ADVERTISEMENT

ಕಾಸಿಗಾಗಿ ಜಮೀನು: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 16:17 IST
Last Updated 18 ಜೂನ್ 2024, 16:17 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಹೆಚ್ಚುವರಿ ಹೊರೆ ನಿಭಾಯಿಸಲು ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಜಮೀನುಗಳನ್ನು ಬಳಸುವ ರಾಜ್ಯ ಸರ್ಕಾರದ ಚಿಂತನೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ರಾಜ್ಯ ಸರ್ಕಾರ ದಿವಾಳಿಯಾಗಿರುವ ಕಾರಣದಿಂದ ಈ ಹೆಜ್ಜೆ ಇರಿಸಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

‘ಬಜೆಟ್‌ ಮತ್ತು ಆರ್ಥಿಕತೆಯ ಬಗ್ಗೆ ಭಾರಿ ಜ್ಞಾನವಿದೆ ಎಂದು ಜಂಭ ಕೊಚ್ಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಗತಿಶೀಲ ರಾಜ್ಯವನ್ನು ದುಸ್ಥಿತಿಗೆ ತಂದು ನಿಲ್ಲಿಸಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಟೀಕಿಸಿದ್ದಾರೆ.

ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಅಂತಹ ಪ್ರಸ್ತಾವವನ್ನೇ ಅಲ್ಲಗಳೆದಿದ್ದಾರೆ.

ADVERTISEMENT

‘ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿವಾಳಿಯಾಗಿರುವ ತಮ್ಮ ಸರ್ಕಾರ ಉಳಿಸಿಕೊಳ್ಳಲು 25000 ಎಕರೆ ಸರ್ಕಾರಿ ಜಮೀನು ಬಳಸಿಕೊಳ್ಳಲು ಹೊರಟಿದ್ದಾರೆ. ಮುಂದೊಂದು ದಿನ ವಿಧಾನಸೌಧವನ್ನೇ ಅಡಮಾನ ಇಟ್ಟರೂ ಆಶ್ಚರ್ಯವಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಟೀಕಿಸಿದ್ದಾರೆ. ತಮ್ಮ ‘ಎಕ್ಸ್‌’ ಖಾತೆಯಲ್ಲಿ ‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಕಾಸಿಗೆ 25 ಸಾವಿರ ಎಕರೆ ಆಸರೆ’ ವರದಿಯ ತುಣುಕನ್ನು ಹಂಚಿಕೊಂಡಿರುವ ಅವರು ‘15 ಬಜೆಟ್‌ ಮಂಡಿಸಿರುವ ಸ್ವಯಂಘೋಷಿತ ಆರ್ಥಿಕ ತಜ್ಞರಾದ ನಿಮಗೆ ಈ ಬಾರಿಯ ಬಜೆಟ್‌ ಮಂಡಿಸುವಾಗ ಸರ್ಕಾರದ ಆದಾಯ ಮತ್ತು ವೆಚ್ಚದ ಬಗ್ಗೆ ಜ್ಞಾನ ಇರಲಿಲ್ಲವೆ’ ಎಂದು ಕೇಳಿದ್ದಾರೆ. ಬಜೆಟ್‌ ಮಂಡಿಸಿದ ನಾಲ್ಕೇ ತಿಂಗಳಲ್ಲಿ ಪೆಟ್ರೋಲ್‌ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಈಗ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಸರ್ಕಾರಿ ಜಮೀನು ಬಳಸಿಕೊಳ್ಳಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

‘ಪ್ರಸ್ತಾವದ ಹಿಂದೆ ದೊಡ್ಡ ಸಂಚು’

‘ಸಂಪನ್ಮೂಲ ಸಂಗ್ರಹಕ್ಕಾಗಿ ಸರ್ಕಾರಿ ಜಮೀನುಗಳ ಮಾರಾಟ ಅಡಮಾನ ಇರಿಸುವ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಪ್ರಸ್ತಾವದ ಹಿಂದೆ ದೊಡ್ಡ ಸಂಚು ಇದೆ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಆರೋಪಿಸಿದರು. ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು ‘ಭವಿಷ್ಯದ ಯೋಜನೆಗಳಿಗಾಗಿ ಸರ್ಕಾರಿ ಜಮೀನುಗಳನ್ನು ಸಂರಕ್ಷಿಸಿಡಲಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರದಲ್ಲಿನ ಬಹುತೇಕ ಸಚಿವರಿಗೆ ರಿಯಲ್‌ ಎಸ್ಟೇಟ್‌ ಉದ್ಯಮದ ನಂಟು ಇದೆ. ಅವರಿಗೆ ಜಮೀನು ಕೊಡುವುದಕ್ಕಾಗಿ ಯೋಜನೆ ರೂಪಿಸುತ್ತಿರುವ ಶಂಕೆ ಇದೆ’ ಎಂದರು. ‘ಸರ್ಕಾರದ ಖಜಾನೆ ಭರ್ತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಿರುತ್ತಾರೆ. ಹಾಗಿದ್ದ ಮೇಲೆ ಬೆಲೆ ಏರಿಕೆ ಸರ್ಕಾರಿ ಆಸ್ತಿಗಳ ಮಾರಾಟದ ಅಗತ್ಯ ಏನಿದೆ’ ಎಂದು ಪ್ರಶ್ನಿಸಿದರು.

‘ಅಡಮಾನದ ಪ್ರಸ್ತಾವವೇ ಇಲ್ಲ’

‘ಸರ್ಕಾರಿ ಜಮೀನುಗಳನ್ನು ಅಡಮಾನ ಇರಿಸುವ ಯಾವುದೇ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿಲ್ಲ. ಆಸ್ತಿಗಳ ರಕ್ಷಣೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ಸರ್ಕಾರಿ ಜಮೀನುಗಳನ್ನು ಬಳಸಿಕೊಂಡು ಸಂಪನ್ಮೂಲ ಸಂಗ್ರಹಿಸುವ ಪ್ರಸ್ತಾವದ ಕುರಿತು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು ‘ಸರ್ಕಾರಿ ಜಮೀನುಗಳು ಎಷ್ಟಿವೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಿ ರಕ್ಷಿಸುವುದು ನಮ್ಮ ಉದ್ದೇಶ. ಅಡಮಾನ ಇರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು. ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.