ADVERTISEMENT

ಪ್ರಿಯಾಂಕ್ ಖರ್ಗೆ ಬರಹ: ಬೆಕ್ಕು ಕಣ್ ಮುಚ್ಚಿ ಬಿಟ್ ಬೈ ಬಿಟ್ ಹಾಲು ಕುಡಿದಾಗ

ಬಿಟ್‌ಕಾಯಿನ್‌ ಹಗರಣವನ್ನು ಸರ್ಕಾರ ನಿಭಾಯಿಸಿದ ರೀತಿ ಸರಿ ಇದೆಯೇ?

ಪ್ರಿಯಾಂಕ ಖರ್ಗೆ/ ನಿರೂಪಣೆ : ಸುದೇಶ ದೊಡ್ಡಪಾಳ್ಯ
Published 19 ನವೆಂಬರ್ 2021, 20:45 IST
Last Updated 19 ನವೆಂಬರ್ 2021, 20:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬಿಟ್‌ಕಾಯಿನ್ ಎಲ್ಲರಿಗೂ ಒಮ್ಮೆಗೇ ಅರ್ಥವಾಗುವ ವಿಚಾರ ಅಲ್ಲ. ಜೀವನಪೂರ್ತಿ ಗಾಂಧಿ ನೋಟು ಹಿಡಿದು ರೂಪಾಯಿಯಲ್ಲಿ ವಹಿವಾಟು ನಡೆಸಿರುವ ನಾವುಗಳು ಷೇರು ಮಾರುಕಟ್ಟೆ ಅಂದರೇನೇ ತುಸು ತಲೆ ಕೆಡಿಸಿಕೊಳ್ಳೋ ಸ್ಥಿತಿ ಇರುವಾಗ, ಡಿಜಿಟಲ್ ಕರೆನ್ಸಿಯನ್ನು ಅರಗಿಸಿಕೊಳ್ಳುವುದು ಸುಲಭದ ಮಾತಲ್ಲ. ಭೌತಿಕವಾಗಿ ಕೈಗೇ ಎಟುಕದ, ನಮ್ಮಂತ ಸಾಮಾನ್ಯರ ಪಾಲಿಗೆ ಇದು ಇನ್ನೂ ನಿಗೂಢವಾಗಿಯೇ ಇದೆ. ಮೇಲ್ನೋಟಕ್ಕೆ ಕಾಣಿಸುತ್ತಿರುವಂತೆ; ಇನ್ನೂ ಸ್ಪಷ್ಟವಾಗಿ ಹೇಳಬಹುದಾದರೆ ‘ಚೌಕಿದಾರ’ ಎಂದೇ ಜಗತ್ ಪ್ರಸಿದ್ಧರಾದ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಈ ಪ್ರಕರಣದ ನಿಖರ ದಾಖಲೆ ತಲುಪಿದೆ. ಬಿಟ್‌ಕಾಯಿನ್‌ಗಳನ್ನೇ ಬಂಡವಾಳ ಮಾಡಿಕೊಂಡ ರಾಜ್ಯದ ಬಿಜೆಪಿ ಸರ್ಕಾರ, ಸಾವಿರಾರು ಕೋಟಿಯ ದೊಡ್ಡ ಹಗರಣವನ್ನೇ ನಡೆಸಿದೆ ಎಂಬ ಆರೋಪ ದೂರಿನಲ್ಲಿದೆ.

ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬ ಮಾತಿದೆ. ವಿಚಿತ್ರವೆಂದರೆ ಕಾಣದ ‘ಕಾಯಿನ್‌’ಗಳ ಜಾಡನ್ನೇ ಹಿಡಿದ ಕರ್ನಾಟಕದ ಬಿಜೆಪಿ ‘ಚೌಕಿದಾರರು’, ಬಿಟ್‌ಕಾಯಿನ್ ಕದ್ದಿರುವ ಅಂತರಾಷ್ಟ್ರೀಯ ಕಳ್ಳನಿಂದಲೇ ತಮ್ಮ ನಿಗೂಢ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಮಾಹಿತಿಗಳು ಸದ್ದು ಮಾಡುತ್ತಿವೆ. ಕಳ್ಳನನ್ನು ಹಿಡಿದವರು ಆತನನ್ನು ಜೈಲಿಗೆ ಅಟ್ಟುವ ಬದಲು, ತಮ್ಮ ಕಸ್ಟಡಿಯೊಳಗಿಟ್ಟುಕೊಂಡು ಕಳವಿನ ಜಾಣ ಮಾರ್ಗವನ್ನು ಅವನಿಂದಲೇ ಕಲಿತು, ಹಣ ಲಪಟಾಯಿಸಿರುವ ಹೊಸ ಹಗರಣ ಇದು. ದಶಕದ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಡೆದ ಅಕ್ರಮ ಗಣಿಗಾರಿಕೆ ಹಗರಣಕ್ಕಿಂತ ಹತ್ತುಪಟ್ಟು ದೊಡ್ಡದಾದ, ಹ್ಯಾಕಿಂಗ್ ಜಾಲದಲ್ಲಿ ವಿದೇಶದ ಖಾತೆಗಳಿಂದಲೂ ಹಣ ಎಗರಿಸಿದ ಘೋರ ಅಪರಾಧದ ಪಾತಕ ಲೋಕ ಇದು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಬಿಜೆಪಿಯ ವರಿಷ್ಠರು ಈ ಬಿಟ್‌ಕಾಯಿನ್ ಪ್ರಕರಣ ಗಂಭೀರ ವಿಷಯವಲ್ಲ ಎಂದು ಸಮರ್ಥನೆ ಕೊಡುತ್ತಿದ್ದಾರೆ. ಇನ್ನೊಂದೆಡೆ, ‘ಈ ವಿಷಯವನ್ನು ಪ್ರಧಾನಿಯವರಲ್ಲಿ ನಾನೇ ಪ್ರಸ್ತಾಪ ಮಾಡಿದೆ’ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಸೋರಿಕೆ ಮಾಡದಂತೆ ನೋಡಿಕೊಳ್ಳಲು ಕೇಂದ್ರದ ಗೃಹ ಸಚಿವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸೂಚಿಸಿದ್ದಾರೆ. ರಾಜ್ಯ ಸರ್ಕಾರದ ಸಚಿವರು ಹಾಗೂ ಬಿಜೆಪಿಯ ನಾಯಕರು ಪತ್ರಿಕಾಗೋಷ್ಠಿ ನಡೆಸಿ ವಿಷಯಾಂತರ ಮಾಡಿ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲ ವಿದ್ಯಮಾನ ಗಮನಿಸಿದರೆ ಒಟ್ಟಾರೆ ಈ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತಿದೆ.

ADVERTISEMENT

ಬಿಟ್‌ಕಾಯಿನ್ ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು, 2020ರ ನವೆಂಬರ್ ತಿಂಗಳಲ್ಲಿ. ಪೊಲೀಸರ ಪ್ರಕಾರ, ಬಿಟ್‌ಕಾಯಿನ್ ಪಾವತಿಸಿ ವಿದೇಶದಿಂದ ಡ್ರಗ್ಸ್ ಆಮದು ಮಾಡಿಕೊಳ್ಳುವ ಪ್ರಕರಣದಲ್ಲಿ (ಕ್ರೈಂ ನಂಬರ್ 91/2020) ಬಂಧಿತನಾದ ಶ್ರೀಕೃಷ್ಣ ಇಡೀ ಹಗರಣದ ಕೇಂದ್ರ. ಜೀವನದಲ್ಲಿ ಮಾಡಿದ್ದ ಎಲ್ಲ ಹ್ಯಾಕಿಂಗ್ ವಿವರಗಳನ್ನು ಪೊಲೀಸರ ಮುಂದೆ ತನಿಖೆ ವೇಳೆ ಆತ ಒಪ್ಪಿಕೊಳ್ಳುತ್ತಾನೆ. ಅವನ ಹೇಳಿಕೆಗಳನ್ನೇ ಆಧಾರವಾಗಿಸಿ ಸ್ವತಃ ಪೊಲೀಸರೇ ಅವನ ವಿರುದ್ಧ ಮೇಲಿಂದ ಮೇಲೆ ದೂರನ್ನು ದಾಖಲಿಸುತ್ತಾ 4 ತಿಂಗಳು ಕಸ್ಟಡಿಯಲ್ಲಿಯೇ ವಿಚಾರಣೆಯನ್ನೂ ನಡೆಸುತ್ತಾರೆ.

