ಬೆಂಗಳೂರು: ನೀವು ಮೊದಲ ಅಲೆಯ ತಬ್ಲಿಗಿಗಳ ರೀತಿ ಕೋವಿಡ್ ಹರಡುತ್ತಿದ್ದೀರಾ? ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಸೀನು, ಕೆಮ್ಮು, ನೆಗಡಿ, ತಲೆನೋವು, ದೇಹದ ಸ್ಥಿಮಿತ ಕಳೆದುಕೊಳ್ಳುವುದು ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣ. ಡಿಕೆಶಿ ಅವರೇ ನೀವು ಒಂದನೇ ಅಲೆಯ ತಬ್ಲಿಗಿಗಳ ರೀತಿ ಕೋವಿಡ್ ಹರಡುತ್ತಿದ್ದೀರಾ?’ ಎಂದು ಪ್ರಶ್ನಿಸಿದೆ.
ಪಾದಯಾತ್ರೆಯ ವೇಳೆ ಶಾಲಾ ಮಕ್ಕಳನ್ನು ಭೇಟಿ ಮಾಡಿದ್ದ ಡಿ.ಕೆ ಶಿವಕುಮಾರ್ ಅವರ ನಡೆಯನ್ನು ಬಿಜೆಪಿ ಖಂಡಿಸಿದೆ. ‘ಶಿವಕುಮಾರ್ ಅವರೇ, ನೀವು ಮೂರನೇ ಅಲೆಯ ಕೋವಿಡ್ ಸೂಪರ್ ಸ್ಪ್ರೆಡರ್. ಕಂಡವರ ಮಕ್ಕಳನ್ನು ಗುಂಡಿಗೆ ತಳ್ಳುವ ಹುಂಬತನ ಬಿಟ್ಟು ಬಿಡಿ. ಶಾಲೆಗಳನ್ನು ಕೊರೊನಾ ಹರಡುವ ಪ್ರಯೋಗಾಲಯವಾಗಿ ಬಳಸಿಕೊಂಡಿದ್ದಕ್ಕೆ ರಾಜ್ಯದ ಜನತೆಯ ಬಳಿ ಕ್ಷಮೆಯಾಚಿಸಿ’ ಎಂದು ಹೇಳಿದೆ.
ಡಿಕೆಶಿ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಂತ್ರ ಹೆಣೆಯುತ್ತಿರುವುದಾಗಿಯೂ ಬಿಜೆಪಿ ಆರೋಪಿಸಿದೆ. ‘ಹಳೆ ಮೈಸೂರು ಭಾಗದಲ್ಲಿ ಡಿಕೆಶಿ ಪ್ರಬಲವಾಗಬಾರದು, ತಮಗೆ ಪರ್ಯಾಯ ನಾಯಕತ್ವ ಎದುರಾಗಬಾರದು ಎಂಬುದು ಸಿದ್ದರಾಮಯ್ಯ ಆಶಯ. ಇದಕ್ಕಾಗಿ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲು ಸಿದ್ದರಾಮಯ್ಯ ಅವರು ತಂತ್ರ ಹೆಣೆಯುತ್ತಿದ್ದಾರೆ. ಡಿಕೆಶಿ ಅವರೇ, ಶತ್ರುವನ್ನು ಬಗಲಲ್ಲೇ ಇಟ್ಟುಕೊಂಡಿದ್ದೀರಿ, ಹುಷಾರ್,‘ ಎಂದು ಬಿಜೆಪಿ ಎಚ್ಚರಿಸಿದೆ!
‘ಡಿಕೆಶಿ ಅವರೇ ನೀವೆಷ್ಟೇ ಗೌರವದ ನಾಟಕವಾಡಿದರೂ ಸಿದ್ದರಾಮಯ್ಯ ನಿಮ್ಮನ್ನು ನಂಬುತ್ತಾರೆಯೇ? ನಿಮ್ಮಿಬ್ಬರ ಮಧ್ಯೆ ಇರುವ ಕಂದರ ದಾಟುವುದಕ್ಕೆ ಮೇಕೆಯಷ್ಟೇ ಅಲ್ಲ ಚಿರತೆಗೂ ಅಸಾಧ್ಯ’ ಎಂದು ಆಡಳಿತಾರೂಢ ಪಕ್ಷ ವ್ಯಂಗ್ಯವಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.