ಬೆಂಗಳೂರು: ಹಣ ವಿನಿಮಯ ಏಜೆನ್ಸಿಗಳ ಸರ್ವರ್ ಹಾಗೂ ಆನ್‌ಲೈನ್ ಗೇಮಿಂಗ್ ಜಾಲತಾಣಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ದೋಚಿರುವುದರ ಹಿಂದೆ, ಅಂತರರಾಷ್ಟ್ರೀಯ ಹ್ಯಾಕರ್‌ಗಳ ತಂಡ ಕೆಲಸ ಮಾಡಿರುವ ಸಂಗತಿ ಪತ್ತೆಯಾಗಿದೆ.
ರಾಜ್ಯದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ‘ಬಿಟ್‌ಕಾಯಿನ್’ ಹಗರಣ ಅಗೆದಷ್ಟು ಆಳಕ್ಕೆ ಹೋಗುತ್ತಿದೆ. ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದ್ದು, ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಧಿಕಾರಸ್ಥ ಪ್ರಭಾವಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡು ಕೂರುವ ಸ್ಥಿತಿ ನಿರ್ಮಾಣವಾಗಿದೆ.
ಹಗರಣದ ಸೂತ್ರಧಾರ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಜಾತಕ ಜಾಲಾಡುತ್ತಿರುವ ತನಿಖಾ ತಂಡಗಳು, ಆತನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿವೆ. ಬಿಟ್ ಕಾಯಿನ್ ದರೋಡೆಯಲ್ಲಿ ಶ್ರೀಕಿ ಮಾತ್ರವಲ್ಲದೇ, ವಿದೇಶಗಳ ಹ್ಯಾಕರ್‌ಗಳು ಕೆಲಸ ಮಾಡಿರುವ ಅಂಶ ತನಿಖಾ ತಂಡಗಳ ನಿದ್ದೆಗೆಡಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಟನ್‌ಪೇಟೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಸಿಬಿ ಪೊಲೀಸರು, ಬಾಲ್ಯದಲ್ಲಿ ಶ್ರೀಕಿ ಪ್ರವೇಶ ಪಡೆದಿದ್ದ ‘ಬ್ಲ್ಯಾಕ್‌ಹ್ಯಾಟ್’ ಹ್ಯಾಕರ್‌ಗಳ ತಂಡದ ಬಗ್ಗೆಯೂ ಪ್ರಸ್ತಾಪಿಸಿದ್ದರು.
ಇದೇ ‘ಬ್ಲ್ಯಾಕ್‌ಹ್ಯಾಟ್’ ತಂಡದ ಸದಸ್ಯರು, ಇಂದಿಗೂ ಸಕ್ರಿಯರಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇರೂರಿರುವ ಅವರೆಲ್ಲ ಸಂಘಟಿತರಾಗಿ ತಾವಿದ್ದ ಸ್ಥಳದಿಂದಲೇ ತಂತ್ರಜ್ಞಾನವನ್ನು ಬಳಸಿಕೊಂಡು ಬಿಟ್ ಕಾಯಿನ್ ದರೋಡೆ ಮಾಡುತ್ತಿರುವ ಆತಂಕಕಾರಿ ಅಂಶವೂ ಪತ್ತೆಯಾಗಿದೆ.
ಜೋರು ಸಂಗೀತ, ನಿರಂತರ ಚಾಟಿಂಗ್: ‘20 ಜನರ ತಂಡ ಏಕಕಾಲದಲ್ಲಿ ಕೆಲಸ ಮಾಡಿ, ಸರ್ವರ್ ಹಾಗೂ ಜಾಲತಾಣಗಳನ್ನು ಹ್ಯಾಕ್ ಮಾಡುತ್ತಿತ್ತು. ವಿಚಾರಣೆ ವೇಳೆ ಶ್ರೀಕಿಯೇ ಈ ಬಗ್ಗೆ ಮಾಹಿತಿ ನೀಡಿದ್ದ’ ಪೊಲೀಸ್ ಮೂಲಗಳು ಹೇಳಿವೆ.