ತನಿಖೆಯು ನ್ಯಾಯರೂಪದಲ್ಲಿ ನಡೆದಿದ್ದರೆ ಸತ್ಯಾಸತ್ಯತೆಯನ್ನು ತೆರೆದಿಡಬೇಕಾಗಿತ್ತು. ಆದರೆ, ಒಂದು ಕಾಲದಲ್ಲಿ ದೇಶದ ಹೆಮ್ಮೆ ಎನಿಸಿದ್ದ ರಾಜ್ಯದ ಪೊಲೀಸರು, ಈ ಪ್ರಕರಣದಲ್ಲಿ ಅನುಮಾನದ ಹುತ್ತ ಕಟ್ಟುವ ರೀತಿಯಲ್ಲಿ ಸತ್ಯವನ್ನೇ ಮರೆಮಾಚಲು ತನಿಖೆ ಹೆಸರಿನಲ್ಲಿ ಅಕ್ರಮಗಳನ್ನು ನಡೆಸುತ್ತಾ ಹೋಗಿರುವುದು ಒಂದು ರೀತಿಯ ‘ಪವಾಡ’.

ಶ್ರೀಕೃಷ್ಣನ ಸ್ವಯಂಹೇಳಿಕೆಯನ್ನೇ ಆಧಾರವಾಗಿಸಿಕೊಂಡು ಪೊಲೀಸರೇ ದಾಖಲಿಸಿಕೊಂಡ ಕ್ರೈಂ ನಂಬರ್ 45/2020 ವಿಚಾರಣೆ ವೇಳೆ, ₹9 ಕೋಟಿ ಮೌಲ್ಯದ 31 ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು (31 ಬಿಟ್ ಕಾಯಿನ್‌ಗಳ ಇಂದಿನ ಮೌಲ್ಯ ₹13.45 ಕೋಟಿ ) ಬೆಂಗಳೂರು ಪೊಲೀಸರು ಇದೇ ವರ್ಷದ ಜನವರಿ 12ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆದರೆ, ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ, ಯಾವುದೇ ಬಿಟ್‌ಕಾಯಿನ್ ವಶಪಡಿಸಿಕೊಂಡಿಲ್ಲ ಎನ್ನಲಾಗಿದೆ. ಹಾಗಿದ್ದಲ್ಲಿ, ಬಿಟ್‌ಕಾಯಿನ್ ವಶಪಡಿಸಿಕೊಂಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಬಂದು ಸುಳ್ಳು ಹೇಳಿದ್ದೇಕೆ?

ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್‌ ಅನ್ನು ಕೂಡ ಹ್ಯಾಕ್ ಮಾಡಿರುವುದಾಗಿ ಶ್ರೀಕೃಷ್ಣ ಒಪ್ಪಿಕೊಂಡಿದ್ದಾನೆ. ಎರಡು ಬಾರಿ ವೆಬ್‌ಸೈಟ್ ಹ್ಯಾಕ್ ಮಾಡಿ, ಒಮ್ಮೆ ₹18 ಕೋಟಿ ಹಾಗೂ ಇನ್ನೊಮ್ಮೆ ₹28 ಕೋಟಿಯನ್ನು ತನ್ನ ಸ್ನೇಹಿತನ ಖಾತೆಗಳಿಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾನೆ. ₹28 ಕೋಟಿ ವರ್ಗಾವಣೆಗೆ ಬ್ಯಾಂಕ್‌ನ ಕಡೆಯಿಂದ ‘ಬ್ರೇಕ್’ ಹಾಕಲಾಗಿತ್ತಾದರೂ, ₹18 ಕೋಟಿ ವರ್ಗಾವಣೆಯನ್ನು ತಡೆಯಲು ಸರ್ಕಾರಕ್ಕೆ ಆಗಿಲ್ಲ. ಈ ಕುರಿತು ಕ್ರೈಂ ನಂ 9/2019 ರಲ್ಲಿಯೇ ಪ್ರಕರಣ ದಾಖಲಾಗಿದೆ. ಆದರೆ, ಆರೋಪಿಯೇ 100ಕ್ಕೂ ಹೆಚ್ಚು ದಿನ ಪೊಲೀಸ್ ಕಸ್ಟಡಿಯಲ್ಲಿದ್ದರೂ ₹18 ಕೋಟಿಯನ್ನು ಈವರೆಗೂ ವಸೂಲಾತಿ ಮಾಡಿಲ್ಲವೇಕೆ? ಇದು ಯಾರ ಪಾಲಾಗಿದೆ? ಈ ಬಗ್ಗೆ ತನಿಖೆಯೇ ನಡೆದಿಲ್ಲವೇಕೆ?

