ADVERTISEMENT

ಬಿಟ್ ಕಾಯಿನ್: ಶ್ರೀಕಿ, ಖಂಡೇಲ್ ವಾಲಾಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:14 IST
Last Updated 23 ಜುಲೈ 2024, 14:14 IST
ಶ್ರೀಕಿ
ಶ್ರೀಕಿ   

ಬೆಂಗಳೂರು:‌ ಬಹುಕೋಟಿ ಮೌಲದ್ಯ ಬಿಟ್ ಕಾಯಿನ್ ಕಳವು ಪ್ರಕರಣದ ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿರುವ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ರಮೇಶ್ ಹಾಗೂ ರಾಬಿನ್ ಖಂಡೇಲ್ ವಾಲಾಗೆ ತುಮಕೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಶ್ರೀಕಿ ಮತ್ತು ರಾಬಿನ್ ಖಂಡೇಲ್ ವಾಲಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ತುಮಕೂರಿನ 1ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎನ್.ಸುಬ್ರಹ್ಮಣ್ಯ ಪ್ರಕಟಿಸಿದ್ದು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

‘ಪ್ರಕರಣದ 1ನೇ ಆರೋಪಿ ಶ್ರೀಕಿ ₹50 ಸಾವಿರ ಮೊತ್ತದ ಬಾಂಡ್‌ ಹಾಗೂ ಒಬ್ಬರ ಶ್ಯೂರಿಟಿ ನೀಡಬೇಕು ಮತ್ತು 2ನೇ ಆರೋಪಿ ರಾಬಿನ್‌ ಖಂಡೇಲ್‌ ವಾಲಾ ₹25 ಸಾವಿರ ಮೊತ್ತದ ನಗದು ಶ್ಯೂರಿಟಿ ನೀಡಬೇಕು’ ಎಂಬುದೂ ಸೇರಿದಂತೆ ಇತರೆ ಷರತ್ತುಗಳನ್ನು ವಿಧಿಸಲಾಗಿದೆ.

ADVERTISEMENT

ಕೋರಿಕೆ ಏನಿತ್ತು?: ‘ಸರ್ಕಾರ ನಮ್ಮ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ) ಕಾಯ್ದೆ–2000 ಅನ್ನು ಅನ್ವಯಿಸಿತ್ತು. ಇತ್ತೀಚೆಗಷ್ಟೇ ಹೈಕೋರ್ಟ್, ಕೋಕಾ ಕಾಯ್ದೆ ಹೇರಿ ಹೊರಡಿಸಲಾಗಿದ್ದ ಆದೇಶವನ್ನು ರದ್ದುಪಡಿಸಿದೆ. ಅಂತೆಯೇ, ಪ್ರಕರಣದ ತನಿಖೆ ನಡೆಸಿರುವ, ವಿಶೇಷ ತನಿಖಾ ತಂಡ (ಎಸ್ಐಟಿ) 60 ದಿನಗಳ ಒಳಗಾಗಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಿತ್ತು. ಆದರೆ, 60 ದಿನ ಕಳೆದರೂ ಯಾವುದೇ (ಪ್ರಾಥಮಿಕ ಅಥವಾ ಅಂತಿಮ‌ ವರದಿ) ದೋಷಾರೋಪ ಪಟ್ಟಿಯನ್ನು ಸಲ್ಲಿಸಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ನಾವು ಕಾನೂನು ಬದ್ಧ (ಡಿಫಾಲ್ಟ್) ಜಾಮೀನು ಪಡೆಯಲು ಅರ್ಹರಾಗಿದ್ದು ಮಂಜೂರು ಮಾಡಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಕಳವು ಮಾಡಿ ಅವುಗಳನ್ನು ಪಶ್ಚಿಮ ಬಂಗಾಳದ ತನ್ನ ಸಹಚರ ರಾಬಿನ್ ಖಂಡೇಲ್ ವಾಲಾಗೆ ವರ್ಗಾವಣೆ ಮಾಡಿದ ಆರೋಪವನ್ನು ಶ್ರೀಕಿ ಎದುರಿಸುತ್ತಿದ್ದಾರೆ. ಶ್ರೀಕಿ ಮತ್ತು ರಾಬಿನ್‌ ಇಬ್ಬರೂ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾ ಕೈದಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶ್ರೀಕಿ ಪರ ಹೈಕೋರ್ಟ್ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ಹಾಗೂ ರಾಬಿನ್ ಖಂಡೇಲ್ ವಾಲಾ ಪರ ಎಸ್.ಸುನಿಲ್ ಕುಮಾರ್ ವಾದ ಮಂಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.