‘ಆ್ಯಪಲ್ ಕಂಪನಿ ಲ್ಯಾಪ್‌ಟಾಪ್ ತೆರೆದಿಟ್ಟುಕೊಳ್ಳುತ್ತಿದ್ದ ಶ್ರೀಕಿ, ತನ್ನ ಕೊಠಡಿಗೆ ಯಾರಾದರೂ ಬಂದು ಅಡಚಣೆ ಮಾಡಬಾರದು ಎಂಬ ಕಾರಣಕ್ಕೆ ಜೋರಾದ ಸಂಗೀತ ಹಾಕಿಕೊಳ್ಳುತ್ತಿದ್ದ. ಅದೇ ಸಂದರ್ಭದಲ್ಲೇ 20 ಜನ ಹ್ಯಾಕಿಂಗ್ ಪಂಟರ್ ಜೊತೆ ಏಕಕಾಲದಲ್ಲಿ ಚಾಟಿಂಗ್ ಮಾಡಲಾರಂಭಿಸುತ್ತಿದ್ದ. ಮೊದಲೇ
ಗುರುತಿಸಿಟ್ಟುಕೊಳ್ಳುತ್ತಿದ್ದ ಸರ್ವರ್ ಹಾಗೂ ಜಾಲತಾಣಗಳನ್ನು ಹ್ಯಾಕ್ ಮಾಡಿ, ಇಡೀ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ’ ಎಂದೂ ತಿಳಿಸಿವೆ.
‘ಹ್ಯಾಕಿಂಗ್ ಬಗ್ಗೆ ಸಂಬಂಧಪಟ್ಟ ಕಂಪನಿಗಳಿಗೆ ಅನುಮಾನ ಬಾರದಂತೆ ಮತ್ತೊಬ್ಬ ಹ್ಯಾಕರ್, ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದ. ಇನ್ನೊಬ್ಬ ಹ್ಯಾಕರ್, ಕೋಡಿಂಗ್ ಸಹಾಯದಿಂದ ದತ್ತಾಂಶವನ್ನು ಕದಿಯುತ್ತಿದ್ದ. ಮಗದೊಬ್ಬ, ಬಿಟ್ ಕಾಯಿನ್‌ಗಳನ್ನು ವ್ಯಾಲೆಟ್‌ಗೆ ವರ್ಗಾಯಿಸುತ್ತಿದ್ದ. ಇತರೆ ತಾಂತ್ರಿಕ ಕೆಲಸಗಳನ್ನು ಉಳಿದೆಲ್ಲ ಹ್ಯಾಕರ್‌ಗಳು ಮಾಡುತ್ತಿದ್ದರು. ಈ ಎಲ್ಲ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಸಣ್ಣದೊಂದು ಸುಳಿವು ಸಹ ಯಾರಿಗೂ ಗೊತ್ತಾಗುತ್ತಿರಲಿಲ್ಲ’ ಎಂದೂ ಹೇಳಿವೆ.
‘ಹ್ಯಾಕಿಂಗ್ ಕೆಲಸ ಮುಗಿಯುತ್ತಿದ್ದಂತೆ ಎಲ್ಲರೂ ಚಾಟಿಂಗ್ ಬಂದ್ ಮಾಡುತ್ತಿದ್ದರು. ಮುಂದಿನ ಕೃತ್ಯಕ್ಕೆ ಸಂಚು ರೂಪಿಸಿ, ಪುನಃ ಸಂಘಟಿತರಾಗಿ ಯಥಾಪ್ರಕಾರ ಹ್ಯಾಕ್ ಮಾಡುತ್ತಿದ್ದರು’ ಎಂದೂ ತಿಳಿಸಿವೆ.
ಬಿಟ್ ಕಾಯಿನ್ ಹಂಚಿಕೆ: ‘ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ದೋಚಿರುವಷ್ಟು ಬಿಟ್ ಕಾಯಿನ್‌ಗಳನ್ನು, ಇತರೆ 20 ಹ್ಯಾಕರ್‌ಗಳು ದೋಚಿರುವ ಅನುಮಾನವಿದೆ. ಇದು ಅಂತರರಾಷ್ಟ್ರೀಯ ಹ್ಯಾಕರ್‌ಗಳ ತಂಡವಾಗಿರುವುದರಿಂದ ತನಿಖೆ ನಡೆಸಲು ಸಾಕಷ್ಟು ಅಡ್ಡಿಗಳಿವೆ’ ಎಂದೂ ಮೂಲಗಳು ಹೇಳಿವೆ.
