಲಿ ಬಯೊಮೆಟ್ರಿಕ್ ವ್ಯವಸ್ಥೆ ಅಳವಡಿಸಲು ವಿಳಂಬ ಧೋರಣೆ ತಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
‘ನಮ್ಮ ಕಾಲೇಜಿನಲ್ಲಿ ಸುಮಾರು ₹32 ಸಾವಿರ ಖರ್ಚು ಮಾಡಿಬಯೊಮೆಟ್ರಿಕ್ ಉಪಕರಣ ಅಳವಡಿಸಿದ್ದೇವೆ. ನಮ್ಮಲ್ಲಿ ಈ ವ್ಯವಸ್ಥೆ ಆಗಿರುವುದಕ್ಕೆ ಹಲವು ಕಾಲೇಜುಗಳಿಂದ ಆಕ್ಷೇಪ ಬಂದಿದೆ.ಹೀಗಾಗಿ ನಮ್ಮ ಕಾಲೇಜಿನಲ್ಲಿ ಸಹ ಈಗ ಇದು ಮೂಲೆಗುಂಪಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೊಪ್ಪಳ ಜಿಲ್ಲೆಯ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು 2018ರ ಜುಲೈ 23ರಂದು ಸುತ್ತೋಲೆ ಹೊರಡಿಸಿ, 2018ರ ಆಗಸ್ಟ್ 1ರೊಳಗೆ ಎಲ್ಲಪ್ರಾಂಶುಪಾಲರು ತಮ್ಮ ಕಾಲೇಜಿನ ಎಲ್ಲ ನೌಕರರ ಆಧಾರ್ ಸಂಪರ್ಕ ಹೊಂದಿರುವ ಹಾಜರಾತಿ ಮಾಹಿತಿಯನ್ನು https://ktpuc.attendance.gov.in ಲಿಂಕ್‌ಗೆ ಹೋಗಿನಮೂದಿಸಬೇಕು ಎಂದು ಸೂಚಿಸಿದ್ದರು. ನಿರ್ದಿಷ್ಟ ನಮೂನೆಯ ಬಯೊಮೆಟ್ರಿಕ್ ಉಪಕರಣಗಳನ್ನು ಖರೀದಿಸಲು ಸಹ ನಿರ್ದೇಶನ ನೀಡಿದ್ದರು.
‘ಪದವಿಪೂರ್ವ ಕಾಲೇಜು ಸಿಬ್ಬಂದಿಯಲ್ಲಿ ಶಿಸ್ತು ತರುವುದು, ಪಾಠಗಳಿಂದವಿದ್ಯಾರ್ಥಿಗಳು ವಂಚಿತರಾಗದಂತೆ ನೋಡಿಕೊಳ್ಳಲು ಈ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದ ನಂತರವೂ ಹೆಚ್ಚಿನ ಪ್ರಗತಿ ಆಗಿಲ್ಲದಿರುವುದು ನಿಜ. ಶೀಘ್ರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇನೆ’ ಎಂದುಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ.ಕನಗವಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.