ಬೆಂಗಳೂರು: ಕಾಂಗ್ರೆಸ್ ನಾಯಕರು ಹಾಗೂ ಆ ಪಕ್ಷದ ಶಾಸಕರ ಮಧ್ಯೆ ನಂಬಿಕೆ, ವಿಶ್ವಾಸ ಕಳೆದುಹೋಗಿದೆ. ತಮ್ಮ ಪಕ್ಷದವರ ಬಗ್ಗೆಆತಂಕ ಇರುವ ಕಾರಣಕ್ಕಾಗಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಿಮ್ಮ ಶಾಸಕರಿಗೆ ನಿಮ್ಮ ಪಕ್ಷದ ಬಗ್ಗೆ, ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಇದ್ದರೆ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದವರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದು ಏಕೆ’ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
* ಇದನ್ನೂ ಓದಿ:ರಾಷ್ಟ್ರಪತಿ ಆಡಳಿತ ಹೇರಬಹುದೇ ?
‘ಕಾಂಗ್ರೆಸ್, ಜೆಡಿಎಸ್‌ನ ನಾಯಕರ ಮನೆ ಹೊತ್ತಿ ಉರಿಯುತ್ತಿದೆ. ಅದಕ್ಕೆ ಬಿಜೆಪಿಯವರು ಯಾವ ರೀತಿ ಕಾರಣರಾಗುತ್ತಾರೆ ಎಂಬ ಬಗ್ಗೆ ರಾಜ್ಯದ ಜನರಿಗೆ ಆ ಪಕ್ಷದ ನಾಯಕರು ಉತ್ತರ ನೀಡಬೇಕು. 100ಕ್ಕಿಂತ ಹೆಚ್ಚು ಸ್ಥಾನ ಗೆದ್ದರೂ ವಿರೋಧ ಪಕ್ಷದಲ್ಲಿ ಕುಳಿತುಕೊಂಡಿದ್ದೇವೆ. ಇದು ನಮ್ಮ ಸಹನೆಯನ್ನು ತೋರಿಸುತ್ತದೆಯಲ್ಲದೇ ಅಧಿಕಾರ ದಾಹ ಇಲ್ಲದಿರುವುದನ್ನು ಬಿಂಬಿಸುತ್ತದೆ’ ಎಂದು ಪ್ರತಿಪಾದಿಸಿದರು.
‘ಆಪರೇಷನ್ ಸಂಸ್ಕೃತಿ ಆರಂಭವಾಗಿದ್ದೇ 2008ರಲ್ಲಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ, 1967ರಲ್ಲಿ ಗಯಾರಾಮ್ ಎಂಬ ಯುನೈಟೆಡ್ ಫ್ರಂಟ್ ಶಾಸಕ 15 ದಿನಗಳಲ್ಲಿ ಮೂರು ಬಾರಿ ಕಾಂಗ್ರೆಸ್‌ಗೆ ಹೋಗಿ ಬಂದು, ನಾಲ್ಕನೇ ಬಾರಿ ಆ ಪಕ್ಷ ಸೇರಿಕೊಂಡರು. ಆಗ ಗಯಾರಾಮ್ ಆಯಾರಾಮ್ ಆಗಿದ್ದಾರೆ ಎಂದು ಹೇಳಿದ್ದು ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿ’ ಎಂದು ಕುಟುಕಿದರು.
‘ನಿಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. ನೀವು ಕಿರುಚಾಡುತ್ತಿರುವುದನ್ನು ನೋಡಿದರೆ ಕೈಲಾಗದವರು ಮೈಪರಚಿಕೊಂಡರಂತೆ ಎಂಬ ಮಾತು ನೆನಪಾಗುತ್ತದೆ’ ಎಂದು ಅವರು ಹೇಳಿದರು.
* ಇವನ್ನೂನ್ನೂಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.