ADVERTISEMENT

ಸತ್ಯ ಹೊರಬರಲೇ ಬೇಕು, ತಯಾರಾಗಿರಿ: ‘ಸಿದ್ದು ನಿಜ ಕನಸು’ ಬಗ್ಗೆ ಬಿಜೆಪಿ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2023, 6:13 IST
Last Updated 10 ಜನವರಿ 2023, 6:13 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ‘ಸಿದ್ದು ನಿಜ ಕನಸು’ ಪುಸ್ತಕದ ವಿರುದ್ಧ ಕಾಂಗ್ರೆಸ್‌ ವಲಯದಲ್ಲಿ ವ್ಯಕ್ತವಾಗಿರುವ ಆಕ್ರೋಶದ ಬಗ್ಗೆ ಬಿಜೆಪಿ ಗೇಲಿ ಮಾಡಿದೆ.

ತಮ್ಮ ಕನಸುಗಳ ಪುಸ್ತಕ ಹೊತ್ತು ತರುತ್ತಿರುವವರ ಬಗ್ಗೆ ಸಿದ್ದರಾಮಯ್ಯ ಸಂತೋಷಪಡಬೇಕು ಎಂದು ಬಿಜೆಪಿ ಕುಹಕವಾಡಿದೆ.

ಬೆಂಗಳೂರಿನ ಪುರಭವನದಲ್ಲಿ ಸೋಮವಾರ ನಡೆಯಬೇಕಿದ್ದ ‘ಸಿದ್ದು ನಿಜ ಕನಸುಗಳು’ ಕೃತಿ ಬಿಡುಗಡೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಕಾಂಗ್ರೆಸ್‌ ಕಾರ್ಯಕರ್ತರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ರಾಜ್ಯ ಕುರುಬ ಸಂಘದ ಪದಾಧಿಕಾರಿಗಳು ಪುಸ್ತಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ಬಿಜೆಪಿ ಸರಣಿ ಟ್ವೀಟ್‌ ಮಾಡಿದ್ದು, ಸಿದ್ದರಾಮಯ್ಯ ಅವರನ್ನು ಟೀಕಿಸಿದೆ. ‘ದೇಶದಲ್ಲಿ ಅಸಹಿಷ್ಣುತೆ ಎಲ್ಲೆ ಮೀರಿದೆ ಎಂದು ಎಂಟು ವರ್ಷಗಳ ಹಿಂದೆ ಬೊಬ್ಬಿರಿಯುತ್ತಿದ್ದ ಗುಂಪು ಇಂದು ಸ್ವತಃ ಎಲ್ಲದರ ಬಗೆಗೂ ಅಸಹಿಷ್ಣುವಾಗಿದೆ. ಸಿದ್ದರಾಮಯ್ಯ ಕನಸಿನ ಬಗ್ಗೆ ಸ್ಪಷ್ಟ ಚಿತ್ರಣ ಇರುವ ಯಾರೋ ಏನೋ ಹೇಳಬೇಕು ಎಂದು ಹೊರಟಿದ್ದಾರೆ. ಅದಕ್ಕೆ ಕಾಂಗ್ರೆಸ್‌ ಏಕೆ ಇಷ್ಟು ಗಲಿಬಿಲಿಗೊಂಡಿದೆ? ಎಂದು ಪ್ರಶ್ನೆ ಮಾಡಿದೆ.

‘ಸಂವಿಧಾನದ ಏಕೈಕ ರಕ್ಷಕನಂತೆ ಸದಾಕಾಲ ಪೋಸು ಕೊಡುವ ಸಿದ್ದರಾಮಯ್ಯ ಅವರಿಗೆ ತಮ್ಮ ನಿಜಬಣ್ಣ ಬಯಲಾಗುವ ಕಡೆ ಸಂವಿಧಾನವೂ ಬೇಡ, ಹಕ್ಕುಗಳೂ ಲೆಕ್ಕಕ್ಕಿಲ್ಲ. ನೀವು ಯಾರನ್ನು ಬೇಕಾದರೂ ಏಕವಚನದಲ್ಲಿ ಕರೆಯಬಹುದು ಆದರೆ ನಿಮ್ಮನ್ನು ಎಲ್ಲರೂ ಗೌರವಿಸಬೇಕು ಎಂಬ ಧಿಮಾಕಿನಲ್ಲಿ ಇರುವ ತಮಗೆ ಇಂಥ ಸಂದರ್ಭಗಳಲ್ಲಿ ಕಸಿವಿಸಿ ಸಹಜ. ಈ ಹಿಂದೆ ಆಡಳಿತ ನಡೆಸಿದ್ದ ನಿಮ್ಮ ಆದರ್ಶ ಪುರುಷ ಟಿಪ್ಪು ಕೂಡ ತನ್ನ ಬಗ್ಗೆ ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಬಂಧಿಸುತ್ತಿದ್ದ. ಕಾನೂನು, ಖಡ್ಗವನ್ನು ತನಗೆ ಬೇಕಾದಾಗ ಮಾತ್ರ ಹೊರತೆಗೆಯುತ್ತೇನೆ ಎಂದರೆ ಆಗುವುದಿಲ್ಲ. ಕಾಂಗ್ರೆಸ್‌ ಇದನ್ನು ಮನಗಾಣಬೇಕು’ ಎಂದು ಬಿಜೆಪಿ ಸಲಹೆ ನೀಡಿದೆ.

