ADVERTISEMENT

‘ಜೊಮ್ಯಾಟೊ’ ಸೇರಿದಂತೆ ಪಾವತಿ ಪೋರ್ಟಲ್‌ ಮೇಲೂ ಕಣ್ಣು ಹಾಕಿದ್ದ ಶ್ರೀಕಿ

ಅಕ್ರಂ ಮೊಹಮ್ಮದ್
Published 17 ನವೆಂಬರ್ 2021, 22:34 IST
Last Updated 17 ನವೆಂಬರ್ 2021, 22:34 IST
   

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯು ಭಾರತದ ಆನ್‌ಲೈನ್‌ ಪಾವತಿ ಪೋರ್ಟಲ್‌ಗಳ ಮೇಲೆಯೂ ಕಣ್ಣು ಹಾಕಿದ್ದ. ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್‌ ಮತ್ತು ಆಹಾರ ವಿತರಣೆ ಸಂಸ್ಥೆ ‘ಜೊಮ್ಯಾಟೊ’ವನ್ನೂ ಹ್ಯಾಕ್‌ ಮಾಡಲು ಉದ್ದೇಶಿಸಿದ್ದ ಎಂಬ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಶ್ರೀಕಿ ಮತ್ತು ಆತನ ಗೆಳೆಯ ರಾಬಿನ್‌ ಖಂಡೇಲ್‌ ವಾಲ್‌ನಿಂದ ವಶಪಡಿಸಿಕೊಳ್ಳಲಾದ ಒಂದು ಹಾರ್ಡ್‌ಡಿಸ್ಕ್‌ನಲ್ಲಿ ಇಂತಹ ಮಾಹಿತಿ ಸಿಕ್ಕಿದೆ. 16 ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುವುದಕ್ಕೆ ಸಂಬಂಧಿಸಿದ ಮಾಹಿತಿಯು ಈ ಹಾರ್ಡ್‌ಡಿಸ್ಕ್‌ನಲ್ಲಿ ಇದೆ ಎಂಬುದುಸೈಬರ್‌ ವಿಧಿವಿಜ್ಞಾನ ಸಂಸ್ಥೆಯು ನಡೆಸಿದ ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ. ಆನ್‌ಲೈನ್‌ ಪಾವತಿ ಪೋರ್ಟಲ್‌ಗಳಾದ ಕ್ಯಾಷ್‌ಫ್ರೀ, ಪೇಯುಮನಿ, ಪೋಕರ್‌ ಸೈಟ್‌ಗಳಾದ ಪಿಪಿಪೋಕರ್‌ ಕ್ಲಬ್‌, ಕಾಲಿಂಗ್‌ಸ್ಟೇಷನ್‌, ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್‌ ಎಫ್‌ಸಿಸಿಇ.ಜೆಪಿ ಈ ಪಟ್ಟಿಯಲ್ಲಿ ಇವೆ.

ಈ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುವ ಪ್ರಯತ್ನ ನಡೆದಿತ್ತು ಎಂಬುದು ಕ್ಯಾಸಿನೊ143 ಮತ್ತು ಪೆಸಿಫಿಕ್‌ ಗೇಮಿಂಗ್‌ ಪ್ರೈ. ಲಿ.ನ ಪೋಕರ್‌ಸೇಂಟ್‌ ವೆಬ್‌ಸೈಟ್‌ ಹ್ಯಾಕಿಂಗ್‌ನ ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿತ್ತು.

ADVERTISEMENT

ಗ್ರೂಪ್‌ ಸೈಬರ್‌ ಐಡಿ ಟೆಕ್ನಾಲಜಿ ಪ್ರೈ.ಲಿ. ಎಂಬ ಸೈಬರ್‌ ವಿಧಿವಿಜ್ಞಾನ ಸಂಸ್ಥೆಯು ಹಾರ್ಡ್‌ಡಿಸ್ಕ್ ಅನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಅದರಲ್ಲಿ 16 ವೆಬ್‌ಸೈಟ್‌ಗಳ ಪಟ್ಟಿ ಇತ್ತು ಎಂದು ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಇದೆ. ಪೊಲೀಸರು ಒಟ್ಟು ಆರು ಹಾರ್ಡ್‌ಡಿಸ್ಕ್‌ಗಳನ್ನು ವಶಕ್ಕೆ ಪಡೆದಿದ್ದರು.

ಇತರ ಹಾರ್ಡ್‌ಡಿಸ್ಕ್‌ಗಳಲ್ಲಿ ಇರುವ ಮಾಹಿತಿಯು ಗೂಢಲಿಪಿಯಲ್ಲಿದೆ. ಈಗ ಇರುವ ವಿಧಿವಿಜ್ಞಾನ ಸಾಫ್ಟ್‌ವೇರ್‌ ಬಳಸಿ ಈ ಹಾರ್ಡ್‌ಡಿಸ್ಕ್‌ಗಳಲ್ಲಿನ ಮಾಹಿತಿ ಸಂಗ್ರಹಿಸಲು ಸಾಧ್ಯವಿಲ್ಲ ಎಂದುಸೈಬರ್‌ ವಿಧಿವಿಜ್ಞಾನ ಸಂಸ್ಥೆಯು ಹೇಳಿದೆ.

ತನ್ನ ವೆಬ್‌ಸೈಟ್‌ಗೆ ಕನ್ನ ಹಾಕಿ 1.7 ಕೋಟಿ ಬಳಕೆದಾರರ ಮಾಹಿತಿ ಕಳ್ಳತನ ಮಾಡಲಾಗಿದೆ ಎಂದು ಜೊಮ್ಯಾಟೊ ಸಂಸ್ಥೆಯು 2017ರ ಮೇಯಲ್ಲಿ ಹೇಳಿತ್ತು. ಶ್ರೀಕಿಯ ಪಟ್ಟಿಯಲ್ಲಿ ಜೊಮ್ಯಾಟೊ ಕೂಡ ಇತ್ತು ಎಂಬ ಬಗ್ಗೆ ಜೊಮ್ಯಾಟೊ ಸಂಸ್ಥೆಯಿಂದ ಪ್ರತಿಕ್ರಿಯೆ ಪಡೆದುಕೊಳ್ಳು
ವುದು ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.