ADVERTISEMENT

ಇಂದು ಬಿಜೆಪಿಯಿಂದ ಸೈಕಲ್ ಜಾಥಾ: ವಿಜಯೇಂದ್ರ

ಬೆಲೆ ಏರಿಕೆ ವಿರೋಧಿಸಿ 224 ಕ್ಷೇತ್ರಗಳಲ್ಲೂ ಹೋರಾಟ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:27 IST
Last Updated 19 ಜೂನ್ 2024, 15:27 IST
<div class="paragraphs"><p>ಬಿ. ವೈ. ವಿಜಯೇಂದ್ರ</p></div>

ಬಿ. ವೈ. ವಿಜಯೇಂದ್ರ

   

ಬೆಂಗಳೂರು: ಪೆಟ್ರೋಲ್‌– ಡಿಸೇಲ್‌ ಮಾರಾಟ ತೆರಿಗೆ ಏರಿಕೆ ಮತ್ತು ಇತರ ಬೆಲೆ ಏರಿಕೆ ನೀತಿ ವಿರೋಧಿಸಿ ಗುರುವಾರ ಬಿಜೆಪಿ ಕಚೇರಿ ಜಗನ್ನಾಥ ಭವನದಿಂದ ವಿಧಾನಸೌಧದವರೆಗೆ ಸೈಕಲ್‌ ಜಾಥಾ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

‘ಎಕ್ಸ್‌’ ಮೂಲಕ ಈ ವಿಷಯ ತಿಳಿಸಿರುವ ಅವರು, ಸರ್ಕಾರದ ಜನವಿರೋಧಿ ನೀತಿ ಖಂಡಿಸಲು ಸಾರ್ವಜನಿಕರೂ ಸೈಕಲ್‌ ಜಾಥಾದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿರುವ ವಿಧಾನಪರಿಷತ್ ಸದಸ್ಯ ಎನ್‌.ರವಿಕುಮಾರ್‌, ಪೆಟ್ರೋಲ್‌– ಡಿಸೇಲ್‌ ಬೆಲೆ ಏರಿಕೆ ವಿರೋಧಿಸಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಹೋರಾಟ ನಡೆಸಲಾಗುತ್ತಿದೆ. ರಸ್ತೆ ತಡೆ ಮತ್ತು ಸೈಕಲ್‌ ಜಾಥಾ ನಡೆಸಲಾಗುವುದು ಎಂದರು.

ವಿವಿಧ ರೀತಿಯ ತೆರಿಗೆ, ಶುಲ್ಕಗಳ ದರವನ್ನು ಏರಿಸಿದೆ. ಇನ್ನು ಮುಂದೆ ಬಸ್‌ ಪ್ರಯಾಣದ ದರ ಮತ್ತು ನೀರಿನ ದರವನ್ನೂ ಹೆಚ್ಚಿಸಲು ಮುಂದಾಗಿದೆ. ಈ ಮೂಲಕ ಕಾಂಗ್ರೆಸ್‌ ರಾಜ್ಯದ ಜನರ ಜೀವನವನ್ನೇ ದುಸ್ತರವಾಗಿಸಿದೆ ಎಂದು ಅವರು ಟೀಕಿಸಿದರು.

ಆಸ್ತಿ ತೆರಿಗೆಯನ್ನು ಶೇ 20ರಿಂದ ಶೇ 120ರವರೆಗೆ ಹೆಚ್ಚಿಸಲಾಗಿದೆ. ಮೋಟಾರು ವಾಹನ ತೆರಿಗೆಯನ್ನು ಶೇ 40 ರಿಂದ ಶೇ 80ರಷ್ಟು ಹೆಚ್ಚಿಸಲಾಗಿದೆ. ಮದ್ಯದ ಮೇಲಿನ ತೆರಿಗೆ ಶೇ 20ರಿಂದ ಶೇ 400ರವರೆಗೆ ಹೆಚ್ಚಿಸಲಾಗಿದೆ. ಹೆಣ್ಣು ಮಕ್ಕಳಿಗೆ ಬಸ್‌ ಪ್ರಯಾಣದ ದರ ಉಚಿತ ಎಂದು ಹೇಳುತ್ತಲೇ ಪುರುಷರ ಬಸ್‌ ಪ್ರಯಾಣ ದರವನ್ನೂ ಏರಿಸಿದ್ದಾರೆ ಎಂದು ಅವರು ವಿವರಿಸಿದರು.

ವಿದ್ಯುತ್‌ ಶುಲ್ಕ ಹೆಚ್ಚಿಸಿದ್ದಾರೆ. ಇದರಿಂದ ಕೈಗಾರಿಕಾ ಉತ್ಪನ್ನಗಳ ದರ ಏರಿಕೆ ಆಗಿದೆ. ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನವನ್ನು ನಿಲ್ಲಿಸಿದ್ದಾರೆ. ಪ್ರತಿ ಲೀಟರ್‌ ಹಾಲಿನ ದರ ಏರಿಸಿದ್ದಾರೆ. ಇದರಿಂದ ಹಾಲು, ಮೊಸರು, ತುಪ್ಪ ಮತ್ತಿತರ ಉತ್ಪನ್ನಗಳ ದರವೂ ಏರಿಕೆಯಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.