ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಕೆಲವೇ ಪ್ರಮುಖ ನಾಯಕರ ಸಮ್ಮುಖದಲ್ಲಿ ಮಾತನಾಡಿದ್ದನ್ನು ರೆಕಾರ್ಡ್ ಮಾಡಿ, ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಯಾರು? ಅವರ ಉದ್ದೇಶ ಏನಿರಬಹುದು ಎಂಬ ಚರ್ಚೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಮಧ್ಯೆ ಬಿರುಸುಗೊಂಡಿದೆ.
ವಿವಾದಿತ ಆಡಿಯೊರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸಂಚಲನ ಮೂಡಿಸಿ, ಬಿಜೆಪಿ ವರಿಷ್ಠರನ್ನು ಪೇಚಿಗೆ ಸಿಲುಕಿಸಿದೆ. ಕಾಂಗ್ರೆಸ್ ಇದನ್ನು ಅಸ್ತ್ರ ಮಾಡಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರಾಜೀನಾಮೆಗೂ ಆಗ್ರಹಿಸಿದೆ.
ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಣಗಳು ಆಂತರಿಕವಾಗಿ ಪರಸ್ಪರ ದೋಷಾರೋಪದಲ್ಲಿ ತೊಡಗಿವೆ. ಪಕ್ಷ–ಸಂಘದ ಆಂತರ್ಯದಲ್ಲಿ ಈ ಚರ್ಚೆ ಗುಂಪುಗಾರಿಕೆಯ ಸ್ವರೂಪವನ್ನೂ ಪಡೆದುಕೊಂಡಿದೆ. ಆಡಿಯೊ ಸೋರಿಕೆಗೆ ಸಂತೋಷ್‌ಶಿಷ್ಯರೇ ಕಾರಣ ಎಂದು ಬಿಎಸ್‌ವೈ ಗುಂಪು ದೂರಿದರೆ, ಸಂತೋಷ್ ಜತೆ ಗುರುತಿಸಿಕೊಂಡಿರುವವರು ಯಡಿಯೂರಪ್ಪ ಆಪ್ತರೇ ಅನರ್ಹ ಶಾಸಕರಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡಿರುವ ತಂತ್ರ ಎಂದು ವಾದಿಸಲು ಆರಂಭಿಸಿದ್ದಾರೆ.
ಯಡಿಯೂರಪ್ಪ ಬಣದ ವಾದವೇನು?: ‘ಅನರ್ಹ ಶಾಸಕರ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುವ ಮೊದಲೇ ಈ ಆಡಿಯೊ ಸೋರಿಕೆ ಮಾಡಲಾಗಿದೆ. ಸೋರಿಕೆ ಉದ್ದೇಶ ಇಷ್ಟೇ, ನ್ಯಾಯಾಲಯದಲ್ಲಿ ಇದನ್ನು ವಿಚಾರಣೆಗೆ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ಇದರಿಂದ ಯಡಿಯೂರಪ್ಪ ಅವರಿಗೆ ಹಿನ್ನಡೆ ಆಗುತ್ತದೆ. ಹೇಗಾದರೂ ಸರಿ ಬಿಎಸ್‌ವೈ ಸರ್ಕಾರ ಮುಂದುವರಿಯಬಾರದು ಎಂಬುದು ಸೋರಿಕೆ ಮಾಡಿದವರ ಉದ್ದೇಶ’ ಎಂಬುದು ಯಡಿಯೂರಪ್ಪ ಬಣದವರ ಅಭಿಪ್ರಾಯ.
