ಬೆಳಗಾವಿ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಬೆಳೆ ಸಾಲ ಮನ್ನಾಕ್ಕೆ ಬಿಜೆಪಿ ನಾಯಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಗುರುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ವಸೂಲಾಗದ ಸಾಲವನ್ನು ಒಂದೇ ಹಂತದಲ್ಲಿ ಇತ್ಯರ್ಥಪಡಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಆಸಕ್ತಿ ಹೊಂದಿದ್ದವು. ಆದರೆ, ಹಲವು ಸುತ್ತಿನ ಮಾತುಕತೆ ನಡೆಸಿದರೂ ಒಪ್ಪಿಗೆ ನೀಡಿಲ್ಲ. ಇದರ ಹಿಂದಿರುವವರು ಯಾರು ಎಂಬುದು ಗೊತ್ತಿದೆ’ ಎಂದರು.
‘ಸಾಲ ಮನ್ನಾಕ್ಕೆ ಈ ವರ್ಷ ₹6,500 ಕೋಟಿ ತೆಗೆದಿಟ್ಟಿದ್ದೇನೆ. ಈ ಹಣ ಬಳಸಿ 17 ಲಕ್ಷ ಖಾತೆದಾರರ ತಲಾ ₹50 ಸಾವಿರ ಮೊತ್ತವನ್ನು ಈ ವರ್ಷ ಮನ್ನಾ ಮಾಡುತ್ತೇನೆ. ಮುಂಜಾಗ್ರತಾ ಕ್ರಮವಾಗಿ ನಾಲ್ಕು ಕಂತುಗಳಲ್ಲಿ ತುಂಬುವುದಾಗಿ ಪ್ರಕಟಿಸಿದ್ದೇನೆ. ಆದರೆ, ಅಷ್ಟು ಸಮಯ ಕಾಯುವುದಿಲ್ಲ. ಮುಂದಿನ ಬಜೆಟ್‌ನಲ್ಲಿ ಸಾಲ ಮನ್ನಾದ ಉಳಿಕೆ ಮೊತ್ತವನ್ನು ತೆಗೆದಿರಿಸುತ್ತೇನೆ. ಬಿಜೆಪಿಯವರಿಗೆ ಆರು ತಿಂಗಳು ಕಾಯುವ ವ್ಯವಧಾನ ಇರಲಿ’ ಎಂದು ಅವರು ಹೇಳಿದರು.
‘ನಾನು ಹಗುರವಾಗಿ ಮಾತಾಡಿದ್ದೇನೆ ಎನ್ನುವುದು ಬಿಜೆಪಿ ಆರೋಪ. ಸರ್ಕಾರದ ಬಗ್ಗೆ ಇಷ್ಟು ದಿನ ಹಗುರವಾಗಿ ಮಾತನಾಡಿದವರು ಯಡಿಯೂರಪ್ಪ. ಹಾಗೆ ನೋಡಿದರೆ, ನಾವೇ ಅವರ ವಿರುದ್ಧ ಧರಣಿ ಮಾಡಬೇಕಿತ್ತು’ ಎಂದು ಕಿಡಿಕಾರಿದರು.
‘ಸಾಲಮನ್ನಾ ಕುರಿತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ನಾನು ಮಾತನಾಡುತ್ತಿದ್ದೆ. ಆಗ ಬಿಜೆಪಿಯವರು ಧರಣಿ ಶುರು ಮಾಡಿದರು. ಆದರೆ, ನನ್ನ ಉತ್ತರ ಕೇಳಲು ಬಿಜೆಪಿಯವರಿಗೆ ವ್ಯವಧಾನವೇ ಇರಲಿಲ್ಲ’ ಎಂದು ಬಿಜೆಪಿ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು.
‘ನೀರಾವರಿ ಯೋಜನೆಗಳನ್ನು ಸರ್ಕಾರ ಸ್ಥಗಿತ ಮಾಡಿಲ್ಲ. ನೀರಾವರಿ ಯೋಜನೆಗಳಿಗೂ ಸಾಲ ಮನ್ನಾಕ್ಕೂ ಸಂಬಂಧ ಇಲ್ಲ. ಸಾಲಮನ್ನಾ ಮಾಡಲು ಪ್ರತ್ಯೇಕ ಹಣ ಮೀಸಲಿರಿಸಿದ್ದೇವೆ’ ಎಂದರು.
‘ದೆಹಲಿಯಲ್ಲಿ 2–3 ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುರುಸೊತ್ತು ಇಲ್ಲ. ಅವರಿಗೆ ವಿದೇಶ ಪ್ರವಾಸದಲ್ಲಿ ಸಾಕಷ್ಟು ಕೆಲಸಗಳು ಇವೆ. ಉಳಿದ ನಾಯಕರು ರೈತರನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಅವರ ಕಾಳಜಿ ಯಾವುದು ಎಂಬುದು ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.
ಕೇಂದ್ರದಿಂದ ನವೆಂಬರ್ ಅಂತ್ಯದವರೆಗೆ ₹3 ಸಾವಿರ ಕೋಟಿ ಜಿಎಸ್‌ಟಿ ಪಾಲು ಬಾಕಿ ಇದೆ. ಅದು ಬಂದರೆ ಆರ್ಥಿಕ ಸ್ಥಿತಿ ಇನ್ನಷ್ಟು ಸುಧಾರಣೆಯಾಗಲಿದೆ ಎಂದೂ ಅವರು ಹೇಳಿದರು.
**
₹46,753 ಕೋಟಿ:ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಮೊತ್ತ
₹29,190 ಕೋಟಿ:ಉತ್ತರ ಕರ್ನಾಟಕದ 12 ಜಿಲ್ಲೆಗಳ ಸಾಲ ಮನ್ನಾ
₹3,781 ಕೋಟಿ:ಮಧ್ಯ ಕರ್ನಾಟಕದ ಸಾಲ ಮನ್ನಾ
₹1,507 ಕೋಟಿ:ಕರಾವಳಿ ಕರ್ನಾಟಕದ ಸಾಲ ಮನ್ನಾ
₹12,073 ಕೋಟಿ:ದಕ್ಷಿಣ ಕರ್ನಾಟಕದ ಸಾಲ ಮನ್ನಾ
**
2018–19ನೇ ಸಾಲಿನಲ್ಲಿ ಸಹಕಾರ ಬ್ಯಾಂಕ್‌ಗಳು ರೈತರಿಗೆ ₹11 ಸಾವಿರ ಕೋಟಿ ಸಾಲ ನೀಡಿವೆ.
–ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.