ನವದೆಹಲಿ: ‘ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು ನಾಯಕರ ನಡುವೆ ಹೊಂದಾಣಿಕೆ ಆಗಿದ್ದು ನಿಜ. ಈಗ ಆ ವಿಚಾರ ಅಪ್ರಸ್ತುತ. ಈಗ ಅದನ್ನು ಹೇಳಲು ಹೋದರೆ ರಾಜ್ಯ
ರಾಜಕಾರಣದಲ್ಲಿ ಬೆಂಕಿ ಹಚ್ಚಿದಂತೆ ಆಗುತ್ತದೆ’ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಹೇಳಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸಚಿವ ಸಂಪುಟ ವಿಸ್ತರಣೆ ಮಾಡದೆ ಹೋಗಿದ್ದು, ಕಾಂಗ್ರೆಸ್‌ನ ಸುಳ್ಳು ಆರೋಪಗಳಿಗೆ ಉತ್ತರ ಕೊಡದೆ ಮೌನವಾಗಿದ್ದು ಬಿಜೆಪಿ ಸೋಲಿಗೆ ಪ್ರಮುಖ ಕಾರಣ. ಹಾಗಾಗಿ, ಕಾಂಗ್ರೆಸ್ ಸುಳ್ಳಿನಲ್ಲಿ ಗೆದ್ದಿದೆ’ ಎಂದರು.
‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ವರಿಷ್ಠರ ಸಲಹೆ ಮೇರೆಗೆ ನಿರ್ಧಾರ ಮಾಡುತ್ತೇನೆ. ಪಕ್ಷದ ಕಾರ್ಯಕರ್ತನಾಗಿ ಸ್ಪರ್ಧೆ ಮಾಡಬೇಕಾಗುತ್ತದೆ. ಸ್ಪರ್ಧಿಸುತ್ತೇನೆ’ ಎಂದರು.
ಸಂಸದ ಡಿ.ಕೆ. ಸುರೇಶ್ ರಾಜಕೀಯ ವೈರಾಗ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸುರೇಶ್ ಅವರು ರಾಜ್ಯದ ರಾಜಕೀಯ ಕಡೆ ಒತ್ತು ಕೊಡಲು ಯೋಜಿಸಿರಬಹುದು. ಆದರೆ, ಇಷ್ಟು ಬೇಗ ರಾಜಕೀಯ ವೈರಾಗ್ಯ ಪಡೆಯುತ್ತಾರೆ ಎಂದು ಅನ್ನಿಸುವುದಿಲ್ಲ’ ಎಂದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇಷ್ಟು ವರ್ಷ ಜೆಡಿಎಸ್ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇವೆ. ಬಿಜೆಪಿ–ಜೆಡಿಎಸ್ ಹೋರಾಟದಿಂದ ಕಾಂಗ್ರೆಸ್‌ಗೆ ಲಾಭವಾಗಿದೆ. ಮೈತ್ರಿ ಕುರಿತು ನಮ್ಮ ನಾಯಕರು ತೀರ್ಮಾನ ತೆಗೆದು ಕೊಳ್ಳಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.