‘ತಮ್ಮ ಕನಸುಗಳ ಪುಸ್ತಕ ಹೊತ್ತು ತರುತ್ತಿರುವವರ ಬಗ್ಗೆ ಸಿದ್ದರಾಮಯ್ಯ ಸಂತೋಷಪಡಬೇಕು. ಇಂಥದ್ದನ್ನು ವಿರೋಧಿಸುವ ನೆಲೆಯಲ್ಲಾದರೂ ನಾಲ್ಕು ಕಾಂಗ್ರೆಸ್ಸಿಗರು ಒಟ್ಟಾಗುತ್ತಾರೆ. ಇಲ್ಲದಿದ್ದರೆ ಪರಸ್ಪರರ ವಿರುದ್ಧ ಕತ್ತಿ ಮಸೆಯುವುದೇ ಕಾಂಗ್ರೆಸ್‌ ನಾಯಕರ ಪಾಲಿನ ನಿತ್ಯ ಕಾಯಕ’ ಎಂದು ಅದು ಹೇಳಿದೆ.

‘ಸೋನಿಯಾ ಗಾಂಧಿ ಅವರ ಕುರಿತ "ದ ರೆಡ್‌ ಸಾರಿ" ಎಂಬ ಪುಸ್ತಕವನ್ನು ಹತ್ತಿಕ್ಕಲು ಕಾಂಗ್ರೆಸ್‌ ಪಕ್ಷ ಸ್ಪೇನ್‌ವರೆಗೆ ಹೋಗಿತ್ತು. ಸತ್ಯವನ್ನು ಜನತೆಯಿಂದ ಮುಚ್ಚಿಡಲು ಕಾಂಗ್ರೆಸ್ ಯಾವ ಹಂತಕ್ಕೂ ಹೋಗುತ್ತದೆ ಎಂಬುದು ಈಗ ಟಿಪ್ಪುವಿನಂತೆ ಆಡುತ್ತಿರುವ ಸಿದ್ದರಾಮಯ್ಯ ವಿಚಾರದಲ್ಲಿ ಸ್ಪಷ್ಟವಾಗಿದೆ. ಆದರೆ ವಾಕ್‌ ಸ್ವಾತಂತ್ರ್ಯ ಹತ್ತಿಕ್ಕುವ ಎಲ್ಲಾ ಪ್ರಯತ್ನಗಳೂ ನಮ್ಮ ದೇಶದಲ್ಲಿ ತಾತ್ಕಾಲಿಕ ಎಂಬುದು ಪದೇಪದೇ ಸಾಬೀತಾಗಿದೆ. ಹಾಗೊಂದು ವೇಳೆ ನಿರಂತರ ಹಕ್ಕುಗಳ ದಮನ ಆಗಿದ್ದರೆ ಅದು ಕಾಂಗ್ರೆಸ್‌ ಆಡಳಿತದಲ್ಲಿ ಮಾತ್ರ. ಇದು ಪ್ರಜಾಪ್ರಭುತ್ವದ ನಿಜ ತತ್ತ್ವಗಳಿಗೆ ಬೆಲೆ ಇರುವ ಕಾಲ, ಸತ್ಯ ಹೊರಬರಲೇ ಬೇಕು. ತಯಾರಾಗಿರಿ’ ಎಂದು ಸಿದ್ದರಾಮಯ್ಯ ಅವರನ್ನು ಬಿಜೆಪಿ ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.