ಈ ಕ್ರೈಂ ನಂಬರ್ 45/2020ರ ವಿಚಾರಣೆ ವೇಳೆ ಪೊಲೀಸರು ಒಟ್ಟು 3 ಪಂಚನಾಮೆಗಳನ್ನು ಮಾಡಿದ್ದಾರೆ. 8ನೇ ಜನವರಿಯಲ್ಲಿ ನಡೆಯುವ ಮೊದಲ ಪಂಚನಾಮೆಯಲ್ಲಿ ಶ್ರೀಕೃಷ್ಣನ ಬಿಟ್‌ಕಾಯಿನ್ ವ್ಯಾಲೆಟ್‌ನ ಪಾಸ್‌ವರ್ಡ್ ಬದಲಿಸಿ 31 ಬಿಟ್‌ಕಾಯಿನ್ ವಶ ಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಜನವರಿ 18ರಂದು ನಡೆಯುವ ಎರಡನೇ ಪಂಚನಾಮೆಯಲ್ಲಿ ರಾಬಿನ್‌ನಿಂದ (ಆರೋಪಿ ನಂ 2) 0.08 ಬಿಟ್‌ಕಾಯಿನ್ ವಶಪಡಿಸಿಕೊಂಡು ಯುನೋ ಕಾಯಿನ್ ಎಂಬ ಸಂಸ್ಥೆಯಲ್ಲಿ ಪೊಲೀಸ್ ವ್ಯಾಲೆಟ್ ತೆರೆದು ಅಲ್ಲಿಗೆ ವರ್ಗಾವಣೆ ಮಾಡಿಕೊಂಡು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜನವರಿ 22ರಂದು ನಡೆಯುವ ಮೂರನೇ ಪಂಚನಾಮೆಯಲ್ಲಿ ಶ್ರೀಕೃಷ್ಣನಿಂದ ವಶಪಡಿಸಿಕೊಂಡಿದ್ದ 31 ಬಿಟ್‌ಕಾಯಿನ್‌ಗಳನ್ನೂ ಪೊಲೀಸ್ ವ್ಯಾಲೆಟ್‌ಗೆ ವರ್ಗಾವಣೆ ಮಾಡಲು ಹೋದಾಗ, ಅಲ್ಲಿ 31 ಬಿಟ್‌ಕಾಯಿನ್ ಬದಲಾಗಿ 186.8 ಬಿಟ್‌ಕಾಯಿನ್‌ಗಳು ಸಿಕ್ಕಿವೆ. ಆದರೆ, ‘ಪ್ರೈವೇಟ್ ಕೀ’ ಇಲ್ಲದೆ ಅವುಗಳ ವರ್ಗಾವಣೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಎರಡು ಪಂಚನಾಮೆಗಳಲ್ಲಿ ಪೊಲೀಸರು ಸೈಬರ್ ಪರಿಣಿತರು ಎಂದು ಕರೆಸುವುದು ಯುನೋ ಕಾಯಿನ್ ಕಂಪನಿಯ ಇಬ್ಬರು ನಿರ್ದೇಶಕರನ್ನು ಎಂಬುದು ಸಂದೇಹಗಳಿಗೆ ಕಾರಣವಾಗುವ ಅಂಶ.

ಕ್ರೈಂ ನಂ 153/2020ರ ಎಫ್‌ಐಆರ್‌ನಲ್ಲಿ ಯುನೋ ಕಾಯಿನ್ ವೆಬ್‌ಸೈಟ್ ಅನ್ನು ಶ್ರೀ ಕೃಷ್ಣ ಹ್ಯಾಕ್ ಮಾಡಿರುವ ಉಲ್ಲೇಖವಿದೆ. ಹೀಗಿರುವಾಗ, ಯಾವ ಸಂಸ್ಥೆಯ ವೆಬ್‌ಸೈಟ್ ಅನ್ನು ಆರೋಪಿ ಈಗಾಗಲೇ ಹ್ಯಾಕ್ ಮಾಡಿದ್ದನೋ, ಅದೇ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪೊಲೀಸರು ವ್ಯಾಲೆಟ್ ತೆರೆದಿದ್ದೇಕೆ? ಈಗಾಗಲೇ ಹ್ಯಾಕ್‌ಗೆ ಒಳಗಾದ ಸಂಸ್ಥೆಯ ಮೇಲೆ ಪೊಲೀಸರಿಗೆ ಇರುವ ಭರವಸೆಯಾದರೂ ಏನು? ಈ ಸಂಸ್ಥೆಯವರನ್ನೇ ಕರೆಸಿ ಪ್ರಕರಣ ಮುಚ್ಚಲು ಬೇಕಾದಂತೆ ಪಂಚನಾಮೆ ಮಾಡಿಸಿರುವುದನ್ನು ಗಮನಿಸಿದರೆ ಪೊಲೀಸರಿಗೆ ಒತ್ತಡ ಇತ್ತೇ ಎಂಬ ಸಂಶಯ ಮೂಡುತ್ತದೆ.