‘ಬೆಂಗಳೂರಿನಲ್ಲಿ ಪಕ್ಷದ ಪ್ರಮುಖ ನಾಯಕರ ಸಭೆ ಸೇರಿದಂತೆ ಯಾವುದೇ ಸಭೆ ನಡೆಯುವಾಗಲೂ ಒಳಗೆ ಮೊಬೈಲ್ ಒಯ್ಯುವುದಿಲ್ಲ. ಅಷ್ಟು ಕಟ್ಟುನಿಟ್ಟು ಇರುತ್ತದೆ. ಆದರೆ, ಹುಬ್ಬಳ್ಳಿಯಲ್ಲಿ ಆ ಶಿಸ್ತುಪಾಲನೆ ಆಗಿಲ್ಲ. ನಾಯಕರ ಸಹಾಯಕರು ಯಡಿಯೂರಪ್ಪ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅಮಿತ್ ಶಾ ಮತ್ತು ಅನರ್ಹ ಶಾಸಕರ ಕುರಿತು ಮಾತನಾಡಿರುವ ನಿರ್ದಿಷ್ಟ ಭಾಗವನ್ನು ಮಾತ್ರ ಸೋರಿಕೆ ಮಾಡಲಾಗಿದೆ. ಯಡಿಯೂರಪ್ಪ ಅವರನ್ನು ಬಲಿಪಶು ಮಾಡುವುದೇ ಇದರ ಉದ್ದೇಶ’ ಎಂಬುದು ಈ ಬಣದ ವಾದ.
ಸಂತೋಷ್ ಬಣ ಹೇಳುವುದೇನು?: ‘ತಾವು ಅನರ್ಹರ ಪರ ಇರುವುದನ್ನು ಇನ್ನಷ್ಟು ಮನದಟ್ಟು ಮಾಡಲು ಯಡಿಯೂರಪ್ಪ ಸಭೆಯಲ್ಲಿ ಮಾತ ನಾಡಿದ್ದಾರೆ. ಅದನ್ನು ಅವರ ಕಡೆಯವರೇ ರೆಕಾರ್ಡ್ ಮಾಡಿಕೊಂಡು ಬಳಿಕ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ತಾವು ಅನರ್ಹ ಶಾಸಕರ ಪರ ಬದ್ಧರಾಗಿದ್ದೇವೆ ಎಂಬುದನ್ನು ತೋರಿಸಿಕೊಳ್ಳುವುದು ಪ್ರಮುಖ ಉದ್ದೇಶವಾಗಿತ್ತು’ ಎನ್ನುತ್ತಾರೆ ಸಂತೋಷ್ ಆಪ್ತರು.
‘ಮುಖ್ಯಮಂತ್ರಿ ಆಪ್ತ ವಲಯದಲ್ಲಿರು ವವರೇ ಮಾಡಿರಬಹುದು. ಆರಂಭದಲ್ಲಿ ಇದು ರಾಜಕೀಯವಾಗಿ ಲಾಭ ಆಗ ಬಹುದು ಎಂದು ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಅಸ್ತ್ರವಾಗಿ ಪರಿಣಮಿಸಿ, ಸುಪ್ರೀಂಕೋರ್ಟ್‌ನಲ್ಲಿ ಇದನ್ನು ಸಾಕ್ಷ್ಯ ವಾಗಿ ಪರಿಗಣಿಸಲು ಕೋರಿದ ಬಳಿಕ ಅವರಿಗೆ ಬಿಸಿ ತಟ್ಟಿದೆ’ ಎಂದು
ಪ್ರತಿಪಾದಿಸುತ್ತಿದ್ದಾರೆ.
ಆರ್‌ಎಸ್‌ಎಸ್‌ನಿಂದ ಮಾಹಿತಿ ಸಂಗ್ರಹ
ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳ ಕಿತ್ತಾಟವನ್ನು ಗಂಭೀರವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಆ ಕುರಿತು ಸಂಪೂರ್ಣ ಮಾಹಿತಿ ಪಡೆಯಲಾರಂಭಿಸಿದ್ದಾರೆ.
ಪಕ್ಷದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಿಷ್ಠರ ಬಣಗಳೆಂದು ಸೃಷ್ಟಿಯಾಗಿರುವುದು,ಆಡಿಯೊ ಸೋರಿಕೆ, ಬಿಜೆಪಿ ಕಚೇರಿಯಿಂದ 11 ಮಂದಿ ಸಿಬ್ಬಂದಿಯನ್ನು ತೆಗೆದು ಹಾಕಿರುವುದು, ಅದರ ಹಿನ್ನೆಲೆ ಏನು ಎಂಬ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೆ, ಪಕ್ಷದಕೆಲವು ಪ್ರಮುಖ ವ್ಯಕ್ತಿಗಳ ವಿರುದ್ಧ ಕೇಳಿ ಬಂದಿರುವ ‘ದೂರು’ಗಳ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕುವ ಕೆಲಸವೂ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.