‘ಟಾಪ್–10’ ಪಟ್ಟಿಯಲ್ಲಿ ಶ್ರೀಕಿ: ‘ಹ್ಯಾಕರ್ ಆಗಬೇಕೆಂದು ತೀರ್ಮಾನಿಸಿದ್ದ ಶ್ರೀಕಿ ಹೆಚ್ಚಿನ ತರಬೇತಿ ಪಡೆಯಲೆಂದು ಇಂಟರ್‌ನೆಟ್ ರೆಲೇ ಚಾಟ್ (ಐಆರ್‌ಎಸ್) ಪ್ರೋಗ್ರಾಮ್ ಮೂಲಕ ‘ಬ್ಲ್ಯಾಕ್‌ಹ್ಯಾಟ್’ ಸದಸ್ಯರನ್ನು ಸಂಪರ್ಕಿಸಿದ್ದ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ತಂಡ ಸೇರುವಲ್ಲಿ ಯಶಸ್ವಿಯಾಗಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘8ನೇ ತರಗತಿಯಲ್ಲಿರುವಾಗಲೇ, ‘ಬ್ಲ್ಯಾಕ್‌ಹ್ಯಾಟ್’ ತಂಡದ ಅಡ್ಮಿನಿಸ್ಟ್ರೇಟರ್ ಆಗಿ ನೇಮಕವಾಗಿದ್ದ. ‘ರೋಸ್ / ಬಿಗ್ ಬಾಸ್’ ನಿಗೂಢ ಹೆಸರಿನಲ್ಲಿ ಸೈಬರ್ ಅಪರಾಧ ಎಸಗಲಾರಂಭಿಸಿದ್ದ. ದಿನ ಕಳೆದಂತೆ ಆತನ ಹೆಸರು ಅಂತರರಾಷ್ಟ್ರೀಯ ಮಟ್ಟದ ’ಟಾಪ್–10 ಹ್ಯಾಕರ್’ ಪಟ್ಟಿ ಸೇರಿತ್ತು’ ಎಂದೂ ಮೂಲಗಳು ತಿಳಿಸಿವೆ.
50 ಸಾವಿರ ಜನರಿದ್ದ ತಂಡ: ‘ಶ್ರೀಕಿ ನಾಯಕತ್ವ ವಹಿಸಿಕೊಂಡಿದ್ದ ಸಂದರ್ಭದಲ್ಲಿ ‘ಬ್ಲ್ಯಾಕ್‌ಹ್ಯಾಟ್’ ತಂಡದಲ್ಲಿ 50 ಸಾವಿರ ಸದಸ್ಯರಿದ್ದರು. ಅವರ ನಡುವೆ ವೈಮನಸ್ಸು ಉಂಟಾಗಿ ತಂಡ ಎರಡು ಭಾಗವಾಗಿತ್ತು. ಒಂದು ತಂಡದ ನಾಯಕತ್ವವನ್ನು ಶ್ರೀಕಿ ಮುಂದುವರಿಸಿದ್ದ’ ಎಂಬ ಸಂಗತಿಯೂ ಆರೋಪ ಪಟ್ಟಿಯಲ್ಲಿದೆ.
‘ಅಂತರರಾಷ್ಟ್ರೀಯ ಮಟ್ಟದ ತನಿಖೆ ಅಗತ್ಯ’
‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ‘ಬ್ಲ್ಯಾಕ್‌ಹ್ಯಾಟ್’ ತಂಡವನ್ನು ಬುಡ ಸಮೇತ ಕಿತ್ತೆಸೆಯಲು ದೊಡ್ಡ ಮಟ್ಟದ ತನಿಖೆ ಅಗತ್ಯವಿದೆ’ ಎಂದು ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಅಭಿಪ‍್ರಾಯ ವ್ಯಕ್ತವಾಗಿದೆ.
ಅಮೆರಿಕ, ಇಸ್ರೇಲ್, ಚೀನಾ, ಉಕ್ರೇನ್, ಬಾಂಗ್ಲಾದೇಶ, ಹಾಂಗ್‌ಕಾಂಗ್, ನೆದರ್ಲೆಂಡ್ಸ್, ಇಟಲಿ, ಸ್ವಿಟ್ಜರ್‌ಲೆಂಡ್, ಫ್ರಾನ್ಸ್ ಹಾಗೂ ಜರ್ಮನಿ ದೇಶದ ಹ್ಯಾಕರ್‌ಗಳು ತಂಡದಲ್ಲಿದ್ದಾರೆ. ಹೀಗಾಗಿ, ಪ್ರತಿಯೊಂದು ದೇಶದ ಪ್ರತಿನಿಧಿಗಳ ನೇತೃತ್ವದಲ್ಲಿ ಇಂಟರ್‌ಪೋಲ್ ಮೂಲಕ ವಿಶೇಷ ತಂಡವೊಂದನ್ನು ರಚಿಸಿ ಜಾಲ ಭೇದಿಸಬೇಕಿದೆ. ಶ್ರೀಕೃಷ್ಣನಿಂದ ಬಿಟ್ ಕಾಯಿನ್ ದೋಚಿದ್ದವರ ಬಂಡವಾಳವೂ ಬಯಲಾಗಲಿದೆ ಎಂಬ ಚರ್ಚೆ ಅಧಿಕಾರಿಗಳ ವಲಯದಲ್ಲಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.