ಹಗರಣ ಎಲ್ಲಿದೆ? : ಈ ಹಗರಣಕ್ಕೆ ಪುಷ್ಟಿ ನೀಡುವ ಒಂದು ಕುತೂಹಲಕಾರಿ ಸಂಗತಿ ಇದೆ. ‘ವೇಲ್ ಅಲರ್ಟ್ಸ್’; ಇದು ಜಗತ್ತಿನ ಬಿಟ್‌ಕಾಯಿನ್ ವಹಿವಾಟಿನ ಕುರಿತು ವರದಿ ಮಾಡುವ ಸಂಸ್ಥೆ. 2016ರಲ್ಲಿ ಹ್ಯಾಕ್ ಆಗಿದ್ದ ಬಿಟ್‌ಫಿನೆಕ್ಸ್ ಕಂಪನಿಯ ಒಟ್ಟು 15,000 ಬಿಟ್‌ಕಾಯಿನ್‌ಗಳು ಈ ಐದು (2021ರವರೆಗಿನ) ವರ್ಷಗಳಲ್ಲಿ ಮೊದಲ ಬಾರಿಗೆ2020ರ ಡಿಸೆಂಬರ್1 ಹಾಗೂ 2021ರ ಏಪ್ರಿಲ್‌ 1 ರಂದು ದಿನಾಂಕಗಳಂದು ವರ್ಗಾವಣೆಯಾಗಿದೆ ಎಂದು ವರದಿ ಮಾಡಿದೆ.

‘ಬಿಟ್‌ಫಿನೆಕ್ಸ್’ ಕಂಪನಿಯ ಸರ್ವರ್‌ ಅನ್ನು ಎರಡು ಬಾರಿ ಹ್ಯಾಕ್ ಮಾಡಿರುವುದಾಗಿ ಶ್ರೀಕೃಷ್ಣ ನವೆಂಬರ್‌ನಲ್ಲಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ನಂತರ ವೇಲ್ ಅಲರ್ಟ್ಸ್ ಸಂಸ್ಥೆಯ ವರದಿಯಂತೆ ಹ್ಯಾಕ್ ಆದ ಈ ಕಂಪನಿಯ ಬಿಟ್‌ಕಾಯಿನ್ ವರ್ಗಾವಣೆಯಾದ ಎರಡು ದಿನಗಳಂದು ಶ್ರೀಕೃಷ್ಣ ಪೊಲೀಸ್ ಕಸ್ಟಡಿಯಲ್ಲಿದ್ದ. ಕಸ್ಟಡಿಯಲ್ಲಿರುವ ಅವಧಿ ಹಾಗೂ ಬೃಹತ್ ಪ್ರಮಾಣದ ಬಿಟ್‌ಕಾಯಿನ್ ವರ್ಗಾವಣೆಯನ್ನು ತಾಳೆ ಹಾಕಿದರೆ, ಸಾವಿರಾರು ಕೋಟಿ ಹಗರಣ ಮತ್ತು ಅದರ ಜತೆಗೆ ಬಿಜೆಪಿ ನಾಯಕರಿಗೆ ಇರಬಹುದಾದ ನಂಟಿನ ಸಂಶಯ ಮತ್ತಷ್ಟು ದಟ್ಟವಾಗುತ್ತದೆ.

ಬೆಕ್ಕು ತಾನು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲ ಎಂಬ ಭಾವನೆಯಲ್ಲಿ ಈ ಸರ್ಕಾರದ ಪ್ರಮುಖ ಭಾಗವಾಗಿರುವ ಅನೇಕ ಮಂದಿ ಹತ್ತಾರು ಸಾವಿರ ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್‌ಗಳನ್ನು ಲಪಟಾಯಿಸಿ ಈಗ ನಿದ್ದೆಗೆಟ್ಟಿರುವುದಂತೂ ಅಕ್ಷರಶಃ ಸತ್ಯ.

-ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಐಟಿ ವಿಭಾಗ ಮುಖ್ಯಸ್ಥ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.