ಬೆಂಗಳೂರು: ಶಿವಮೊಗ್ಗ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಹಿರಿಯ ನಾಯಕರೇ ಬಂಡಾಯದ ಕೂಗು ಎಬ್ಬಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಬಂಡಾಯ ಎದ್ದಿದ್ದರು. ತಮ್ಮ ಪುತ್ರ ಕೆ.ಇ. ಕಾಂತೇಶ್‌ಗೆ ಹಾವೇರಿಯಿಂದ ಟಿಕೆಟ್ ನೀಡದೇ ಇದ್ದರೆ, ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ವಿರುದ್ಧ ಶಿವಮೊಗ್ಗದಿಂದ ಕಣಕ್ಕೆ ಇಳಿಯಬೇಕಾಗುತ್ತದೆ ಎಂದೂ ಬುಧವಾರ ಬೆಳಿಗ್ಗೆಯಷ್ಟೇ ಎಚ್ಚರಿಕೆ ನೀಡಿದ್ದರು.
ಪಟ್ಟಿ ಪ್ರಕಟವಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ಕುಟುಂಬ ಸೇರಿದಂತೆ ಪ್ರಖರ ಹಿಂದುತ್ವವಾದಿಗಳಾದ ಸಿ.ಟಿ. ರವಿ, ನಳಿನ್‌ಕುಮಾರ್ ಕಟೀಲ್, ಪ್ರತಾಪ ಸಿಂಹ ಅವರಿಗೆ ಟಿಕೆಟ್ ತಪ್ಪಲು ಯಡಿಯೂರಪ್ಪ ಕಾರಣ. ಪಟ್ಟಿ ಪ್ರಕಟವಾದ ಬಳಿಕ ಕರೆ ಮಾಡಿದ್ದ ಪಕ್ಷದ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್, ಕಾಂತೇಶ್‌ಗೆ ವಿಧಾನ ಪರಿಷತ್ತಿನ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ನಾನು ಪ್ರತಿಕ್ರಿಯೆ ನೀಡಿಲ್ಲ. ಶುಕ್ರವಾರ (ಮಾ.15) ಆಪ್ತರ ಸಭೆ ಕರೆದಿದ್ದು, ಮುಂದಿನ ನಿರ್ಧಾರವನ್ನು ಅಲ್ಲಿಯೇ ತಿಳಿಸುವೆ’ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅಥವಾ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಟ್ಟರೆ ಬಂಡಾಯದ ಬಾವುಟ ಹಾರಿಸುವುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಪಟ್ಟಿ ಪ್ರಕಟವಾಗುವ ಮೊದಲು ಅಬ್ಬರಿಸಿದ್ದರು. ಹೆಸರು ಘೋಷಣೆ ಬಳಿಕ, ಅವರು ಮೌನಕ್ಕೆ ಶರಣಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.