ಕೆ.ಆರ್.ಪುರ: ಅನರ್ಹ ಶಾಸಕ ಬೈರತಿ ಬಸವರಾಜ್ ವಿಜಯದಶಮಿ ನೆಪದಲ್ಲಿ ಕ್ಷೇತ್ರದ ಮುಖಂಡರಿಗೆ ಹಾಗೂ ಮತದಾರರಿಗೆ ಬುಧವಾರ ಭರ್ಜರಿ ಬಾಡೂಟ ಏರ್ಪಡಿಸಿದ್ದರು.
ಅನರ್ಹಗೊಂಡಿರುವ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಆರ್. ಶಂಕರ್ ಹಾಗೂ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಪೋಲಿಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಡಿಸೆಂಬರ್ ತಿಂಗಳಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ಕೆ.ಆರ್.ಪುರ ಸಮೀಪದ ಬೈರತಿಯ ಕನಕಶ್ರೀ ಬಡಾವಣೆಯಲ್ಲಿ ಪೆಂಡಾಲ್ ಹಾಕಿಸಿ ಸಾವಿರಾರು ಜನರಿಗೆ ಮಾಂಸಾಹಾರ ಹಾಗೂ ಸಸ್ಯಾಹಾರದ ಊಟ ಹಾಕಿಸಿದ್ದಾರೆ.
ಉಪಚುನಾವಣೆ ಸಮೀಪಿಸುತ್ತಿರುವುದರಿಂದ ಈಗಿನಿಂದಲೇ ಚುನಾವಣೆ ಪೂರ್ವ ತಯಾರಿ ಕೈಗೊಂಡಿದ್ದಾರೆ.
ಬಾಡೂಟ ಕಾರ್ಯಕ್ರಮದಲ್ಲಿ 6 ಟನ್ ಮಟನ್, ಮೂರು ಟನ್ ಚಿಕನ್, 500 ಕೆ.ಜಿ.ಮೀನು ಸೇರಿದಂತೆ ಬಿರಿಯಾನಿ, ಮುದ್ದೆ, ನಾಟಿಕೋಳಿ ಸಾರು, ಕಬಾಬ್, ಮೊಟ್ಟೆ, ವಿವಿಧ ರೀತಿಯ ಭಕ್ಷ್ಯಗಳನ್ನು ಉಣಬಡಿಸಲಾಗಿದೆ. ಬಾಡೂಟಕ್ಕೆ ಸಾರ್ವಜನಿಕರನ್ನು ಕರೆತರಲು ಖಾಸಗಿ ಹಾಗೂ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು.
ಕ್ಷೇತ್ರದ ಜನರಿಗೆ ಊಟಕ್ಕೆ ಬರಲು ವಾಟ್ಸ್‌ಆ್ಯಪ್ ಹಾಗೂ ಫೋನ್ ಕರೆಗಳ ಮೂಲಕ ಸ್ಥಳೀಯ ಮುಖಂಡರು ಮನವಿ ಮಾಡಿದ್ದರು.
ಚುನಾವಣೆ ಘೋಷಣೆ ಆದ ಬಳಿಕ ಈ ರೀತಿ ಬಾಡೂಟ ಹಾಕಿಸುವುದನ್ನು ಮತದಾರರಿಗೆ ಆಮಿಷವೊಡ್ಡಿದಂತೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.
ವಿಜಯದಶಮಿ ಪ್ರಯುಕ್ತ ಏಳೆಂಟು ವರ್ಷಗಳಿಂದ ಕ್ಷೇತ್ರದ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ
- ಬೈರತಿ ಬಸವರಾಜ್, ಅನರ್ಹ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.