ADVERTISEMENT

ಕಾಂಗ್ರೆಸ್‌ನಿಂದ ಶಂಕಿತ ಉಗ್ರರ ಓಲೈಕೆ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 16:24 IST
Last Updated 12 ಏಪ್ರಿಲ್ 2024, 16:24 IST
<div class="paragraphs"><p>ಬಿಜೆಪಿ </p></div>

ಬಿಜೆಪಿ

   

ಬೆಂಗಳೂರು: ಭಯೋತ್ಪಾದನಾ ಪ್ರಕರಣದ ಶಂಕಿತರನ್ನೂ ಕಾಂಗ್ರೆಸ್‌ ಪಕ್ಷ ಓಲೈಕೆ ಮಾಡುತ್ತಿರುವುದು  ಕಳವಳಕಾರಿ ವಿಚಾರ ಎಂದು ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣಗೌಡ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಮತ್ತು ಸಚಿವರಿಗೆ ದೇಶ ಸುರಕ್ಷತೆ, ಭದ್ರತೆ ಮತ್ತು ನಾಗರಿಕ ಸಮಾಜದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಭಯೋತ್ಪಾದಕರು ನೆಲೆವೂರಲು ಅವಕಾಶ ನೀಡುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ADVERTISEMENT

ಭಯೋತ್ಪಾದಕ ಕೃತ್ಯದ ಶಂಕಿತರನ್ನು ನಿರಪರಾಧಿಗಳು ಎಂದು ಹೇಳುವುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಚಾಳಿ ಆಗಿದೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಬಿಜೆಪಿಗೂ ಸಂಬಂಧವಿದೆ ಎಂದು ಕೆಟ್ಟದಾಗಿ ಬಿಂಬಿಸಲು ಕಾಂಗ್ರೆಸ್‌ ಯತ್ನ ನಡೆಸಿತು. ಈ ಸ್ಫೋಟದ ತನಿಖೆಯ ದಾರಿ ತಪ್ಪಿಸಲು ಇನ್ನಿಲ್ಲದ ಪ್ರಯತ್ನ ನಡೆಸಿತು. ಉದ್ಯಮಗಳ ನಡುವಿನ ದ್ವೇಷದ ಘಟನೆ ಎಂಬುದಾಗಿ ಬಿಂಬಿಸಲೂ ಯತ್ನಿಸಿತು. ಆದರೆ, ಅವರ ಪ್ರಯತ್ನ ವಿಫಲವಾಯಿತು. ಆರೋಪಿಗಳಿಗೆ ಐಎಸ್‌ ಭಯೋತ್ಪಾದನಾ ಸಂಘಟನೆ ಜತೆ ಸಂಪರ್ಕ ಇರುವುದು ಬಯಲಾಗಿದೆ ಎಂದರು.

‘ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಆಧಾರ್‌ ಕಾರ್ಡ್‌ ಮತ್ತಿತರ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದರು ಎಂದೂ ತಿಳಿದು ಬಂದಿದೆ. ಕರ್ನಾಟಕ ಮತ್ತು ಬೆಂಗಳೂರನ್ನು ಭಯೋತ್ಪಾದನಾ ಚಟುವಟಿಕೆಯ ಕೇಂದ್ರ ತಾಣವಾಗಿ ಮಾಡಿಕೊಂಡಿದ್ದಾರೆ’ ಎಂದು ಅವರು ಆರೋಪಿಸಿದರು.

ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ‘ಇಂಡಿ’ ಒಕ್ಕೂಟ ಅಧಿಕಾರ ಇರುವ ರಾಜ್ಯಗಳಲ್ಲಿ ಇಂಥವರಿಗೆ ನೆಲೆ ನೀಡಲಾಗುತ್ತಿದೆ. ಇವರು ನಿರಾತಂಕವಾಗಿ ವಿವಿಧ ದಾಖಲೆ ಪತ್ರಗಳನ್ನೂ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ಲಕ್ಷಿಸಿದೆ. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಆದಾಗಲೂ ಭಯೋತ್ಪಾದಕ ಶಂಕಿತರ ಬಗ್ಗೆ ಮೃದು ಧೋರಣೆ ಅನುಸರಿಸಿತ್ತು ಎಂದು ಅಶ್ವತ್ಥನಾರಾಯಣ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.